ಬೆಂಗಳೂರು
ನಗರ ಪೊಲೀಸರ ರಿವಲ್ವಾರ್ ಮತ್ತೆ ಸದ್ದು ಮಾಡಿದೆ.ಕುಖ್ಯಾತ ರೌಡಿ ಕವಳ ಹಾಗೂ ಶಿಡ್ಲಘಟ್ಟ ಪುರಸಭೆ ಸದಸ್ಯ ವೆಂಕಟರಾಮಣ್ಣ ಅವರನ್ನು ಕೊಲೆಗೈದು ತಲೆಮರೆಸಿಕೊಂಡು ಸವಾಲಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿಗಳಾದ ಮಹೇಶ್ ಅಲಿಯಾಸ್ ಹಂದಿ ಮಹೇಶ್ ಹಾಗೂ ಸತೀಶ ಅಲಿಯಾಸ್ ಶಡ್ಕನ ಕಾಲಿಗೆ ಗುಂಡು ಹೊಡೆದಿದ್ದಾರೆ.
ಮೂವರನ್ನು ಕೊಲೆಗೈದು ನಾಲ್ವರ ಕೊಲೆಯತ್ನ ನಡೆಸಿದ್ದ ರೌಡಿಗಳಾದ ಆಡುಗೋಡಿಯ ಸತೀಶ ಅಲಿಯಾಸ್ ಶಡ್ಕ(29)ಹಾಗೂ ಕೋರಮಂಗಲದ ಹಂದಿ ಮಹೇಶ್(28)ಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಗುಂಡು ಹೊಡೆದು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಪೊಲೀಸರ ಗುಂಡೇಟು ಬಲಗಾಲಿಗೆ ತಗುಲಿ ಗಾಯಗೊಂಡಿರುವ ರೌಡಿಗಳಾದ ಸತೀಶ ಅಲಿಯಾಸ್ ಶಡ್ಕ ಹಾಗೂ ಹಂದಿ ಮಹೇಶ್(28) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ಪಾಟೀಲ್ ತಿಳಿಸಿದ್ದಾರೆ.
ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ರೌಡಿಗಳು ಚಾಕುವಿನಿಂದ ಇರಿದಿದ್ದರಿಂದ ಗಾಯಗೊಂಡಿರುವ ಪೇದೆ ಹನುಮೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಹೊಸೂರು ಬಳಿ 2014ರಲ್ಲಿ ಕುಖ್ಯಾತ ರೌಡಿ ಕವಳ ಅಲಿಯಾಸ್ ವಿಜಯ್ಕುಮಾರ್ 2016ರಲ್ಲಿ ಶಿಡ್ಲಘಟ್ಟ ಪುರಸಭೆ ಸದಸ್ಯ ವೆಂಕಟರಾಮಣ್ಣ ಅವರನ್ನು ಕೊಲೆಗೈದಿದ್ದ ಇವರಿಬ್ಬರು 2019ರಲ್ಲಿ ತರಕಾರಿ ಮಹೇಶ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿದ್ದರ ಜೊತೆಗೆ ಮೂವರ ಕೊಲೆಯತ್ನ ಬೆದರಿಕೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದರು.
ಕೊಲೆ ಕೊಲೆಯತ್ನ ಸೇರಿ ಸತೀಶ್ ಮೇಲೆ ಐದು ಪ್ರಕರಣಗಳು, ಹಂದಿ ಮಹೇಶ್ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದವು ಸತೀಶ್ ಕೋರಮಂಗಲ ಹಾಗೂ ಶಿಡ್ಲಘಟ್ಟ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದರೆ ಮಹೇಶನನ್ನು ಶಿಡ್ಲಘಟ್ಟ ಪೊಲೀಸ್ ಠಾಣೆಯ ರೌಡಿಪಟ್ಟಿಗೆ ಸೇರಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಇವರಿಬ್ಬರು ರೌಡಿಗಳು ನಗರ ಮೈಕೋ ಲೇಔಟ್ ಬಳಿಯ ರಂಕಾ ಕಾಲೋನಿಯಲ್ಲಿ ಇಂದು ನಸುಕಿನ 2.30ರ ವೇಳೆ ಅಡಗಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದ ಕೂಡಲೇ ಇನ್ಸ್ಪೆಕ್ಟರ್ ಗಳಾದ ಪುನೀತ್, ಕೇಶವಮೂರ್ತಿ ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡಿದೆ.
ಇಬ್ಬರು ರೌಡಿಗಳನ್ನು ಬೆನ್ನಟ್ಟಿ ಹಿಡಿಯಲು ಹೋದ ಪೊಲೀಸ್ ಪೇದೆ ಹನುಮೇಶ್ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಲಾಯಿತಾದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೆರಡು ಸುತ್ತು ಗುಂಡು ಹಾರಿಸಿದ್ದು ಅವೆರಡು ಇಬ್ಬರ ಬಲಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








