ಬೆಂಗಳೂರು
ರಾಜ್ಯಪಾಲರದ್ದು ಯಾವುದೇ ಗೊತ್ತು ಗುರಿ ಇಲ್ಲದ ಸಪ್ಪೆ ಭಾಷಣ. ಯಡಿಯೂರಪ್ಪ ಸರ್ಕಾರ ಬಂದು ಆರು ತಿಂಗಳಾದರೂ ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರಗಳಲ್ಲಿನ ಸಾಧನೆಗಳು ಕಾರ್ಯಕ್ರಮಗಳನ್ನೇ ಪ್ರಸ್ತಾಪ ಮಾಡಿ ಶ್ಲಾಘಿಸಿದ್ದಾರೆ. ಏಕೆಂದರೆ ಅವರಿಗೆ ತಮ್ಮ ಸರ್ಕಾರದ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರವಾಹ ಪೀಡಿತರಿಗೆ ಪರಿಹಾರ ಕೊಡುವ ಬಗ್ಗೆ ರಾಜ್ಯಪಾಲರ ಬಾಯಿಯಲ್ಲಿ ಸುಳ್ಳು ಹೇಳಿಸಿದ್ದಾರೆ. 2019ರ ಆಗಸ್ಟ್ ನಲ್ಲಿ ತಲೆದೋರಿದ ಪ್ರವಾಹಕ್ಕೆ ಸರ್ಕಾರ ಇದುವರೆಗೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಪ್ರವಾಹದಿಂದ ಸಂತ್ರಸ್ತರು ತೀವ್ರ ಸಂಕಷ್ಟದಲ್ಲಿದ್ದಾರೆ. ಶಾಲಾ ಕೊಠಡಿಗಳು ಇಲ್ಲದೆ ಮಕ್ಕಳು ಅತಂತ್ರರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೊಂದು ಸಂವಿಧಾನ ಬಾಹಿರ ಸರ್ಕಾರ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಗರು ಸರ್ಕಾರ ಉಳಿಸಿಕೊಳ್ಳುವುದಕ್ಕಷ್ಟೆ ಸೀಮಿತರಾಗಿದ್ದಾರೆ. ರಾಜ್ಯಪಾಲರದ್ದು ಸಪ್ಪೆ ಭಾಷಣ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ