ಚಳ್ಳಕೆರೆ
ಚಳ್ಳಕೆರೆ ನಗರದಲ್ಲಿ ನಡೆದ ಪೌರಾಣಿಕ ನಾಟಕಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯೂ ಸೇರಿದಂತೆ ಜಿಲ್ಲೆಯ ಮೂವರು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಭಾಗವಹಿಸಿದ್ದಲ್ಲದೆ, ನಾಟಕಕಲೆಗೆ ಇರುವ ವೈಶಿಷ್ಠ್ಯತೆಯನ್ನು ಪ್ರಶಂಸಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಚಳ್ಳಕೆರೆಯಮ್ಮ ಜಾತ್ರೆ ಪ್ರಯುಕ್ತ ಕಾಲುವೇಹಳ್ಳಿ ಶ್ರೀಗುರು ಕಲಾಸಂಘದ ಆಶ್ರಯದಲ್ಲಿ ಮಂಗಳವಾರ ರಾತ್ರಿ ದುಶ್ಯಾಸನ ವಧೆ, ಎಂಬ ಪೌರಾಣಿಕ ನಾಟಕವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಿಂದ ಹಮ್ಮಿಕೊಂಡಿದ್ದು, ಭೂತಯ್ಯನವರ ವಿಶೇಷ ಮನವಿ ಮೇರೆಗೆ ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಭಾಗವಹಿಸಿದ್ದು ವಿಶೇಷವಾಗಿತ್ತು.
ನಾಟಕದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರನ್ನು ಪರಿಚಯಿಸಿಕೊಂಡ ಅಧಿಕಾರಿಗಳು ದ್ರೌರ್ಪದಿ ಪಾತ್ರದಾರಿ ಕೆ.ಪಿ.ಭೂತಯ್ಯ, ಧರ್ಮರಾಯನ ಪಾತ್ರದಾರಿ ಎಸ್.ಬಿ.ಪಾಲಯ್ಯ ಸೇರಿದಂತೆ ಎಲ್ಲಾ ಕಲಾವಿದ ಕಲಾ ನೈಪುಣ್ಯತೆಯನ್ನು ಪ್ರಶಂಸಿಸಿದರು.
ಪ್ರಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಇಂತಹ ಆಧುನಿಕ ಕಾಲದಲ್ಲೂ ಸಹ ನಮ್ಮ ಗ್ರಾಮೀಣ ಜನರು ನಾಟಕ ಕಲೆಯ ಮೇಲೆ ಇಟ್ಟಿರುವ ವಿಶ್ವಾಸ ಅತ್ಯಂತ ಸಂತೋಷದಾಯಕ. ಸಾವಿರಾರು ಜನರು ನಾಟಕ ನೋಡಲು ಹೆಚ್ಚು ಉತ್ಸಾಹದಿಂದ ಇಲ್ಲಿ ಸೇರಿರುವುದು ಸಾರ್ವಜನಿಕರಿಗೆ ನಾಟಕ ರಂಗದ ಮೇಲೆ ಇರುವ ವಿಶ್ವಾಸ ಮತ್ತು ಅಭಿಮಾನವನ್ನು ತೋರಿಸುತ್ತದೆ. ವಯಸ್ಸಿನಲ್ಲಿ ಹಿರಿಯರಾದ ಕೆ.ಪಿ.ಭೂತಯ್ಯ ದ್ರೌರ್ಪಧಿಯ ಪಾತ್ರದಲ್ಲಿ ಎಲ್ಲರನ್ನೂ ರಂಜಿಸಿದ್ದಾರೆ. ಪ್ರತಿಯೊಂದು ನಾಟಕವೂ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಡುತ್ತದೆ. ನಾವೆಲ್ಲರೂ ಸದಾಕಾಲ ರಂಗಕಲೆಯ ಪ್ರೋತ್ಸಾಹಕ ರಾಗಬೇಕೆಂದರು.
ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ ಮಾತನಾಡಿ, ಹಲವಾರು ಕೆಲಸಗಳ ಮಧ್ಯೆಯೂ ಇಂದು ನಾವು ನಾಟಕ ಕಲೆಯನ್ನು ಗೌರವಿಸುವ ಉದ್ದೇಶದಿಂದ ಇಂತಹ ಕಲೆಯನ್ನು ಸದಾಕಾಲ ಶಾಶ್ವತವಾಗಿ ನೆನೆಸುವ ದೃಷ್ಠಿಯಿಂದ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದರೆ, ಜನರಿಗೆ ನಾಟಕ ರಂಗದ ಕಲೆಯ ಮೇಲಿರುವ ಅಪಾರವಾದ ಬೆಲೆಗೆ ಬೆಲೆಕಟ್ಟಲಾಗದು. ನಾಟಕ ಕಲೆ ಎಂಬುವುದು ನಮಗೆ ನಮ್ಮ ಹಿರಿಯರು ನೀಡಿದ ಶ್ರೇಷ್ಠಕೊಡುಗೆಯಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಚಳ್ಳಕೆರೆಯ ಎಲ್ಲಾ ಕಲಾವಿದರಲ್ಲಿ ಅಡಗಿರುವ ಕಲೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂತಹ ಇಳಿವಯಸ್ಸಿನಲ್ಲೂ ಕೆ.ಪಿ.ಭೂತಯ್ಯ ತನ್ನ ನಟನಾ ಸಾಮಥ್ರ್ಯವನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಪ್ರತಿನಿತ್ಯ ದೂರದರ್ಶನದ ಮುಂದೆ ದಾರಾವಾಹಿ ನೋಡುವುದಲ್ಲಿ ನಿರತರಾಗುವ ನಮ್ಮ ಮಹಿಳಾ ಸಮುದಾಯ ಇಂತಹ ನಾಟಕಗಳನ್ನು ಹೆಚ್ಚು ನೋಡಬೇಕು. ನಾಟಕದ ಅಭಿನಯ ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ನಮ್ಮಲ್ಲಿ ಅಡಗಿರುವ ಕೆಟ್ಟಚಟಗಳನ್ನು ದೂರಮಾಡಲು ಸಹ ಇದು ಸಹಕಾರಿ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಂದು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ನಾಟಕ ಕಲೆಯ ಮೇಲೆ ಅವರಿಗೆ ಇರುವ ಅಪಾರವಾದ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಾಟಕ ಕಲೆ ನೈಜ್ಯಕಲೆಯಾಗಿದ್ದು, ಯಾವುದೇ ಅಪಾರ್ಥಗಳಿಲ್ಲದೆ ಎಲ್ಲಾ ಪಾತ್ರಧಾರಿಗಳು ಯಶಸ್ವಿಯಾಗಿ ನಿರ್ವಹಿಸಿದ್ಧಾರೆ. ದ್ರೌರ್ಪದಿಯ ಪಾತ್ರದಾರಿ ಕೆ.ಪಿ.ಭೂತಯ್ಯ ಈ ನಾಟಕ ರಂಗದ ಕೇಂದ್ರಬಿಂದು ಪ್ರತಿಯೊಬ್ಬರೂ ನಾಟಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಬೇಕೆಂದರು.
ರಾಜ್ಯಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಶ್ರೀಚಳ್ಳಕೆರೆಯಮ್ಮ ಜಾತ್ರೆ ಹಿನ್ನೆಲೆಯಲ್ಲಿ ಇಂದು ತಾಯಿಗೆ ಉಡಿ ತುಂಬಲಾಗಿದೆ. ಅದೇ ರೀತಿ ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಜಿಲ್ಲೆಯ ಮೂವರು ಹೆಮ್ಮೆಯ ಮಹಿಳಾ ಅಧಿಕಾರಿಗಳಿಗೆ ನಾವು ಚಳ್ಳಕೆರೆಯ ತವರು ಮನೆ ಉಡುಗರೆಯಾಗಿ ನೀರೆಯನ್ನು ನೀಡುತ್ತಿದ್ದೇವೆಂದು ತಿಳಿಸಿದ್ದು, ಶಾಸಕರ ಪತ್ನಿ ಗಾಯಿತ್ರಿ ರಘುಮೂರ್ತಿ ಸೀರೆ ವಿತರಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ರವಿಕುಮಾರ್, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ, ಪಿಎಸ್‍ಐ ನೂರ್ ಆಹಮ್ಮದ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ