ಚಿತ್ರದುರ್ಗ:
ಜಿಲ್ಲೆಯಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸುವ ಮುನ್ನ ಅಧಿಕಾರಿಗಳು ಸಂಬಂಧಪಟ್ಟ ರೈತರಿಗೆ ಮೊದಲೆ ಮಾಹಿತಿ ನೀಡಬೇಕು. ರೈತರೊಂದಿಗೆ ನಿರಂತರ ಸಮೀಕ್ಷೆ ನಡೆಸಿ, ಅವರಿಗೆ ಮಾಹಿತಿ ನೀಡಿ ನಂತರ ವಿದ್ಯುತ್ ಕಂಬ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಹೇಳಿದರು.
ಕೆಪಿಟಿಸಿಎಲ್ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನೇರಲಗುಂಟೆ, ಮಲ್ಲಪ್ಪನಹಳ್ಳಿ ಹಾಗೂ ಗೋಡಬನಹಾಳ್ ಗ್ರಾಮಗಳಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸುವ ಕಾಮಗಾರಿ ಸಲುವಾಗಿ ಪ್ರಸರಣ ಮಾರ್ಗಗಳ ಭೂ ನಷ್ಟ ಪರಿಹಾರ’ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರೊಂದಿಗೆ ಸಭೆ ನಡೆಸುವ ಮುನ್ನ ಅವರಿಗೆ ಮಾಹಿತಿ ನೀಡಿ, ಸಭೆಗೆ ಎಲ್ಲ ರೈತರು ಭಾಗವಹಿಸುವಂತೆ ಕರೆ ನೀಡಬೇಕು. ಭೂ ನಷ್ಠ ಪರಿಹಾರ ನೀಡುವಾಗ ಅಧಿಕಾರಿಗಳು ನೀಡುವ ದಾಖಲೆಗಳೇ ಆಧಾರಗಳಾಗಿರುತ್ತವೆ. ಪ್ರತಿಯೊಂದು ದಾಖಲೆಯು ಮುಖ್ಯ ಎಂದರು.
ಮಲ್ಲಪ್ಪನಹಳ್ಳಿ ರೈತ ಮಾತನಾಡಿ, ಭೂ-ನಷ್ಟ ಪರಿಹಾರ ನಿಡುವಲ್ಲಿ ಪಾರದರ್ಶಕತೆ ಅವಶ್ಯವಾಗಿ ಬೇಕು. ರೈತರಿಗೆ ಮೊದಲು ಮಾಹಿತಿ ನೀಡಿ ನಂತರ ವಿದ್ಯುತ್ ಕಂಬ ಅಳವಡಿಸಬೇಕು. ವಿದ್ಯುತ್ ಕಂಬ ನೆಡುವ ಕಾರ್ಯ ಕುರಿತ ಒಂದು ನೀಲನಕ್ಷೆ ರೈತರಿಗೆ ಪ್ರಸ್ತುತ ಪಡಿಸಬೇಕು ಎಂದರು.
ನೇರಲುಗುಂಟೆ ರೈತ ಮಾತನಾಡಿ, ಭೂ-ನಷ್ಟ ಪರಿಹಾರವನ್ನು ವಿಮೆ ರೀತಿ ಒದಗಿಸಿದರೆ, ಜೀವನ ನಿರ್ವಹಣೆ ಸಾಧ್ಯ. ಭೂ-ನಷ್ಟ ಪರಿಹಾರ ನೀಡುವಾಗ ಎಲ್ಲರಿಗೂ ಒಂದೇ ತರನಾದ ಮಾನದಂಡ ಅನುಸರಿಸಬೇಕು. ಪರಿಹಾರ ಕೂಡಲೇ ರೈತರ ಕೈ ಸೇರಬೇಕು. ಪರಿಹಾರ ಧನಕ್ಕೆ ರೈತನ ಅಲೆದಾಟ ತಪ್ಪಬೇಕು, ಸರ್ವೆಯನ್ವಯ ಹೋಗುವ ವಿದ್ಯುತ್ ಮಾರ್ಗದ ಕುರಿತು ನಿಖರ ಮಾಹಿತಿ ರೈತರಿಗೆ ಒದಗಿಸಬೇಕು ಎಂದರು.
ಕೊಡಗನಹಾಳ್ ರೈತ ಮಾತನಾಡಿ, ಜಮೀನು ಮಧ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಿರುವುದರಿಂದ ಬೆಳೆ ಬೆಳೆಯಲಾಗುತ್ತಿಲ್ಲ. ಇರುವ ಸ್ವಲ್ಪ ಭೂಮಿಯಲ್ಲಿ ಹೀಗಾದರೆ ಮುಂದಿನ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಆದ ಕಾರಣ ವಿದ್ಯುತ್ ಕಂಬದ ಅಳವಡಿಕೆ ಸರ್ಕಾರಿ ಜಮೀನಿನಲ್ಲಿ ಮಾಡಿದರೇ ಉಪಯೋಗವಾಗುತ್ತದೆ.
ಈ ಮೊದಲು ವಿದ್ಯುತ್ ಕಂಬ ನೆಟ್ಟಿರುವ ಭೂಮಿಗೆ ಪರಿಹಾರ ಕೊಟ್ಟಿಲ್ಲ, ಇನ್ನಾದರೂ ಪರಿಹಾರ ಸ್ವಂಚಾಲಿತವಾಗಿ ರೈತರ ಕೈ ಸೇರಲಿ ಜೊತೆಗೆ ಬೆಳೆನಷ್ಟ ಪರಿಹಾರವನ್ನು ನೀಡಬೇಕು ಎಂದರು. ರೈತರ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಜಿಲ್ಲೆಯಲ್ಲಿ ಭೂ-ನಷ್ಟ ಪರಿಹಾರ ನಿಯಮಕ್ಕನುಗುಣವಾಗಿ ನೀಡಲಾಗುತ್ತಿದೆ. ಹೆಚ್ಚಿನ ಭೂ-ನಷ್ಟ ಪರಿಹಾರ ಬಯಸುವ ರೈತರು ಅಗತ್ಯ ದಾಖಲೆಗಳೊಂದಿಗೆ ಹೈಕೋರ್ಟ್ ಮೊರೆ ಹೋಗಬಹುದು.
ಜಿಲ್ಲೆಯಲ್ಲಿ ಬೆಳೆ ನಷ್ಟ ಹಾಗೂ ಭೂ-ನಷ್ಟ ಪರಿಹಾರ ಗರಿಷ್ಠ ಮಿತಿಯಲ್ಲಿ ನೀಡಲಾಗುತ್ತಿದೆ. ಈ ಸೌಲಭ್ಯ ಚಿತ್ರದುರ್ಗದಲ್ಲಿ ಮಾತ್ರ. ವಿದ್ಯುತ್ ಕಂಬಗಳನ್ನಿಡುವ ಜಾಗ ಬದಲಾವಣೆ ಮಾಡುವ ಸಾಧ್ಯತೆ ಇದ್ದರೆ ಮಾಡಿ, ರೈತರಿಗೆ ಪಾರದರ್ಶಕತೆ ದೊರೆಯುವಂತಾಗಬೇಕು. ಬೆಳೆ ನಷ್ಟ ಪರಿಹಾರದ ಸಮೀಕ್ಷೆಗಾಗಿ ತೋಟಗಾರಿಕೆ, ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಮೀಕ್ಷೆ ಆಧರಿಸಿ, ಬೆಳೆ ನಷ್ಟ ಪರಿಹಾರ ನೀಡಲಾಗುತ್ತದೆ. ಕೆಪಿಟಿಸಿಎಲ್ ಅಧಿಕಾರಿಗಳು ಆದಷ್ಟು ಸರ್ಕಾರಿ ಜಮೀನು ಬಳಸಿಕೊಳ್ಳಬೇಕು ಎಂದರು.
ಬೇರೆ ಬೇರೆ ಭೂ-ನಷ್ಟಕ್ಕೆ ಹಾಗೂ ಬೆಳೆ ನಷ್ಟಕ್ಕೆ ಬೇರೆಯಾಗಿಯೇ ಪರಿಹಾರ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಮೇಲಾಧಿಕಾರಿಗಳ ಜೊತೆ ಚರ್ಚಿಸಿ, ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು. ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ಪ ಮಾತನಾಡಿ, ಕಾರಿಡಾರ್ (ಮೊಗಸಾಲೆಗೆ) ಸಂಬಂಧಿಸದಂತೆ ರೈತರಿಗೆ 1 ಎಕರೆಗೆ 2.5 ಲಕ್ಷ ಭೂ ನಷ್ಟ ಪರಿಹಾರ ನೀಡಲಾಗುತ್ತದೆ. ಇದು 2 ಹಂತದ ಪ್ರಕ್ರಿಯೆಯಾಗಿದ್ದು, ಮೊದಲನೆ ಹಂತದಲ್ಲಿ ಭೂ ಅಡಿಪಾಯದ ನಂತರ ಪರಿಹಾರ ಧನ ಹಾಗೂ ಎರಡನೇ ಹಂತದಲ್ಲಿ ವೈರ್ ಎಳೆಯುವಾಗ ಪರಿಹಾರ ಧನ ನೀಡಲಾಗುತ್ತದೆ. ಪರಿಹಾರ ಧನ ನೀಡುವ ಸಂದರ್ಭದಲ್ಲಿ ರೈತರಿಗೆ ಚೆಕ್ ಸ್ವೀಕೃತಿ ಪತ್ರ ನೀಡಲಾಗುತ್ತದೆ. ವಿದ್ಯುತ್ ಕಂಬದ ಸ್ಥಳ ಬದಲಾವಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು ಉಪವಿಭಾಗಾಧಿಕಾರಿ ವಿ ಪ್ರಸನ್ನ ಸೇರಿದಂತೆ ಜಿಲ್ಲೆಯ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
