ತುಮಕೂರು
ತುಮಕೂರು ನಗರದಲ್ಲಿ ನಡೆಯುತ್ತಿರುವ ಬಹುಕೋಟಿ ಮೊತ್ತದ ಸ್ಮಾರ್ಟ್ಸಿಟಿ ಯೋಜನೆ ಕಾಮಗಾರಿಗಳಲ್ಲಿ ಗುತ್ತಿಗೆದಾರರು ನಿರೀಕ್ಷಿತಮಟ್ಟದ ಪ್ರಗತಿ ಸಾಧಿಸದಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ಅವರು ಕಠಿಣ ನಿರ್ಧಾರ ಕೈಗೊಂಡಿದ್ದು, 11 ಗುತ್ತಿಗೆದಾರರಿಗೆ ಒಟ್ಟು 1,53,80,748 ರೂ. ದಂಡವನ್ನು ವಿಧಿಸಿ ಸೋಮವಾರ ಆದೇಶ ಹೊರಡಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ.
ದಂಡದ ವಿವರ
ಕಾಮಗಾರಿಯ ಹೆಸರು, ಗುತ್ತಿಗೆದಾರ ಸಂಸ್ಥೆ/ವ್ಯಕ್ತಿಗಳು ಮತ್ತು ಅವರಿಗೆ ವಿಧಿಸಲಾದ ದಂಡದ ಮೊತ್ತದ ವಿವರವನ್ನು ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ:-
1)ತುಮಕೂರು ನಗರದ ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಆರ್.ಎಂ.ಎನ್. ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿಗೆ 50,41,630 ರೂ. ದಂಡ ವಿಧಿಸಲಾಗಿದೆ.
2)ಅಶೋಕ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸಿದ್ಧಾರ್ಥ ಸಿವಿಲ್ ವಕ್ರ್ಸ್ ಪ್ರೈ.ಲಿ. ಗೆ 26,97,720 ರೂ. ದಂಡ ವಿಧಿಸಲಾಗಿದೆ.
3)ಅಮಾನಿಕೆರೆಯ ಕೆರೆ ಏರಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಆರ್.ಎಂ.ಎನ್. ಇನ್ಫ್ರಾಸ್ಟ್ರಕ್ಚರ್ಸ್ ಕಂಪನಿಗೆ 23,42,262 ರೂ. ದಂಡ ವಿಧಿಸಲಾಗಿದೆ.
4)ಡಾ.ಎಸ್.ರಾಧಾಕೃಷ್ಣನ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಶ್ರೀನಿವಾಸ ಕನ್ಸ್ಟ್ರಕ್ಷನ್ ಪ್ರೈ.ಲಿ. ಗೆ 16,42,295 ರೂ. ದಂಡ ವಿಧಿಸಲಾಗಿದೆ.
5)ಭಗವಾನ್ ಮಹಾವೀರ ರಸ್ತೆ (ರೈಲು ನಿಲ್ದಾಣ ರಸ್ತೆ)ಗೆ ಸಂಬಂಧಿಸಿದಂತೆ ಸುಧಾಕರ ಪೆರಿಟಾಲ ಅವರಿಗೆ 10,31,460 ರೂ. ದಂಡ ವಿಧಿಸಲಾಗಿದೆ.
6)ಮಹಿಳಾ ಥೀಮ್ ಪಾರ್ಕ್ ಕಾಮಗಾರಿಗೆ ಸಂಬಂಧಿಸಿದಂತೆ ರಾಜೇಗೌಡ ಅಂಡ್ ಕೋ. ಗೆ 6,77,377 ರೂ. ದಂಡ ವಿಧಿಸಲಾಗಿದೆ.
7)ಟ್ರಾಮಾ ಸೆಂಟರ್ ಕಾಮಗಾರಿಗೆ ಸಂಬಂಧಪಟ್ಟಂತೆ ಕೆ.ಬಿ.ಆರ್. ಇನ್ಫ್ರಾಟೆಕ್ ಲಿ.ಗೆ 5,28,000 ರೂ. ದಂಡ ವಿಧಿಸಲಾಗಿದೆ.
8)ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಶ್ರೀನಿವಾಸ ಕನ್ಸ್ಟ್ರಕ್ಷನ್ ಪ್ರೈ.ಲಿ. ಗೆ 5,65,119 ರೂ. ದಂಡ ವಿಧಿಸಲಾಗಿದೆ.
9)ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಸಾಲು ಆಲದ ಮರಗಳ ವಿಶಾಲ ರಾಜಮಾರ್ಗದ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಎ-ಒನ್ ಕನ್ಸ್ಟ್ರಕ್ಷನ್ಗೆ 4,19,625 ರೂ. ದಂಡ ವಿಧಿಸಲಾಗಿದೆ.
10) ಮೂರು ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಪಟ್ಟಂತೆ ಸಾಯಿತ್ರಿಷ ಇನ್ಫ್ರಾ ಇಂಜಿನಿಯರ್ಸ್ಗೆ 1,26,200 ರೂ. ದಂಡ ವಿಧಿಸಲಾಗಿದೆ.
11)ಮಹಾತ್ಮಗಾಂಧಿ ಕ್ರೀಡಾಂಗಣದ ಅಭಿವೃದ್ಧಿ (ಪಿ.ಎಂ.ಸಿ. ವತಿಯಿಂದ ನಕ್ಷೆಗಳ ವಿಳಂಬಕ್ಕಾಗಿ) ಸಂಬಂಧಪಟ್ಟಂತೆ ಸಿ.ಎ.ಡಿ.ಡಿ. ಫೋರಂ, ಬೆಂಗಳೂರು ಇವರಿಗೆ 3,08,060 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತ ಒಟ್ಟಾರೆ ಈ 11 ಗುತ್ತಿಗೆದಾರರಿಂದ ಒಟ್ಟು 1,53,80,748 ರೂ. ಆಗಿದೆ ಎಂದು ಭೂಬಾಲನ್ ಸಂಪೂರ್ಣ ವಿವರ ನೀಡಿದ್ದಾರೆ.
ಪತ್ರಿಕೆಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಯ ಪ್ರಗತಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಹಲವಾರು ಸಭೆಗಳಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಸಹ ಕಾಮಗಾರಿಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿಯನ್ನು ಸಾಧಿಸದೆ ಇರುವ ಹಿನ್ನೆಲೆಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿಗಳ ಗುತ್ತಿಗೆದಾರರಿಗೆ ಈ ರೀತಿ ದಂಡವನ್ನು ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿರ್ಲಕ್ಷಿಸಿದರೆ ಕ್ರಮ : ಅಧಿಕಾರಿಗಳಿಗೂ ಎಚ್ಚರಿಕೆ
ಮುಂದಿನ ದಿನಗಳಲ್ಲಿ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಭೂಬಾಲನ್ ಅವರು ಆದೇಶಿಸಿದ್ದಾರಲ್ಲದೆ, ಈ ವಿಷಯದಲ್ಲಿ ನಿರ್ಲಕ್ಷಿಸಿದರೆ ಗುತ್ತಿಗೆದಾರರ ಜೊತೆಗೆ ಅಧಿಕಾರಿಗಳ ಮೇಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ