ಬೆಂಗಳೂರು
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ತಿಂಗಳ ಕಾಲ ‘ಖಾದಿ ಉತ್ಸವ’ ಆಯೋಜಿಸಲಾಗಿದ್ದು ಇದೇ ಗುರುವಾರ ಚಾಲನೆ ದೊರೆಯಲಿದೆ.
’ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಖಾದಿ ಮತ್ತು ಗ್ರಾಮ ಕೈಗಾರಿಕೆಗಳಿಗೆ ಇವೆ ಎಂಬುದನ್ನು ಪ್ರತ್ಯಕ್ಷವಾಗಿ ಪರಿಚಯಿಸುವ ದೃಷ್ಟಿಯಿಂದ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಉತ್ಸವದಲ್ಲಿ ನಗರ ಮತ್ತು ಗ್ರಾಮೋದ್ಯೋಗ ಘಟಕಗಳಿಂದ ಒಟ್ಟು 200 ಮಳಿಗೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.
ದೇಶದ ವಿವಿಧ ರಾಜ್ಯಗಳಿಂದ ವಿವಿಧ ಗ್ರಾಮೋದ್ಯೋಗ ಘಟಕಗಳು, ರಾಜ್ಯದ ಬಹುತೇಕ ಜಿಲ್ಲೆಗಳ ಗ್ರಾಮೋದ್ಯೋಗ ಘಟಕಗಳು ಮಳಿಗೆಗಳನ್ನು ತೆರಯಲಿವೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು..
ಉಷ್ಣ ಕಾಲೇ ಶೀತಂ, ಶೀತ ಕಾಲೇ ಉಷ್ಣಂ, ಅದುವೇ ಖಾದಿ ವಸ್ತ್ರಂ’ ಎನ್ನುವುದು ರೂಢಿ ಮಾತು.ಇದು ಹಿರಿಯರಷ್ಟೇ ಅಲ್ಲ ಕಿರಿಯರಿಗೂ ಖಾದಿ ಈಗ ಅಪ್ಯಾಯಮಾನವಾಗಿದೆ ಖಾದಿ ಮತ್ತು ಗ್ರಾಮೋದ್ಯೋಗ ಸಿದ್ಧಾಂತವನ್ನು ಕಾರ್ಯಗತಗೊಳಿಸುವು ದಕ್ಕಾಗಿಯೇ ಉತ್ಸವ ನಡೆಸಲಾಗುವುದು ಎಂದರು
ಎಲ್ಲವೂ ಆನ್‌ಲೈನ್:
ಉತ್ಸವಕ್ಕೆ ಮಳಿಗೆ ಹಾಕಲು ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. 48 ಗಂಟೆಯೊಳಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅನ್‌ಲೈನ್‌ನಲ್ಲಿ ಪೇಮೆಂಟ್ ಕೂಡಾ ಆಗಿದೆ. ಇದು ಖಾದಿ ಉತ್ಸವದ ಜನಪ್ರಿಯತೆಗೆ ಸಾಕ್ಷಿ ಎಂದು ತಿಳಿಸಿದರು. ಖಾದಿ ಉತ್ಸವದಲ್ಲಿ ಧಾರವಾಡ, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಅರಳೇ ಖಾದಿ ಮತ್ತು ಉಣ್ಣೆ ಉತ್ಪನ್ನಗಳು ದೊರೆಯಲಿವೆ. ವಾಣಿಜ್ಯ ಬೆಳೆಗಳು ಮತ್ತು ಸಾಂಬಾರ್ ಪದಾರ್ಥಗಳಾದ ಏಲಕ್ಕಿ, ಮೆಣಸು, ದ್ರಾಕ್ಷಿ, ಗೋಡಂಬಿ, ಕಾಫಿ ಮತ್ತು ತೋಟಗಾರಿಕಾ ಉತ್ಪನ್ನಗಳು, ಚರ್ಮದ ಉತ್ಪನ್ನಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ
ಸಿಎಂರಿಂದ ಉದ್ಘಾಟನೆ
ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟ ಜ.16ರಿಂದ ಫೆಬ್ರವರಿ 14ರ ವರೆಗೆ ನಡೆಯುವ ಖಾದಿ ಉತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಲಕ್ಷ್ಮಣ ಸಂಗಪ್ಪ ಸವದಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾದ ಡಾ.ನಾಡೋಜ ಪಾಟೀಲ್ ಪುಟ್ಟಪ್ಪ, ಡಾ.ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ವಿ.ಅಣ್ಣಪ್ಪ, ರಾಮ್ ಮೋಹನ್ ರಾವ್, ಜಗದೀಶ್ ಸೇರಿದಂತೆ ಪ್ರಮುಖರಿದ್ದರು.
ರಿಯಾಯಿತಿ ಮಾರಾಟ
ಖಾದಿ ಉತ್ಸವದಲ್ಲಿ ಖಾದಿ ರೇಷ್ಮೆ ಬಟ್ಟೆಗಳಿಗೆ ಶೇ 25 ಹಾಗೂ ಖಾದಿ ಬಟ್ಟೆಗಳಿಗೆ ಶೇ 35ರಷ್ಟು ರಿಯಾಯ್ತಿ ಇರುತ್ತದೆ. ವಿವಿಧ ರಾಜ್ಯಗಳ ಉತ್ಪನ್ನಗಳು ಇಲ್ಲಿ ದೊರೆಯುವುದರಿಂದ ಗ್ರಾಹಕರಿಗೆ ವೈವಿಧ್ಯಮಯ ಸಂಗ್ರಹ ದೊರೆಯಲಿದೆ.ಪ್ರತಿ ದಿನ ಬೆಳಿಗ್ಗೆ9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಖಾದಿ ಉತ್ಸವ ತೆರೆಯಲಾಗಿರುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








