ಲಾಕ್ ಡೌನ್ ಕೊರೋನಾ ಬದಲಿಗೆ ಆರ್ಥಿಕತೆಯನ್ನು ನಿಯಂತ್ರಿಸಿದೆ : ರಾಜೀವ್ ಬಜಾಜ್

ನವದೆಹಲಿ:

     ಕೊರೋನಾ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿರುವ ಲಾಕ್ ಡೌನ್ ವೈರಸ್ ನಿಯಂತ್ರಣದ ಬದಲಾಗಿ ದೇಶದ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ಹಾಗಿದೆ ಎಂದು ಖ್ಯಾತ ಉದ್ಯಮಿ ರಾಜೀವ್ ಬಜಾಜ್ ಹೇಳಿದ್ದಾರೆ.

     ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಆಯೋಜಿಸಿದ್ದ ಸೋಷಿಯಲ್ ಮೀಡಿಯಾ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಜಾಜ್ ಆಟೋ ಸಂಸ್ಥೆ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ಅವರು, ಪ್ರಧಾನಿ ಮೋದಿ ಅವರು  ಹೇರಿದ್ದ ಲಾಕ್ ಡೌನ್ ನಿಂದಾಗಿ ಖಂಡಿತಾ ನಿಯಂತ್ರಣವಾಗಿದೆ, ಆದರೆ ಅದು ವೈರಸ್ ನಿಯಂತ್ರಣವಲ್ಲ ಬದಲಿಗೆ ದೇಶದ ಆರ್ಥಿಕತೆ ನಿಯಂತ್ರಣವಾಗಿದೆ. ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಕುಸಿದಿದೆ ಎಂದು ಹೇಳಿದ್ದಾರೆ.

    ಲಾಕ್ ಡೌನ್ ಬಳಿಕ ಪ್ರಧಾನಿ ಮೋದಿ ಅವರ ಅನ್ ಲಾಕ್ ನಡೆ ಕುರಿತು ಮಾತನಾಡಿರುವ ರಾಜೀವ್ ಬಜಾಜ್ ಅವರು, ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಉತ್ತಮ ಕ್ರಮವಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಜಪಾನ್ ಮತ್ತು ಸ್ವೀಡನ್ ದೇಶಗಳ ಉದಾಹರಣೆ ನೀಡಿದ ರಾಜೀವ್ ಬಜಾಜ್ ಅವರು, ಈ ದೇಶಗಳು ಲಾಕ್ ಡೌನ್ ಹೇರಿರಲಿಲ್ಲ. ಬದಲಿಗೆ ವೈರಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿದ್ದವು. ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆ ನೀಡಿದ್ದವು. ಈ ದೇಶಗಳಲ್ಲಿ ಅಂಗಡಿಗಳು, ರೆಸ್ಟೋರೆಂಟ್ ಗಳು ತೆರೆದೇ ಇದ್ದವು. ಕೆಲ ವಿದ್ಯಾರ್ಥಿಗಳು ವೈರಸ್ ಭೀತಿ ನಡುವೆಯೇ ಶಾಲೆಗಳಿಗೆ ಹೋಗುತ್ತಿದ್ದರು. ಈ ದೇಶಗಳ ಗಡಿ ಎಂದಿನಂತೆ ಕಾರ್ಯ ನಿರ್ವಹಿಸಿತ್ತು. ಇದು ಈ ದೇಶಗಳ ಆರ್ಥಿಕತೆ ಕುಸಿಯದಂತೆ ನೋಡಿಕೊಂಡಿತು. 

         ಕೊರೋನಾ ವೈರಸ್ ಗೆ ತುತ್ತಾಗಿದ್ದ ಇತರೆ ದೇಶಗಳೂ ಕೂಡ ಇದೇ ರೀತಿಯ ನಡೆ ಅನುಸರಿಸಿತ್ತು. ಆದರೆ ಆ ಬಳಿಕ ಈ ದೇಶಗಳಲ್ಲಿ ಕೊರೋನಾ ಸಾವು ದುಪ್ಪಾಟಾಗಿತ್ತು. ವಿಶ್ವದ ಬಹುತೇಕ ದೇಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪರ್ಯಾಯ ಮಾರ್ಗಗಳನ್ನು ಹುಡುಕಿ ಜನರಿಗೆ ಮಾಹಿತಿ ನೀಡುತ್ತಿವೆ. ಅದಕ್ಕೆ ತಕ್ಕಂತೆ ನಿಯಮಾವಳಿಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರುತ್ತಿವೆ ಎಂದು ರಾಜೀವ್ ಬಜಾಜ್ ಹೇಳಿದ್ದಾರೆ.

       ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಲಾಕ್ ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿದೆ.  2ನೇ ವಿಶ್ವಯುದ್ಧದ ಸಂದರ್ಭದಲ್ಲೂ ಇಡೀ ವಿಶ್ವ ಲಾಕ್ ಡೌನ್ ಎದುರಿಸಿತ್ತು. ಆದರೆ ಅಂತಹ ಕಠಿಣ ಸಂದರ್ಭದಲ್ಲೂ ಕೂಡ ಸಂಪೂರ್ಣ ವ್ಯವಸ್ಥೆ ಸ್ಥಗಿತವಾಗಿರಲಿಲ್ಲ. ಆದರೆ ಮೋದಿ ಸರ್ಕಾರ ಕೈಗೊಂಡ ಕ್ರಮದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು, ಆರ್ಥಿಕ ಅಭಿವೃದ್ಧಿ ದರ ನೆಗೆಟಿವ್ ಗೆ ಕುಸಿದಿದೆ. ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಲಾಕ್ ಡೌನ್ ವೈರಸ್ ಗಿಂತಲೂ ಮಾರಕವಾಗಿ ಪರಿಣಮಿಸಿತ್ತು ಎಂದು ಹೇಳಿದ್ದಾರೆ.

      ಅಂತೆಯೇ ಕೊರೋನಾ ವೈರಸ್ ನಿರ್ಣಾಯಕ ಹಂತ ತಲುಪಿರುವಾಗ ಕೇಂದ್ರ ಸರ್ಕಾರ ನಿಯಂತ್ರಣವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಈ ನಡೆ ತೀರಾ ತಡವಾದದ್ದು. ಬಹುಶಃ ಭಾರತ ದೇಶವೊಂದೇ ಕೊರೋನಾ ವೈರಸ್ ನಿಯಂತ್ರಣದಲ್ಲಿದ್ದಾಗ ಲಾಕ್ ಡೌನ್ ಹೇರಿ, ವೈರಸ್ ಆರ್ಭಟ ಜಾರಾಗಿದ್ದಾಗ ಲಾಕ್ ಡೌನ್ ತೆಗೆಯುತ್ತಿರುವ ಮೊದಲ ದೇಶವೇನೋ ಎಂಬಂತಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆಯೇ ಕೂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಇದೇ ರೀತಿಯ ವಾಗ್ದಾಳಿ ನಡೆಸಿದ್ದರು.

       ಇನ್ನು  ಲಾಕ್ ಡೌನ್ ಕುರಿತಂತೆ ಈ ಹಿಂದೆ ಮಾತನಾಡಿದ್ದ ರಾಜೀವ್ ಬಜಾಜ್,  ಬಿಕ್ಕಟ್ಟು ಒಂದು ವೈರಸ್‌ನಿಂದ ಆರಂಭಗೊಂಡಿತ್ತು, ಆದರೆ ಸರ್ಕಾರವು ಅದನ್ನು ಹರಡುತ್ತಿದೆ. ಲಾಕ್‌ಡೌನ್ ಆರೋಗ್ಯ ಬಿಕ್ಕಟ್ಟಿಗೆ ದೀರ್ಘಾವಧಿಯ ಉತ್ತರವಲ್ಲ. ಯುವಜನರು ಮತ್ತು ಆರೋಗ್ಯವಂತರು ಕೆಲಸಕ್ಕೆ ಮರಳುವುದು ಅಗತ್ಯವಾಗಿದೆ. ಲಾಕ್‌ಡೌನ್ ನಿರಂಕುಶವಾಗಿದೆ ಮತ್ತು ಅದು ಆರ್ಥಿಕ ಬಿಕ್ಕಟ್ಟಿಗೆ ಉತ್ತರವೂ ಅಲ್ಲ. ಲಾಕ್ ಡೌನ್ ಮೂಲಕ ಬಡ ಜನರ ಮೇಲೆ ಶಾಶ್ವತ ದುಷ್ಪರಿಣಾಮ ಹೇರುತ್ತಿದೆ ಎಂದು ಹೇಳಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link