ತುಮಕೂರು : ಸಂಕಷ್ಟದ ಹೂ ಬೆಳೆಗಾರರಿಗೆ ಪರಿಹಾರದ ಸಾಂತ್ವಾನ

 ತುಮಕೂರು :

      ಕೊರೊನಾ ಕಾರಣದಿಂದಾಗಿ ಲಾಕ್‍ಡೌನ್ ಘೋಷಣೆ ಆದಾಗಿನಿಂದ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿವೆ. ಈಗ ಸರ್ಕಾರ ಅವುಗಳ ಚೇತರಿಕೆಗೆ ಅಗತ್ಯ ಅವಕಾಶ, ಕ್ರಮ ಕೈಗೊಂಡು ಚಟುವಟಿಕೆಗಳನ್ನು ಚುರುಕುಗೊಳಿಸುವ ಪ್ರಯತ್ನ ಮಾಡುತ್ತಿದೆ. ಎಲ್ಲಾ ವ್ಯವಹಾರಗಳಿಗಿಂಥಾ ಈ ಬಾರಿ ಹೆಚ್ಚು ಹಾನಿಯಾಗಿದ್ದು ಹೂವಿವ ವಹಿವಾಟಿಗೆ. ಲಾಕ್‍ಡೌನ್ ಕಾರಣದಿಂದಹೂವಿಗೆ ಹೆಚ್ಚು ಬೇಡಿಕೆ ಪಡೆಯುತ್ತಿದ್ದ ಮದುವೆ, ಜಾತ್ರೆ, ಉತ್ಸವದಂತಹ ಕಾರ್ಯಕ್ರಮಗಳು ಈ ಬಾರಿ ನಡೆಯಲೇ ಇಲ್ಲ.

      ಆಂಧ್ರ, ತಮಿಳುನಾಡು, ಮುಂಬೈ ಮುಂತಾದ ಮಾರುಕಟ್ಟೆಗಳಿಗೆ ಜಿಲ್ಲೆಯ ಹೂ ಬೆಳೆಗಾರರು ಹೂ ಕಳುಹಿಸಿ ಲಾಭ ಕಾಣುತ್ತಿದ್ದರು. ಲಾಕ್‍ಡೌನ್ ಕಾರಣದಿಂದ ಹೊರ ರಾಜ್ಯಗಳಿಗೆ ಸಾಗಾಣಿಕೆ ವ್ಯವಸ್ಥೆ ಇಲ್ಲದೆ, ಅಲ್ಲಿನ ಮಾರುಕಟ್ಟೆಗಳೂ ಇಲ್ಲದೆ, ಇಲ್ಲಿ ಬೆಳೆದ ಹೂಗಳನ್ನು ಹೊರ ಸಾಗಿಸಲಾಗದೆ ಹೂ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಯಿತು. ಜಿಲ್ಲೆಯ ಎಷ್ಟೋ ಕಡೆ ಹೂವಿನ ಬೆಳೆಗಾರರು ಗಿಡಗಳಿಂದ ಹೂ ಕೀಳುವ ಪ್ರಯತ್ನ ಮಾಡಲಿಲ್ಲ. ಹೂಗಳು ಗಿಡದಲ್ಲೇ ಬಾಡಿ, ಒಣಗಿ ಉದುರಿಹೋಗಿ ಬೆಳೆಗಾರರು ನೋವು, ನಷ್ಟ ಅನುಭವಿಸಿದರು.

      ತರಕಾರಿ, ಆಹಾರ ಪದಾರ್ಥಗಳ ವಹಿವಾಟು ನಿಯಮಿತವಾಗಿ ನಡೆದಿದೆಯಾದರೂ ಇನ್ನುಳಿದ ವ್ಯವಹಾರ ಸ್ಥಗಿತಗೊಂಡಿದೆ. ಅದರಲ್ಲೂ ಹೂವಿನ ವಹಿವಾಟು ಈ ವರ್ಷ ಇಲ್ಲವೇ ಇಲ್ಲ ಎನ್ನವಂತಾಗಿ ಹೂವು ಬೆಳೆದವರ ಬದುಕು ಬಾಡಿ ಹೋಗಿದೆ.

      ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹೂ ಬೆಳೆಗಾರರ ಸಂಕಷಷ್ಟಕ್ಕೆ ನೆರವಾಗಲು ಪರಿಹಾರ ಘೋಷಣೆ ಮಾಡಿದೆ. ಅದರಂತೆ ಹೂ ಬೆಳೆಗಾರರಿಗೆ ಗರಿಷ್ಟ ಒಂದು ಹೆಕ್ಟೇರ್‍ವರೆಗೆ 25 ಸಾವಿರ ರೂ.ಗಳಂತೆ ಪರಿಹಾರ ಘೋಷಿಸಿದೆ. ಒಂದು ಹೆಕ್ಟೇರ್‍ಗಿಂತಾ ಕಡಿಮೆ ವಿಸ್ತೀರ್ಣದ ಬೆಳೆಗಾರರಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುತ್ತದೆ.

      2019-20ನೇ ಸಾಲಿನಲ್ಲಿ ಸರ್ಕಾರ ಮೊಬೈಲ್ ಆಪ್ ಬೆಳೆ ಸಮೀಕ್ಷೆ ನಡೆಸಿ ಬೆಳೆಯನ್ನು ದೃಢೀಕರಿಸಲಾಗಿತ್ತು. ಸಮೀಕ್ಷೆಯಲ್ಲಿ ದೃಢೀಕರಣದ ಜಿಲ್ಲೆಯ ಸುಮಾರು 4400 ಹೂ ಬೆಳೆಯುವ ರೈತರ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ, ಗ್ರಾಮ ಪಂಚಾಯ್ತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು. ಸದರಿ ಪಟ್ಟಿಯಲ್ಲಿ ಹೆಸರಿರುವ ರೈತರು ಯಾವುದೇ ಅರ್ಜಿ ಹಾಗೂ ದಾಖಲೆಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಇವರಿಗೆ ಸರ್ಕಾರದ ಪರಿಹಾರಧನ ದೊರೆಯುತ್ತದೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ. ರಘು ಹೇಳಿದರು.

      ಹೂ ಬೆಳೆಗಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ರೈತರು ಹೂ ಬೆಳೆಗಾರರಾಗಿದ್ದಲ್ಲಿ ಸಂಬಂಧಿಸಿದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ನಿಗಧಿತ ಅರ್ಜಿ ಹಾಗೂ ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಪಾಸ್‍ಬುಕ್‍ನ ಝೆರಾಕ್ಸ್, ಬೆಳೆಯ ಸ್ವಯಂ ದೃಢೀಕರಣದೊಂದಿಗೆ ಈ ತಿಂಗಳ 28ರೊಳಗೆ ಆಯಾ ತೋಟಗಾರಿಕಾ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಮಾರ್ಚ್ 24ರ ನಂತರ ನಾಟಿ ಮಾಡಿರುವ ಹೂವಿನ ಬೆಳೆಯನ್ನು ಸದರಿ ಯೋಜನೆಯಡಿ ಪರಿಹಾರಧನಕ್ಕೆ ಪರಿಗಣಿಸಲು ಅವಕಾಶವಿಲ್ಲ ಎಂದು ಹೇಳಿದರು.

      ಹೋಬಳಿ ಮಟ್ಟದ ಜಂಟಿ ಸಮೀಕ್ಷಾ ಸಮಿತಿಯವರು ಅರ್ಜಿಸಲ್ಲಿಸಿದ ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪರಿಹಾರ ಧನ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

       ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ನಿರ್ದೇಶಕರು, ತುಮಕೂರು-9945792725, ಗುಬ್ಬಿ-9686056705, ಕುಣಿಗಲ್-9448660766, ತಿಪಟೂರು-9964791910, ಚಿಕ್ಕನಾಯಕನಹಳ್ಳಿ-9538272964, ತುರವೇಕೆರೆ-9448416334, ಶಿರಾ-9945735297, ಕೊರಟಗೆರೆ-9535781963, ಮಧುಗಿರಿ-9448448970, ಪಾವಗಡ-9844042356.
ಹಿರಿಯ ಸಹಾಯಕ ನಿರ್ದೇಶಕರು ತುಮಕೂರು-0816-2279705; ಕೋರಾ ಮತ್ತು ಬೆಳ್ಳಾವಿ ಹೋಬಳಿ-8970553395; ಹೆಬ್ಬೂರು ಮತ್ತು ಕಸಬಾ ಹೋಬಳಿ-9538287992; ಊರ್ಡಿಗೆರೆ ಮತ್ತು ಗೂಳೂರು ಹೋಬಳಿ-9986548685 ಆಯಾ ತೋಟಗಾರಿಕೆ ಹೋಬಳಿ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಉಪನಿರ್ದೇಶಕ ಬಿ.ರಘು ಹೇಳಿದ್ದಾರೆ.

 
      2019-20ನೇ ಸಾಲಿನಲ್ಲಿ ಸರ್ಕಾರ ಮೊಬೈಲ್ ಆಪ್ ಬೆಳೆ ಸಮೀಕ್ಷೆ ನಡೆಸಿ ಬೆಳೆಯನ್ನು ದೃಢೀಕರಿಸಲಾಗಿತ್ತು. ಸಮೀಕ್ಷೆಯಲ್ಲಿ ದೃಢೀಕರಣದ ಜಿಲ್ಲೆಯ ಸುಮಾರು 4400 ಹೂ ಬೆಳೆಯುವ ರೈತರ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ, ಗ್ರಾಮ ಪಂಚಾಯ್ತಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು. ಸದರಿ ಪಟ್ಟಿಯಲ್ಲಿ ಹೆಸರಿರುವ ರೈತರು ಯಾವುದೇ ಅರ್ಜಿ ಹಾಗೂ ದಾಖಲೆಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಇವರಿಗೆ ಸರ್ಕಾರದ ಪರಿಹಾರಧನ ದೊರೆಯುತ್ತದೆ.

-ಬಿ.ರಘು, ಉಪನಿರ್ದೇಶಕರು, ಜಿಲ್ಲಾ ತೋಟಗಾರಿಕಾ ಇಲಾಖೆ.

Recent Articles

spot_img

Related Stories

Share via
Copy link