ಬಳ್ಳಾರಿ
ಸ್ವಚ್ಚತೆಯನ್ನು ಕಾಪಾಡುವುದಕ್ಕೆ ಮುಂದಾಗಿ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಹಾಗೂ ನೀರಿನ ಸಂರಕ್ಷಣೆ ಮಾಡಲು ಜಿಪಂ ಸಿಇಒ ಕೆ.ನಿತೀಶ್ ಅವರು ಸಲಹೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಳ್ಳಾರಿ ತಾಲೂಕಿನ ಚೆಳ್ಳಗುರ್ಕಿಯ ಎರ್ರಿಸ್ವಾಮಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಚ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರೈತರು ತಮ್ಮ ಹೊಲಗಳಲ್ಲಿ ನರೇಗಾ ಮತ್ತು ಜಲಾಮೃತ ಯೋಜನೆಯಡಿ ಕೃಷಿಹೊಂಡ ನಿರ್ಮಾಣ ಬದು ನಿರ್ಮಾಣ ಮಾಡುವ ಮೂಲಕ ಮಣ್ಣಿನ ಸಂರಕ್ಷಣೆ ಮತ್ತು ಅಂತರ್‍ಜಲ ಮಟ್ಟವನ್ನು ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಸ್ವಚ್ಛತೆ ಮತ್ತು ನೀರಿನ ಸಂರಕ್ಷಣೆಯನ್ನು ಸರಕಾರಿ ಅಧಿಕಾರಿಗಳಿಂದಲೇ ಮಾಡಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದ ಅವರು, ಶೌಚಾಲಯಗಳನ್ನು ನಿರ್ಮಾಣ ಮಾಡಿ ಮತ್ತು ಬಳಕೆ ಮಾಡಿ ಎಂದು ಅವರು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಜಿಪಂ ಸದಸ್ಯ ಅಲ್ಲಂ ಪ್ರಶಾಂತ್, ತಾಪಂ ಇಒ ಜಾನಕಿರಾಮ್ ಮಾತನಾಡಿ ದರು.ಈ ಸಂದರ್ಭದಲ್ಲಿ ಚೆಳ್ಳಗುರ್ಕಿ ಗ್ರಾಪಂ ಅಧ್ಯಕ್ಷ ಎನ್.ಹನುಮಂತ, ಬಳ್ಳಾರಿ ತಾಪಂ ಅಧ್ಯಕ್ಷೆ ರಮೀಜಾಭಿ, ತಾಪಂ ಸದಸ್ಯ ಗೊವಿಂದಪ್ಪ , ಜಿಲ್ಲಾ ಅರಣ್ಯಾಧಿಕಾರಿ ಕಿರಣ್, ಬಿಇಒ ವೆಂಕಟೇಶ ಸೇರಿದಂತೆ ಅನೇಕರು ಇದ್ದರು.ಪ್ರೌಢ ಶಾಲಾ ಶಿಕ್ಷಕಿ ಯು.ಸುನಿತಾ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ