ಸೈಕಲ್ ಪಥ ನಿರ್ಮಾಣಕ್ಕೆ ಬಸವಪ್ರಭುಶ್ರೀ ಆಗ್ರಹ

ದಾವಣಗೆರೆ:

     ಸ್ಮಾರ್ಟ್‍ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಸೈಕಲ್ ಸವಾರರಿಗಾಗಿ ಒಂದು ಸೈಕಲ್ ಪಥ ನಿರ್ಮಿಸಬೇಕು ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಆಗ್ರಹಿಸಿದರು.
 

   ಲಿಂ|| ಶ್ರೀಜಯದೇವ ಜಗದ್ಗುರುಗಳವರ 63ನೇ ಸ್ಮರಣೋತ್ಸವದ ಅಂಗವಾಗಿ ಮಂಗಳವಾರ ನಗರದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸೈಕಲ್ ಜಾಥಾ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸೈಕಲ್ ಸವಾರರಿಗಾಗಿ ನಗರದಲ್ಲಿ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಸೈಕಲ್ ಪಥ ನಿರ್ಮಾಣ ಮಾಡುವುದರತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.

    ಬೈಕ್, ಸ್ಕೂಟರ್ ಬಳಕೆಯಿಂದ ಸೂಸುವ ವಿಷಪೂರಿತ ಹೊಗೆಯಿಂದ ಪರಿಸರ ಮಾಲಿನ್ಯ ಆಗುವುದಲ್ಲದೇ, ಆರೋಗ್ಯದಲ್ಲಿ ಅಸಮತೋಲನ ಉಂಟಾಗಲಿದೆ. ಆದರೆ, ಸೈಕಲ್ ಬಳಸುವವರ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದಲೇ ಕೆಲವರು ಉತ್ತಮ ಆರೋಗ್ಯ ಪಡೆಯಲಿಕ್ಕಾಗಿ ವ್ಯಾಯಾಮ ಶಾಲೆ ಅಥವಾ ಜಿಮ್‍ಗಳ ಕೊಠಡಿಯ ಒಳಗೆ ಬೈಸೈಕಲ್ ತುಳಿಯುತ್ತಿರುತ್ತಾರೆ ಎಂದರು.

   ಹೀಗೆ ಒಂದು ಕೊಠಡಿಯಲ್ಲಿ ಸೈಕಲ್ ತುಳಿಯುವುದರ ಬದಲು ರಸ್ತೆಯಲ್ಲಿ ಸೈಕಲ್ ತುಳಿದರೆ, ಪರಿಸರ ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಇಂಧನವನ್ನು ಸಹ ಉಳಿಸಬಹುದಾಗಿದೆ. ಆರೋಗ್ಯವು ವೃದ್ಧಿಯಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಸೈಕಲ್ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

   ಇಲ್ಲಿನ ಶಿವಯೋಗಾಶ್ರಮದ ಬಳಿಯಲ್ಲಿ ಸೈಕಲ್ ಜಾಥಾಕ್ಕೆ ಚಳ್ಳಕೆರೆ ಚಿಲುಮೆಸ್ವಾಮಿ ಮಠದ ಶ್ರೀಬಸವಕಿರಣ ಸ್ವಾಮೀಜಿಯವರು ಬಸವ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.

    ಶಿವಯೋಗಾಶ್ರಮದಿಂದ ಆರಂಭವಾದ ಸೈಕಲ್ ಜಾಥಾವು ಜಯದೇವ ವೃತ್ತ, ಅಶೋಕ ರಸ್ತೆ, ಗಾಂಧಿ ವೃತ್ತ, ಮಂಡಿಪೇಟೆ, ಗಡಿಯಾರ ಕಂಬ, ವಿಜಯಲಕ್ಷ್ಮೀ ರಸ್ತೆ, ದೊಡ್ಡಪೇಟೆ, ಹೊಂಡದ ವೃತ್ತ, ಅರುಣಾ ಸರ್ಕಲ್, ಎವಿಕೆ ರಸ್ತೆ, ಕೆಇಬಿ ವೃತ್ತ ಸೇರಿದಂತೆ ಹಲವೆಡೆ ಸಂಚರಿಸಿ ಮರಳಿ ಶಿವಯೋಗಾಶ್ರಮ ಸೇರಿ ಸಮಾಪ್ತಿಗೊಂಡಿತು.

    ಸೈಕಲ್ ಜಾಥಾದಲ್ಲಿ ಎಸ್.ಜೆ.ಎಂ. ಸ್ಕೂಲ್, ಶ್ರೀಬಕ್ಕೇಶ್ವರ ಪ್ರೌಢಶಾಲೆ, ಮುರುಘ ರಾಜೇಂದ್ರ ಶಾಲೆ, ಅಕ್ಕಮಹಾದೇವಿ ಶಾಲೆ ಹಾಗೂ ವಿವಿಧ ಶಾಲೆಗಳ 300ಕ್ಕೂ ಹೆಚ್ಚು ಮಕ್ಕಳು ಭಾಗವಹಿದ್ದರು ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ವಿರೇಶ, ಶಾಂತಯ್ಯ ಪರಡಿಮಠ, ಶರಣಬಸವ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap