ಮೈಸೂರು :
ಗಂಡ-ಹೆಂಡತಿ ಜಗಳಕ್ಕೆ 6 ತಿಂಗಳ ಹಸುಗೂಸೊಂದು ಮೋರಿ ಪಾಲಾಗಿರುವ ಘಟನೆ ನಗರದ ವಿದ್ಯಾರಣ್ಯಪುರಂನ ಸೂಯೆಜ್ ಫಾರಂನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ 6 ತಿಂಗಳ ಮಗವನ್ನು ಕಸ ಹಾಕುವ ಜಾಗದಲ್ಲಿ ಎಸೆದಿದ್ದರು. ಸ್ಥಳೀಯರೊಬ್ಬರು ನಡೆದುಕೊಂಡು ಹೋಗುವಾಗ ಮಗುವಿನ ಅಳುವ ಶಬ್ಧ ಕೇಳಿ ತಕ್ಷಣಕ್ಕೆ ಆ ಮಗುವನ್ನು ರಕ್ಷಿಸಿ ಹತ್ತಿರದ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸ್ಥಳೀಯರ ಸಹಾಯದಿಂದ ಪುಟ್ಟ ಕಂದಮ್ಮ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಗಂಡ ಹೆಂಡತಿ ಜಗಳ ತಾರಕಕ್ಕೆ ಹೋದ ಹಿನ್ನೆಲೆ ಹೆತ್ತ ತಾಯಿಯೇ ಮಗುವನ್ನು ಸಿಟ್ಟಿನಲ್ಲಿ ಮೋರಿಗೆ ಬಿಸಾಡಿ ಹೋಗಿರುವುದು ತಿಳಿದು ಬಂದಿದೆ. ಘಟನೆ ನಡೆದು ಸುಮಾರು ಹೊತ್ತಿನ ಬಳಿಕ ಮಗುವನ್ನು ಹುಡುಕಿಕೊಂಡು ತಂದೆ ಬಂದಿದ್ದು, ಮಗುವಿಗಾಗಿ ಸಾರ್ವಜನಿಕರಲ್ಲಿ ಅಂಗಲಾಚಿದ್ದಾರೆ. ಈ ವೇಳೆ ಸಾರ್ವಜನಿಕರು ತಂದೆಗೆ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ತಂದೆ ತಾಯಿ ಇಬ್ಬರಿಗೂ ಪೊಲೀಸರು ಬುದ್ದಿ ಹೇಳಿ, ಮಗು ವಾಪಸ್ ನೀಡುವ ಭರವಸೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ