ಸಂಕ್ರಾಂತಿ ನಂತರ ನೂತನ ಗೃಹ ಪ್ರವೇಶಿಸಲಿರುವ ಸಿದ್ದರಾಮಯ್ಯ..!

ಬೆಂಗಳೂರು

      ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಂಕ್ರಾಂತಿಯ ನಂತರ ಗೃಹ ಪ್ರವೇಶ ಮಾಡಲಿದ್ದಾರೆ.
ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ನಂತರವೂ ಇಪ್ಪತ್ತು ತಿಂಗಳ ಕಾಲ ಹೈಗ್ರೌಂಡ್ಸ್‌ನ ಕಾವೇರಿ ಬಂಗಲೆಯಲ್ಲಿ ವಾಸವಿದ್ದ ಸಿದ್ಧರಾಮಯ್ಯ ಅವರು ಇದೀಗ ಸಂಕ್ರಾಂತಿಯ ನಂತರ ಕುಮಾರಪಾರ್ಕ್‌ನಲ್ಲಿರುವ ಸರ್ಕಾರಿ ಬಂಗಲೆಗೆ ಹೋಗಲಿದ್ದಾರೆ.

      ಈ ಹಿಂದೆ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ತಮಗೆ ಲಕ್ಕು ತಂದುಕೊಟ್ಟ ಕುಮಾರಪಾರ್ಕ್‌ನ ರೈಲ್ವೇ ಮಾರ್ಗದ ಪಕ್ಕದ ಬಂಗಲೆಗೆ ಹೋಗಲು ಸಿದ್ಧರಾಮಯ್ಯ ಉತ್ಸುಕರಾಗಿದ್ದಾರೆ ಎಂದು ಮೂಲಗಳು ಹೇಳಿವೆ.ಇದಕ್ಕೂ ಮುನ್ನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾವೇರಿ ಬಂಗಲೆಯನ್ನು ತೆರವುಗೊಳಿಸುವಂತೆ ಸಿದ್ಧರಾಮಯ್ಯ ಅವರಿಗೆ ನೋಟೀಸ್ ನೀಡಿತ್ತು.

      ಆದರೆ ತಮಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಸಿದ್ಧರಾಮಯ್ಯ ಅವರು ಕೇಳಿದ ಹಿನ್ನೆಲೆಯಲ್ಲಿ ಇನ್ನಷ್ಟು ಕಾಲ ಕಾದು ನೋಡಲು ಸರ್ಕಾರ ಒಪ್ಪಿಗೆ ನೀಡಿತ್ತು.ಇದಾದ ನಂತರ ಕಾವೇರಿ ಬಂಗಲೆಯನ್ನು ತೆರವುಗೊಳಿಸಿದರೆ ಮುಂದೆ ತಾವು ಎಲ್ಲಿ ಹೋಗಬೇಕು?ಎಂದು ಯೋಚಿಸತೊಡಗಿದ ಸಿದ್ಧರಾಮಯ್ಯ ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ಸ್ವಂತ ನಿವಾಸಕ್ಕೆ ತೆರಳಲು ಯೋಚಿಸಿದ್ದರು.

     ಆದರೆ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಅವರಿಗೆ ಸರ್ಕಾರಿ ಬಂಗಲೆಯನ್ನು ನೀಡುವುದು ಸಂಪ್ರದಾಯವೇ ಆಗಿದ್ದು ಅದರ ಪ್ರಕಾರ ಸಿದ್ದರಾಮಯ್ಯ ಅವರು ಕುಮಾರಪಾರ್ಕ್‌ನ ರೈಲ್ವೇ ಮಾರ್ಗದ ಪಕ್ಕದಲ್ಲಿರುವ ಬಂಗಲೆಯನ್ನು ಆಯ್ಕೆ ಮಾಡಿದ್ದಾರೆ.

    ಈ ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ತಾವು ವಾಸವಿದ್ದ ರೈಲ್ವೇ ಮಾರ್ಗದ ಪಕ್ಕದ ನಿವಾಸವನ್ನೇ ಅವರು ಆಯ್ಕೆ ಮಾಡಿಕೊಂಡಿದ್ದು ಈ ಆಯ್ಕೆ ಸಂದರ್ಭದಲಿ ಎದುರಾದ ಸಣ್ಣ ಗೊಂದಲವೊಂದು ಇದೀಗ ಪರಿಹಾರ ಆಗಿದೆ.ಉನ್ನತ ಮೂಲಗಳ ಪ್ರಕಾರ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ.ರೇವಣ್ಣ ಅವರು ವಾಸವಿದ್ದ ಕುಮಾರಪಾರ್ಕ್‌ನ ಈ ಬಂಗಲೆಯನ್ನು ಬಿಜೆಪಿ ಸರ್ಕಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಂಜೂರು ಮಾಡಿತ್ತು.

      ಆದರೆ ತಮಗೆ ಲಕ್ಕು ತಂದ ಈ ಬಂಗಲೆಗೇ ಹೋಗಲು ಸಿದ್ಧರಾಮಯ್ಯ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆ ಬಂಗಲೆಯನ್ನು ಇದೀಗ ಸಿದ್ಧರಾಮಯ್ಯ ಅವರಿಗೆ ಮಂಜೂರು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.ರೇವಣ್ಣ ಅವರು ಕೂಡಾ ಈಗ ಬಂಗಲೆ ತೆರವು ಮಾಡಿದ್ದು ಇದರಿಂದಾಗಿ ಆ ಮನೆಗೆ ಸುಣ್ಣ-ಬಣ್ಣ ಮಾಡಿ,ಪೀಠೋಪಕರಣಗಳನ್ನು ಸಿದ್ದಪಡಿಸಿ ನೀಡಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು ಸಂಕ್ರಾಂತಿಯ ವೇಳೆಗೆ ಸಿದ್ಧರಾಮಯ್ಯ ಅವರಿಗೆ ಈ ಮನೆಯನ್ನು ಒಪ್ಪಿಸಲಿದೆ.ಸಂಕ್ರಾಂತಿಯವರೆಗೆ ಧನುರ್ಮಾಸ ಇರಲಿದ್ದು ತದ ನಂತರ ಸಿದ್ಧರಾಮಯ್ಯ ಅವರು ಈ ಮನೆಗೆ ಹೋಗಲಿದ್ದಾರೆ.ಈ ಮಧ್ಯೆ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿರುವ ತಮಗೆ ಹೊಸ ಫಾರ್ಚೂನರ್ ಕಾರು ಬೇಕು.ಮತ್ತಿತರ ಸೌಲಭ್ಯಗಳು ಬೇಕು ಎಂದು ಸಿದ್ಧರಾಮಯ್ಯ ಹೇಳಿದ್ದರೂ ಹೊಸ ಕಾರು ಖರೀದಿಸಿ ಕೊಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ.

       ಆರ್ಥಿಕ ಸ್ಥಿತಿಗತಿ ಸರಿಯಿಲ್ಲ ಎಂದು ಅದು ಕಾರಣ ನೀಡಿದೆ ಎನ್ನಲಾಗಿದ್ದು ಅದು ನೀಡಿದ ಕಾರಣದಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ:ಸಚಿವ ಸಂಪುಟದಲ್ಲಿರುವ ಸಚಿವರಿಗಾಗಿ ಹೊಸತಾಗಿ ಹದಿನೈದು ಕಾರುಗಳನ್ನು ಬುಕ್ ಮಾಡಲಾಗಿದ್ದು ತಮಗೆ ಬೇಕು ಎಂದ ಕಾರಿಗೆ ಹಣ ಹೊಂದಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿದೆಯೇ?ಎಂದು ಕೇಳಿದ್ದಾರೆನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link