ಹಾವೇರಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಮೂರು ಸಾವಿರ ಕೋಟಿ ರೂ.ಗೂ ಅಧಿಕ ಹಣ ಒಂದೇ ವರ್ಷದಲ್ಲಿ ವಿವಿಧ ಯೋಜನೆಗೆ ಮಂಜೂರಾಗಿದೆ ಎಂದು ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ ಅವರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ನಿಯಂತ್ರಣ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ಘೋಷಿಸಿರುವ 21 ಸಾವಿರ ಕೋಟಿ. ರೂ. ಕೋವಿಡ್-19 ಆರ್ಥಿಕ ಪ್ಯಾಕೇಜ್ನಲ್ಲಿ ಹಾವೇರಿ ಮತ್ತು ಗದಗ ಜಿಲ್ಲೆಗೆ ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲಿ ವಲಯವಾರು ಕ್ರಿಯಾಯೋಜನೆಯನ್ನು ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗರಿಷ್ಠ ಪ್ರಮಾಣದಲ್ಲಿ ಉಭಯ ಜಿಲ್ಲೆಯ ಫಲಾನುಭವಿಗಳಿಗೆ ನೆರವು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ. ಇದರಿಂದ ರೈತರ ಕೃಷಿ ಆದಾಯ ದ್ವಿಗುಣಗೊಳ್ಳಲಿದೆ. ರೈತರು ತಮ್ಮ ಬೆಳೆಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು. ಇದರಿಂದ ಸ್ಪರ್ಧಾತ್ಮಕ ಬೆಲೆ ಪಡೆಯಬಹುದಾಗಿದೆ. ತುರ್ತು ಸಂದರ್ಭದಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವ ಅವಕಾಶವಿದೆ. ಎಪಿಎಂಸಿ ಆ್ಯಕ್ಟ್ ತಿದ್ದುಪಡಿಸಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮುಚ್ಚುವುದಿಲ್ಲ ಎಂದು ತಿಳಿಸಿದರು.
ಕೃಷಿ ಪ್ರಧಾನ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ಸ್ಥಾಪನೆಗೆ ಕ್ರಮವಹಿಸಲಾಗುವುದು. ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ತಂದುಕೊಡುವ ನಿಟ್ಟಿನಲ್ಲಿ ಆಹಾರ ಪಾರ್ಕ್ ಸ್ಥಾಪನೆಯಿಂದ ಸ್ಥಳೀಯ ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಹಾವೇರಿ- ಗದಗ ಜಿಲ್ಲೆಗಳಿಗ ಗರಿಷ್ಠ ಪ್ರಮಾಣದ ಆರ್ಥಿಕ ನೆರವು ಹರಿದು ಬಂದಿದೆ.
ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು, ಶಿಕಾರಿಪುರ, ಶಿವಮೊಗ್ಗ ಸಂಪರ್ಕಿಸುವ 92 ಕಿ.ಮೀ.ಉದ್ದದ ನೂತನ ರೈಲು ಮಾರ್ಗ ಅನುಷ್ಠಾನಕ್ಕೆ 1700 ಕೋಟಿ ರೂ. ಮಂಜುರಾತಿ ದೊರೆತಿದೆ. ಹಾವೇರಿ ನೂತನ ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಕ್ಕೆ 600 ಕೋಟಿ ರೂ. ಮಂಜೂರಾತಿ ದೊರೆತಿದೆ. 46 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಹಾವೇರಿ ಜಿಲ್ಲೆಯ 245 ಕಿ.ಮೀ. ರಸ್ತೆ ಅಭಿವೃದ್ಧಿಗೆ 159.25 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 160 ಕಿ.ಮೀ. ರಸ್ತೆ ಅಭಿವೃದ್ಧಿ 109.85 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯ ಮಾಸೂರನಿಂದ ರಾಣೇಬೆನ್ನೂರ ರಸ್ತೆಯ ಆಯ್ದ ಭಾಗಗಗಳಲ್ಲಿ ಪಿರ್ಯಾಡಿಕಲ್ ರಿನ್ಯುವಲ್ ಕಾಮಗಾರಿಗಾಗಿ 6.50 ಕೋಟಿ ರೂ. ಮಂಜೂರಾಗಿದೆ. ಗದಗ ಜಿಲ್ಲೆಯ ಗಜೇಂದ್ರಘಡ ಪಟ್ಟಣದಲ್ಲಿ ಕೇಂದ್ರ ರಸ್ತೆ ಭೂ ಸಾರಿಗೆ ಸಚಿವಾಲಯದಿಂದ ಗಜೇಂದ್ರಘಡ ಉಣಚಗೇರಿ ಕ್ರಾಸ್ನಿಂದ ರಾಜೂರುವರೆಗೆ 12 ಕಿ.ಮೀ. ಉದ್ದ ಚತುಸ್ಪದ ರಸ್ತೆ ಕಾಮಗಾರಿಗೆ 92 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಾವೇರಿ ಜಿಲ್ಲೆಗೆ 3.50 ಕೋಟಿ ರೂ. ಹಾಗೂ ಗದಗ ಜಿಲ್ಲೆಗೆ 8.28 ಕೋಟಿ ರೂ. ಮಂಜೂರಾತಿ ದೊರೆತಿದೆ. 15ನೇ ಹಣಕಾಸು ಯೋಜನೆಯಡಿ ಹಾವೇರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 20.88 ಕೋಟಿ ರೂ., ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 103.75 ಕೋಟಿ ರೂ. ಹಾಗೂ ಗದಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 24.69 ಕೋಟಿ ರೂ. ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 58.84 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಆಯುಷ್ಮಾನ್ ಭಾರತ ಯೋಜನೆಯಡಿ ಹಾವೇರಿ ಜಿಲ್ಲೆಯ 26,011 ಜನ ವೈದ್ಯಕೀಯ ಚಿಕಿತ್ಸೆ ಪಡೆದಿದ್ದು, 37.08 ಕೋಟಿ ರೂ. ಹಾಗೂ ಗದಗ ಜಿಲ್ಲೆಯ 13,527 ಜನರು ವೈದ್ಯಕೀಯ ಚಿಕಿತ್ಸೆ ಪಡೆದಿದ್ದು 24.94 ಕೋಟಿ ರೂ. ನೆರವು ನೀಡಲಾಗಿದೆ ಎಂದು ತಿಳಿಸಿದರು.ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹಾವೇರಿ ಜಿಲ್ಲೆಯಲ್ಲಿ 20.32 ಕೋಟಿ ರೂ. ಖರ್ಚು ಮಾಡಲಾಗಿದೆ. 7.25 ಲಕ್ಷ ಮಾನವ ದಿನಗಳನ್ನು ಸೃಜಿಸಿ ಜನರಿಗೆ ಉದ್ಯೋಗ ನೀಡಲಾಗಿದೆ.
ವಿಶೇಷವಾಗಿ ಕೃಷಿ ಹಾಗೂ ಜಲ ಸಂಪನ್ಮೂಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಲಾಗಿದೆ. 293 ಕೃಷಿ ಹೊಂಡ, 2843 ಬದು ಮತ್ತು ಟ್ರಂಚ್ ನಿರ್ಮಾಣ, 794 ನೀರು ಕಾಲುವೆಗಳ ನಿರ್ಮಾಣ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಉದ್ಯೋಗ ಖಾತ್ರಿ 16.6 ಕೋಟಿ ರೂ.ಗಳನ್ನು ಬಳಸಲಾಗಿದೆ. ಇದೇ ಮಾದರಿಯಲ್ಲಿ ಗದಗ ಜಿಲ್ಲೆಯಲ್ಲಿ 5.96 ಲಕ್ಷ ಮಾನವ ದಿನಗಳನ್ನು ಸೃಜಿಸಿ 13.74 ಕೋಟಿ ರೂ. ಗಳನ್ನು ಉದ್ಯೋಗಖಾತ್ರಿಯಡಿ ವೆಚ್ಚ ಮಾಡಲಾಗಿದೆ. ಕೃಷಿ ಚಟುವಟಿಕೆಗಳಿಗಾಗಿಯೇ 4.34 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮೀಣ ಉದ್ಯೋಗ ಸೃಜನೆ ಹೆಚ್ಚು ಮಾಡಲು ನಿಗಧಿತ ಅನುದಾನ 61500 ಕೋಟಿ ರೂ. ಅನುದಾನಕ್ಕೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಉದ್ಯೋಗಖಾತ್ರಿ ಯೋಜನೆಗೆ ಒದಗಿಸಿದೆ. ಮನರೇಗಾ ಮಾನವ ದಿನಗಳನ್ನು 50 ರಿಂದ 75 ದಿನಗಳವರೆಗೆ ಹೆಚ್ಚಿಸುವ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಹಾವೇರಿ ಜಿಲ್ಲೆಯ 1,81,431 ಹಾಗೂ ಗದಗ ಜಿಲ್ಲೆಯ 1,28,708 ಜನರಿಗೆ ತಲಾ ಎರಡು ಸಾವಿರದಂತೆ 60 ಕೋಟಿ ರೂ. ರೈತರ ಖಾತೆಗೆ ಜಮಾ ಮಾಡಲಾಗಿದೆ. ಮಹಿಳಾ ಜನಧನ್ ಯೋಜನೆಯಡಿ ಹಾವೇರಿ ಜಿಲ್ಲೆಯ 2.33 ಲಕ್ಷ ಹಾಗೂ ಗದಗ ಜಿಲ್ಲಾ 2.50 ಲಕ್ಷ ಜನರಿಗೆ ತಲಾ ಐದು ನೂರರಂತೆ ಎರಡು ತಿಂಗಳ ಪ್ರೋತ್ಸಾಹಧನವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಹಾವೇರಿ ಜಿಲ್ಲೆಯ 80 ಸಾವಿರ ಹಾಗೂ ಗದಗ ಜಿಲ್ಲೆಯ 45 ಸಾವಿರ ಜನರಿಗೆ ಉಚಿತ ಸಿಲೆಂಡರ್ ಪೂರೈಸಲಾಗಿದೆ.
ಗರೀಬ್ ಕಲ್ಯಾಣ ಯೋಜನೆಯಡಿ ಹಾವೇರಿ ಜಿಲ್ಲೆಯ 3,68,607 ಕುಟುಂಬಗಳಿಗೆ ಹಾಗೂ ಗದಗ ಜಿಲ್ಲೆಯ 2,28,830 ಕುಟುಂಬಗಳಿಗೆ ಎರಡು ತಿಂಗಳ ಉಚಿತ ಪಡಿತರ ವಿತರಿಸಲಾಗಿದೆ ಎಂದು ತಿಳಿಸಿದರು.ಜೂನ್ 1 ರಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಮೂರು ಲಕ್ಷದವರೆಗೆ ಅಲ್ಪಾವಧಿ ಸಾಲದ ಮರುಪಾವತಿ ಅವಧಿಯಲ್ಲಿ ಮೂರು ತಿಂಗಳವರೆಗೆ ವಿಸ್ತರಿಸಿದೆ. ಆಯ್ದ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಬೀದಿ ವ್ಯಾಪಾರಿಗಳಿಗೆ ಸ್ವ ನಿಧಿ ಸಾಲ ಯೋಜನೆಯಡಿ ನೆರವು ನೀಡಲು ಉದ್ದೇಶಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪಂಚಾಯತ್ ಸದಸ್ಯ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ