‘ರಾಜಾಹುಲಿ ಯಡಿಯೂರಪ್ಪ’ ತಮ್ಮ ಹೆಸರನ್ನು ‘ರಾಜಾ ಇಲಿ’ ಎಂದು ಬದಲಿಸಿಕೊಳ್ಳಲ್ಲಿ

ಬೆಂಗಳೂರು

      ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ ತರಲು ವಿಫಲರಾಗಿರುವ ‘ರಾಜಾಹುಲಿ ಯಡಿಯೂರಪ್ಪ’ ತಮ್ಮ ಹೆಸರನ್ನು ‘ರಾಜಾ ಇಲಿ’ ಎಂದು ಬದಲಿಸಿಕೊಂಡರೆ ಸೂಕ್ತ ಎಂದು ಮಾಜಿ ಸಂಸದ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದ್ದಾರೆ.

      ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಯಡಿಯೂರಪ್ಪ ತರಾತುರಿಯಲ್ಲಿ ರಾಯಚೂರಿನಲ್ಲಿ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗಬೇಕು ಎಂದು ಸಿದ್ಧರಾದರೆ, ಅಮಿತ್ ಶಾ ಮಾತ್ರ ಭೇಟಿಗೆ ಅವಕಾಶವನ್ನೇ ನೀಡಲಿಲ್ಲ. ಬೆಕ್ಕು ಬಂದಾಗ ಇಲಿ ಯಾವ ರೀತಿ ಬಿಲ ಹುಡುಕುತ್ತದೆಯೋ ಅದೇ ರೀತಿ ಅಮಿತ್ ಶಾ ಕಂಡರೆ ಯಡಿಯೂರಪ್ಪ ಬಿಲ ಹುಡುಕುತ್ತಿದ್ದಾರೆ.

     ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದವರನ್ನು 24 ತಾಸುಗಳೊಳಗೆ ಮಂತ್ರಿ ಮಾಡುತ್ತೇವೆ ಎಂದಿದ್ದರು. ಯಡಿಯೂರಪ್ಪ ಮಾತು ನಂಬಿ ಅವರೆಲ್ಲ ಸೂಟು ಬೂಟು ಹೊಲಿಸಿಕೊಂಡು ಮಂತ್ರಿಮಂಡಲ ಸೇರಲು ಕಾಯುತ್ತಿದ್ದಾರೆ. ಶಾಸಕರಿಗೆ ನೀಡಿದ ಭರವಸೆಯನ್ನಾಗಲಿ ರಾಜ್ಯದ ಜನರ ಅಭಿವೃದ್ಧಿಯ ಭರವಸೆಯನ್ನಾಗಲಿ ಈಡೇರಿಸಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಲಿಲ್ಲ ಎಂದು ಕುಟುಕಿದರು.

     2011 ರಲ್ಲಿ ಯಡಿಯೂರಪ್ಪ ಅವರಿಗೆ ಗಣಿ ಹಗರಣದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿತ್ತು. ಈಗ ಅದೇ ಮಾದರಿಯಲ್ಲಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರ ಪಕ್ಷದಲ್ಲಿಯೇ ಒಂದು ಗುಂಪು ಸಜ್ಜಾಗಿದೆ. ರಾಜಾಹುಲಿ ಈಗ ರಾಜಾ ಇಲಿಯಾಗಿದೆ ಎಂದು ಉಗ್ರಪ್ಪ ಕುಟುಕಿದರು.

   ನರೇಗಾ, ಬರ, ನೆರೆ ಪರಿಸ್ಥಿತಿ ಬಗ್ಗೆ ಸರ್ಕಾರ ಆದಷ್ಟು ಬೇಗ ಶ್ವೇತಪತ್ರ ಹೊರಡಿಸಬೇಕು. ಬಡವರ ಹೊಟ್ಟೆ ಮೇಲೆ ಹೊಡೆಯಲು ಅನ್ನಭಾಗ್ಯದ ಅಕ್ಕಿಯನ್ನು ಯಡಿಯೂರಪ್ಪ ಆಂಧ್ರ, ಗುಜರಾತಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಡವರ ಅನ್ನ ಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

   ಪ.ಬಂಗಾಳದ ಬಿಜೆಪಿ ಅಧ್ಯಕ್ಷ ಸಿಎಎ ಪ್ರಶ್ನಿಸುವವರನ್ನು ನಾಯಿಯ ತರಹ ಹೊಡೆದು ಹಾಕಿದ್ದೇವೆ ಎನ್ನುತ್ತಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ. ಬಿಜೆಪಿಯ ಮನಸ್ಥಿತಿ ನೋಡಿದರೆ ಭಯ ಹುಟ್ಟಿಸುತ್ತದೆ. ಈ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ. ಸರ್ವಾಧಿಕಾರಿ ನಾಜಿ ಪ್ರವೃತ್ತಿ, ಗೋಬೆಲ್ಸ್ ಸಿದ್ಧಾಂತಕ್ಕೆ ಮುಂದಿನ ದಿನಗಳಲ್ಲಿ ದೇಶದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

   ವಚನ ಭ್ರಷ್ಟ ಯಡಿಯೂರಪ್ಪ ರಾಮನ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಅಧಿಕಾರದ ಕಚ್ಚಾಟದಲ್ಲಿ ಆಡಳಿತ ಕುಸಿದಿದೆ. ಮಂತ್ರಿಮಂಡಲ ವಿಸ್ತರಣೆಯಾದರೆ ಆಡಳಿತದ ಯಂತ್ರ ಚುರುಕಾಗಬಹುದೇನೋ. ಹೀಗಾಗಿ ಆದಷ್ಟು ಬೇಗ 12 ಶಾಸಕರನ್ನು ಸಂಪುಟಕ್ಕೆ ಸೇರಿಸಲಿ ಎಂದು ಹೇಳಿದರು.

    ಕಪಾಲಿಬೆಟ್ಟದಲ್ಲಿ ಡಿ.ಕೆ.ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿರುವ ಏಸು ಪ್ರತಿಮೆಗೆ ಬಿಜೆಪಿ, ಹಿಂದೂ ಸಂಘಟನೆಗಳ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಉಗ್ರಪ್ಪ, ಶಿವಕುಮಾರ್ ಪಕ್ಷದ ಹಿರಿಯ ನಾಯಕರು. ಪಕ್ಷ ಸಂಕಷ್ಟದಲ್ಲಿದ್ದಾಗ ಅದಕ್ಕೆ ಬಲ ತುಂಬಿದವರು. ಏಸು ಪ್ರತಿಮೆ ವಿಚಾರವಾಗಿ ಡಿ.ಕೆ.ಶಿವಕುಮಾರ್ ಒಬ್ಬಂಟಿಯಲ್ಲ. ಕಾಂಗ್ರೆಸ್‍ನ ಬೆಂಬಲ ಅವರಿಗೆ ಸದಾ ಇರುತ್ತದೆ. ‘ಈಶ್ವರ್ ಅಲ್ಲಾ ತೇರೇ ನಾಮ್’ ಎನ್ನುವುದನ್ನು ಸಂಘ ಪರಿವಾರ, ಬಿಜೆಪಿ ಮರೆತಿದೆ.

    ಕಲ್ಲಡ್ಕ ಪ್ರಭಾಕರ್ ಭಟ್‍ಗೆ ತಮ್ಮ ಶಾಲೆಯ ಮಕ್ಕಳ ಬಗ್ಗೆ ಮಾತ್ರ ಗೊತ್ತು. ರಾಜ್ಯದ ಎಲ್ಲಾ ಮಕ್ಕಳ ಬಗ್ಗೆ ಅವರು ಕಾಳಜಿ ತೋರಲಿ. ಕನಕಪುರ, ರಾಮನಗರವೂ ಸೇರಿದಂತೆ ದೇಶದ ಜನ ಸಾಮರಸ್ಯದಿಂದ ಬದುಕುತ್ತಿದ್ದು, ಸಾಮರಸ್ಯ ಕೆಡಸುವ ಪ್ರಯತ್ನ ಬಿಜೆಪಿಯದ್ದಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿ ಇರುವುದೇ ಆದರೆ ಆರ್ಥಿಕ ಕುಸಿತ, ಬೆಲೆ ಏರಿಕೆ ಸರಿಪಡಿಸಲಿ. ಜನರ ಸಮಸ್ಯೆಗಳ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link