ಬೆಂಗಳೂರು
ಕೊರೋನಾ ಸೋಂಕಿನಿಂದ ರಾಜ್ಯ ಕಂಗಾಲಾಗಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಂತ್ರಿಮಂಡಲದ ಬಹುತೇಕ ಸಚಿವರು ತಮ್ಮ ಖಾತೆಗಳ ಕಡೆ ತಿರುಗಿ ನೋಡದೆ ನಿರ್ಲಕ್ಷ್ಯ ತೋರುತ್ತಿರುವ ಅಂಶ ಕೇಂದ್ರ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.ಕೊರೋನಾ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸಲು ಕಾರ್ಯಾಂಗವನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕಾದ ಬಹುತೇಕ ಸಚಿವರು ತಮ್ಮ ತಮ್ಮ ಖಾತೆಗಳ ಕತೆ ಏನಾಗಿದೆ?ಎಂದು ತಿಳಿಯುವ ಗೋಜಿಗೂ ಹೋಗಿಲ್ಲ.
ಸರ್ಕಾರದ ಪ್ರತಿಯೊಂದು ಇಲಾಖೆಗಳಿಗೂ ರಾಜ್ಯಾದ್ಯಂತ ತನ್ನದೇ ಕಾರ್ಯವ್ಯಾಪ್ತಿಯಿದ್ದು ಕೊರೋನಾ ಭೀತಿಯಿಂದ ಎಲ್ಲ ವಲಯಗಳೂ ಕಂಗಾಲಾಗಿವೆ.ಆದರೆ ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲೋ,ಜಿಲ್ಲೆಯಲ್ಲೋ ನೆಲೆಸಿ ಜನರನ್ನು ಮನೆ ಒಳಗೆ ಕಳಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
ಪೊಲೀಸರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಆಗಬೇಕಾದ ಈ ಕಾರ್ಯವನ್ನು ಅವರಿಂದಲೇ ಮಾಡಿಸಿ ,ಸಚಿವರಾದವರು ಕೊರೋನಾ ಹೊಡೆತಕ್ಕೆ ತಮ್ಮ ಇಲಾಖೆಗಳು ಅನುಭವಿಸುತ್ತಿರುವ ಸಂಕಷ್ಟದ ಕಡೆ ಗಮನ ಹರಿಸಬೇಕಾಗಿತ್ತು.
ಒಂದು ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಎಂದರೆ ರಾಜ್ಯವ್ಯಾಪಿ ಇರುವ ಅದರ ಕಾರ್ಯಕ್ಷೇತ್ರದಲ್ಲಿ ಆಗಿರುವ ತೊಂದರೆಯನ್ನು ಗಮನಿಸುವುದು ಮತ್ತು ಪರಿಹಾರ ಕಲ್ಪಿಸಿಕೊಡುವುದು ಸಚಿವರ ಕೆಲಸ.ಆದರೆ ಬಹುತೇಕರಿಗೆ ಜನರಿಗೆ ತಿಳಿವಳಿಕೆ ನೀಡಿ,ಮನೆಯಲ್ಲಿ ಕೂರಿಸುವುದನ್ನು ಹೊರತುಪಡಿಸಿದರೆ ಬೇರೆ ಕೆಲಸವೇ ಇಲ್ಲ.
ಈ ಕೆಲಸವನ್ನು ಶಾಸಕರು,ಅಧಿಕಾರಿಗಳು ಮಾಡಬೇಕು.ಆದರೆ ಸಚಿವರಾದವರೂ ಈ ಕೆಲಸಕ್ಕೆ ಮುಂದಾಗಿ ತಮ್ಮ ತಮ್ಮ ಖಾತೆಗಳನ್ನು ಮರೆತಿರುವ ಬಗ್ಗೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿರುವ ಅಂಶ ಬೆಳಕಿಗೆ ಬಂದಿದೆ.
ಮಂತ್ರಿಗಳಾದವರು ತಮ್ಮ ತಮ್ಮ ಖಾತೆಗಳಿಗೆ ಏನಾಗಿದೆ?ಕೊರೋನಾ ಬಿಸಿಗೆ ತಗಲಿ ತಮ್ಮ ಖಾತೆಯ ಯಾವ್ಯಾವ ಅಂಗಗಳು ಸುಟ್ಟು ಹೋಗಿವೆ?ಅದನ್ನು ಸರಿಪಡಿಸಲು ಏನು ಮಾಡಬೇಕು?ಅನ್ನುವ ಯೋಚನೆಯೇ ಇಲ್ಲದೆ ಬಹುತೇಕ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ,ಜಿಲ್ಲೆಗಳಿಗೆ ಸೀಮಿತಗೊಂಡಿರುವುದು ಸರಿಯಲ್ಲ ಎಂಬುದು ಕೇಂದ್ರದ ಸಚಿವರೊಬ್ಬರ ಮಾತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಚಿವ ಸಂಪುಟದ ನಾಲ್ಕೈದು ಮಂದಿ ಸಚಿವರನ್ನು ಬಿಟ್ಟರೆ ಉಳಿದವರೆಲ್ಲ ಇಂತಹ ನಿರ್ಲಕ್ಷ್ಯದ ಧೋರಣೆ ತೋರುತ್ತಿದ್ದು ಮಂತ್ರಿಗಿರಿಗೇ ಅವಮಾನ ಮಾಡುತ್ತಿದ್ದಾರೆ ಎಂಬುದು ಈ ಸಚಿವರ ನೋವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








