ಬೆಂಗಳೂರು
ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದ ಎಟಿಂಎ ಕೇಂದ್ರಗಳನ್ನು ಗುರಿಯಾಗಿಸಿಕೊಂಢು ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಪಡೆದು ನಕಲಿ ಕಾರ್ಡ್ ಮೂಲಕ ಹಣ ದೋಚುತ್ತಿದ್ದ ಇಬ್ಬರು ತಾಂಜೇನಿಯಾ ವಿದ್ಯಾರ್ಥಿಗಳನ್ನು ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸಿದ್ದಾರೆ.
ತಾಂಜೇನಿಯಾ ದೇಶದ ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ(24),ಜಾರ್ಜ್ ಜೆನೆಸ್ ಅಸ್ಸೆಯ್(24)ನನ್ನು ಬಂಧಿಸಿ 1 ಕಾರು,2 ಬೈಕ್, 1 ಲ್ಯಾಪ್ ಟಾಪ್, 4 ಮೊಬೈಲ್‌ಗಳು, ನಕಲಿ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅನೂಪ್‌ಶೆಟ್ಟಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಎಟಿಎಂ ಕೇಂದ್ರಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದಿರುವುದನ್ನು ನೋಡಿಕೊಂಡು ಯಾರಿಗೂ ಗೊತ್ತಾಗದಂತೆ ಸ್ಕಿಮ್ಮಿಂಗ್ ಯಂತ್ರವನ್ನು ಅಳವಡಿಸುತ್ತಿದ್ದರು. ಗ್ರಾಹಕರು ಹಣ ಡ್ರಾ ಮಾಡುವ ವೇಳೆ ಎಟಿಎಂ ಮಾಹಿತಿ ಹಾಗೂ ಸೀಕ್ರೆಟ್ ಪಿನ್ ಎಲ್ಲವೂ ಸಹ ಸ್ಕಿಮ್ಮಿಂಗ್ ಯಂತ್ರದಲ್ಲಿ ದಾಖಲಾಗುತ್ತಿತ್ತು. ನಂತರ ನಕಲಿ ಎಟಿಎಂಗಳಿಗೆ ಮಾಹಿತಿಯನ್ನ ತುಂಬಿ ಬೇರೆ ಎಟಿಎಂಗಳಲ್ಲಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಖದೀಮರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.
ಹೀಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳಿ ಗ್ರಾಮದ ಶಿವಕುಮಾರ್ ಎಂಬವರ ಕೆನರಾ ಬ್ಯಾಂಕ್ ಎಟಿಎಂನ ಮಾಹಿತಿ ಕದ್ದು, ಆರೋಪಿಗಳು ಹಣ ಡ್ರಾ ಮಾಡುತ್ತಿದ್ದರು. ಎಟಿಎಂ ತಮ್ಮ ಬಳಿಯೇ ಇದ್ದರೂ ಹಣ ಡ್ರಾ ಆಗುತ್ತಿರುವ ಬಗ್ಗೆ ಮಾಹಿತಿ ತಿಳಿದ ಶಿವಕುಮಾರ್ ಅವರು ಕುದೂರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಯಲಹಂಕದ ಫ್ಲಾಟ್‌ವೊಂದರಲ್ಲಿ ವಾಸವಿದ್ದನು.ಇತ್ತ ಮತ್ತೊಬ್ಬ ಆರೋಪಿ ಜಾರ್ಜ್ ಕುಮಾರಸ್ವಾಮಿ ಲೇಔಟ್‌ನ ರಾಜ್ಯೋತ್ಸವ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.








