ಬಳ್ಳಾರಿ
ರಾಜ್ಯದ ಎಲ್ಲ ಗ್ರಾಪಂಗಳು, ತಾಪಂ ಮತ್ತು ಜಿಪಂಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಈ ಸಮಿತಿಗಳ ವ್ಯಾಪ್ತಿ ಪ್ರದೇಶದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಇದುವರೆಗೆ 2 ಸಾವಿರ ಜೀವ ವೈವಿಧ್ಯ ದಾಖಲಾತಿಗಳನ್ನು ರಚಿಸಿ ಬಿಡುಗಡೆ ಮಾಡಲಾಗಿದ್ದು, ಇನ್ನೂ 3 ಸಾವಿರ ಜೀವ ವೈವಿಧ್ಯ ದಾಖಲಾತಿಗಳನ್ನು ರಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೀವ ವೈವಿಧ್ಯ ದಾಖಲಾತಿಗಳನ್ನು ರಚಿಸುವುದರ ಮುಖಾಂತರ ಸಸ್ಯ ಪ್ರಾಣಿ ವೈವಿಧ್ಯ ಹಾಗೂ ಅವುಗಳ ಸಂರಕ್ಷಣೆ, ಸುಸ್ಥಿರ ಬಳಕೆ ಕುರಿತ ಸ್ಥಳೀಯ ಪಾರಂಪರಿಕ ಜ್ಞಾನಗಳೆಲ್ಲವುಗಳನ್ನು ದಾಖಲಿಕರಣ ಮಾಡಲಾಗುತ್ತಿದೆ ಎಂದರು.
ಜೀವ ವೈವಿಧ್ಯ ಕಾನೂನಿನ್ವಯ ಅಪರೂಪದ ಹಾಗೂ ಅಮೂಲ್ಯವಾದ ಜೀವಸಂಕುಲಗಳಿರುವ ಪ್ರದೇಶಗಳನ್ನು ಪಾರಂಪರಿಕ ಜೀವ ವೈವಿಧ್ಯ ತಾಣಗಳೆಂದು ಗುರುತಿಸಿ ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ರಕ್ಷಿಸಲಾಗುತ್ತಿದ್ದು, ಮಂಡಳಿಯು ಈವರೆಗೆ ರಾಜ್ಯದ ನಾಲ್ಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಲ್ಲೂರಿನಲ್ಲಿರುವ ಪುರಾತನ ಹುಣಸೆ ಮರದ ತೋಪು, ಹೆಬ್ಬಾಳದಲ್ಲಿರುವ ಕೃಷಿ ವಿವಿ ಆವರಣದಲ್ಲಿರುವ ನೈಸರ್ಗಿಕ ಕಾಡು, ಚಿಕ್ಕಮಗಳೂರಿನ ಹೊಗರೆಕಾನುಗಿರಿ ಶೃಂಗಶ್ರೇಣಿ,ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಪ್ರದೇಶದ ಅಂಬಾರಗುಡ್ಡ ಪರ್ವತಸಾಲು ಪ್ರದೇಶಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣಗಳೆಂದು ಗುರುತಿಸಿ ಸಂರಕ್ಷಿಸಲಾಗುತ್ತಿದೆ. ಇನ್ನೂ ಐದಾರು ತಿಂಗಳಲ್ಲಿ 10 ತಾಣಗಳನ್ನು ಗುರುತಿಸಿ ಇದೇ ರೀತಿಯ ಕ್ರಮವಹಿಸಲಾಗುವುದು ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯ ಮೂರುಹಂತಗಳಲ್ಲಿ ಶೇ.5ರಷ್ಟು ಹಣವನ್ನು ಈ ಜೀವವೈವಿಧ್ಯತಾ ಕಾರ್ಯಗಳಿಗೆ ಖರ್ಚು ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿರುವ ಜೀವ ವೈವಿಧ್ಯ ಸಮಿತಿಗಳನ್ನು ಸಬಲೀಕರಣ ಮಾಡುವುದು ಹಾಗೂ ತಳಮಟ್ಟದ ಸರಕಾರಿ ಯೋಜನೆಗಳಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಆಶಯಗಳಿಗೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಬಳ್ಳಾರಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಲಾಗಿದ್ದು, 116 ಗ್ರಾಪಂಗಳಲ್ಲಿ ಜೀವ ವೈವಿಧ್ಯ ದಾಖಲಾತಿ ವರದಿ ರಚಿಸಲಾಗಿದ್ದು, ಇನ್ನೂ 119 ರಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ವಿವರಿಸಿದರು. ಜೀವವೈವಿಧ್ಯತಾ ಕಾಯ್ದೆ ಪರಿಣಾಮಕಾರಿ ಅನುμÁ್ಠನ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಪ್ರತಿವರ್ಷ ಮೇ 22ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯತಾ ದಿನವನ್ನು ಅತ್ಯಂತ ರಚನಾತ್ಮಕವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜೀವವೈವಿಧ್ಯತೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಜೀವ ವೈವಿಧ್ಯ ಪುರಸ್ಕಾರ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ವಲಯದ ಜಿಲ್ಲಾ ಅರಣ್ಯ ಉಪಸಂರಕ್ಷಾಧಿಕಾರಿ ಕಿರಣ್ ಇದ್ದರು. ಇದಕ್ಕೂ ಮುಂಚೆ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ