ಕೋವಿಡ್‍ನಿಂದ 11 ಜನ ಗುಣಮುಖ:ಡಿಸ್ಚಾರ್ಜ್‍ಗೆ ನಿರ್ಧಾರ

ಬಳ್ಳಾರಿ

      ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‍ನಿಂದ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ 21 ಜನರಲ್ಲಿ 11 ಜನರು ಗುಣಮುಖರಾಗಿದ್ದು,ಅವರನ್ನು ಡಿಸ್ಚಾರ್ಜ್ ಮಾಡಲು ನಿರ್ಧರಿಸಲಾಗಿದೆ.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಬಾಕಿ ಉಳಿದ ಇನ್ನೂ 10 ಜನರು ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರು ಸಹ ಶೀಘ್ರ ಬಿಡುಗಡೆಯಾಗಲಿದ್ದಾರೆ. ಇನ್ಮುಂದೆ ಹೊಸದಾಗಿ ಬಂದಿರುವ ಡಿಸ್ಚಾರ್ಜ್ ಪಾಲಿಸಿ ಅನುಸಾರ ಕೋವಿಡ್‍ನಿಂದ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

    ಆದ್ಯತೆ ಮೇರೆಗೆ ಈಗ ಕ್ವಾರಂಟೈನ್ ಕೇಂದ್ರಗಳಲ್ಲಿರುವ ಮತ್ತು ಹೋಟಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿರುವ 900 ಜನರ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸಿ ತಪಾಸಣೆ ಮಾಡಿ ಶೀಘ್ರ ಕಳುಹಿಸಿಕೊಡಲಾಗುವುದು. ಇನ್ಮುಂದೆ ಹೈರಿಸ್ಕ್ ರಾಜ್ಯಗಳಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ ಮತ್ತು ಮಧ್ಯಮ ಮತ್ತು ಲೋ ರಿಸ್ಕ್ ರಾಜ್ಯಗಳಿಂದ ಬರುವವರನ್ನು ನೇರವಾಗಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

      ಪ್ರೈಮರಿ ಕಂಟ್ಯಾಕ್ಟ್‍ನಲ್ಲಿರುವವರಿಗೆ 5 ಮತ್ತು 10ದಿನದಲ್ಲಿ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸಿ ತಪಾಸಣೆ ಮಾಡಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿಕೊಡಲಾಗುವುದು ಎಂದು ವಿವರಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತಾಲೂಕುಮಟ್ಟದ ಆಸ್ಪತ್ರೆಗಳಲ್ಲಿ 20 ಹಾಸಿಗೆಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಕೋವಿಡ್ ಕುರಿತು ಪರಿಣಾಮಕಾರಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಎಂಎ ಮತ್ತು ಖಾಸಗಿ ಆಸ್ಪತ್ರೆಗಳು ಕ್ರಮವಹಿಸಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಧರಿಸುವಿಕೆ,ಸ್ಯಾನಿಟೈಸರ್ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಟಿಕ್ಕರ್,ಬ್ಯಾನರ್ ಇನ್ನೀತರ ಜಾಗೃತಿ ಸಂದೇಶಗಳನ್ನು ಪಸರಿಸುವ ಕೆಲಸ ಮಾಡಬೇಕು ಎಂದರು.

      ಆಯುಷ್ ಆಯುಕ್ತಾಲಯದಿಂದ ಇಮ್ಯುನಿಟಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯಸಿಬ್ಬಂದಿಗೆ ಯುನಾನಿ ಮತ್ತು ಔಷಧಿಗಳು ಬಂದಿದ್ದು,ಅವುಗಳನ್ನು ಎಲ್ಲ ಸಿಬ್ಬಂದಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ಅವರು ತಿಳಿಸಿದರು.

      ಜಿಪಂ ಸಿಇಒ ಕೆ.ನಿತೀಶ್ ಅವರು ಮಾತನಾಡಿದರು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್, ಪ್ರಸನ್ನ್, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಮರಿರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link