ಮುಂದಿನ 10 ದಿನಗಳ ಕಾಲ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ :ಟಿ.ರಘುಮೂರ್ತಿ

ಚಳ್ಳಕೆರೆ

     ತಾಲ್ಲೂಕಿನ ಜನರ ಜೀವನಕ್ಕೆ ಕಂಟಕ ಪ್ರಾಯವಾಗಿರುವ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದು, ಉಳಿದ 10 ದಿನಗಳ ಅವಧಿಯಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ವಿಶೇಷ ಆಸಕ್ತಿ ತೋರಿ ಕೊರೋನಾ ವೈರಾಣು ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ವಿನಂತಿಸಿದರು.

     ಅವರು, ಶನಿವಾರ ಬೆಳ್ಳಂಬೆಳಗ್ಗೆ ನಗರಸಭೆಯ ಆವರಣದಲ್ಲಿ ಕೆಎಂಎಫ್ ಹಾಲು ವಿತರಣೆ ವೀಕ್ಷಿಸಿ ನಂತರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಎಲ್ಲರ ಪರಿಶ್ರಮದಿಂದ ಭಗವಂತನ ಕೃಪೆಯಿಂದ ಈ ಭಾಗದಲ್ಲಿ ಎಲ್ಲೂ ಸಹ ಈ ಪ್ರಾಣಾಂತಿಕ ರೋಗ ಕಾಣಿಸಿಕೊಂಡಿಲ್ಲ. ಆದರೆ, ಎಚ್ಚರಿಕೆ ವಹಿಸದೆ ನಿರ್ಲಕ್ಷತೋರಿದಲ್ಲಿ ಇಷ್ಟು ದಿನಗಳ ಪ್ರಯತ್ನ ಫಲ ನೀಡುವುದಿಲ್ಲ. ಆದ್ದರಿಂದ ಉಳಿದ ಅವಧಿಯಲ್ಲೂ ಸಹ ವಿಶೇಷ ಆಸಕ್ತಿ ವಹಿಸಿ ಯಾವುದೇ ಹಂತದಲ್ಲೂ ಈ ರೋಗ ಇಲ್ಲಿ ಸುಳಿಯದಂತೆ ಎಚ್ಚರಿಕೆ ವಹಿಸಬೇಕೆಂದರು.

     ನಗರ ಸಭೆ ವ್ಯಾಪ್ತಿಯ ವಾರ್ಡ್‍ಗಳ ನೈರ್ಮಲ್ಯ ಸ್ಥಿತಿಯ ಬಗ್ಗೆ ಪೌರಾಯುಕ್ತ ಪಿ.ಪಾಲಯ್ಯನವರನ್ನು ಪ್ರಶ್ನಿಸಿದಾಗ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ಪ್ರತಿನಿತ್ಯ ಬೆಳಗಿನಿಂದ ಸಂಜೆ ತನಕ ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದೆರಡು ವಾರ್ಡ್‍ಗಳನ್ನು ಹೊರತು ಪಡಿಸಿ ಎಲ್ಲೆಡೆ ಸ್ವಚ್ಚತೆ ಕೈಗೊಳ್ಳಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಈಗಾಗಲೇ ನಗರಸಭೆಯ 20 ವಾರ್ಡ್‍ಗಳಲ್ಲಿ ಸ್ಪೇ ಮಾಡಿಸಲಾಗಿದೆ ಎಂದರು.

     ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾಹಿತಿ ನೀಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದು, ಜನರೂ ಸಹ ಸಹಕಾರ ನೀಡುತ್ತಿದ್ದು, ಯಾವುದೇ ರೀತಿಯ ರೋಗ ಹರಡದಂತೆ ಜಾಗೃತೆ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪರಸ್ವರ ಚರ್ಚಿಸಿ ಕಾರ್ಯಪ್ರವೃತ್ತರಾಗಿರುವುದರಿಂದ ಎಲ್ಲೂ ಸಹ ಇದರ ಸುಳಿವು ಇಲ್ಲವೆಂದರು.

    ಡಿವೈಎಸ್ಪಿ ಎಸ್.ರೋಷನ್ ಜಮೀರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಸಮಾಜ ಕಲ್ಯಾಣಾಧಿಕಾರಿ ಜಿ.ಆರ್.ಮಂಜಪ್ಪ, ಕಾರ್ಮಿಕ ಅಧಿಕಾರಿ ಶಫೀವುಲ್ಲಾ, ಎಪಿಎಂಸಿ ಉಪನಿರ್ದೇಶಕ ಶ್ರೀನಿವಾಸ್‍ರೆಡ್ಡಿ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಟಿ.ಮಲ್ಲಿಕಾರ್ಜುನ, ಆರ್.ರುದ್ರನಾಯಕ, ಸಿ.ಶ್ರೀನಿವಾಸ್, ವೀರಭದ್ರಪ್ಪ, ಚಳ್ಳಕೆರೆಯಪ್ಪ, ವಿಶುಕುಮಾರ್, ಎಂ.ಸಾವಿತ್ರಿ, ವೈ.ಪ್ರಕಾಶ್, ವೆಂಕಟೇಶ್, ವಿ.ವೈ.ಪ್ರಮೋದ್, ಎಂ.ಜೆ.ರಾಘವೇಂದ್ರ, ಎಚ್.ಪ್ರಶಾಂತ್‍ಕುಮಾರ್ ಮುಂತಾದವರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link