ಶಿರಾ:
ನಗರದ ಕೊಳವೆ ಬಾವಿಗಳ ಅಂತರ್ಜಲವನ್ನು ವೃದ್ಧಿಸುವ ಜಾಜಮ್ಮನಕಟ್ಟೆಗೆ ಹರಿದು ಬರುವ ಮುಖ್ಯ ರಾಜಕಾಲುವೆಯ ಮುಖ್ಯ ದ್ವಾರದ ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ್ ಭೇಟಿ ನೀಡಿದರು.
ನಗರದ ಹೃದಯ ಭಾಗದಲ್ಲಿಯೇ ಇರುವ ಈ ಕಟ್ಟೆಯಲ್ಲಿ ಮಳೆಯ ನೀರು ನಿಂತರೆ ಇಡೀ ನಗರದ ಸಾರ್ವಜನಿಕರ ಮನೆಗಳಲ್ಲಿನ ಎಲ್ಲಾ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚುತ್ತದೆ. ಇದು ಸತ್ಯವೂ ಕೂಡಾ. ಇಂದು ಬಹುತೇಕ ಮನೆಗಳ ಹಾಗೂ ನಗರಸಭಾ ವ್ಯಾಪ್ತಿಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ ಎಂದರೆ ಅದಕ್ಕೆ ಜಾಜಮ್ಮನಕಟ್ಟೆಯಲ್ಲಿ ನೀರಿಲ್ಲದ್ದೇ ಪ್ರಮುಖ ಕಾರಣವೂ ಹೌದು.
ಈ ಹಿನ್ನೆಲೆಯಲ್ಲಿ ರಾಜ ಕಾಲುವೆಯ ಮೂಲಕ ಬರುವ ಮಳೆಯ ನೀರು ಸದರಿ ಕಟ್ಟೆಗೆ ಬಾರದಂತಾಗಿ ರಾಜ ಕಾಲುವೆಯು ಮುಚ್ಚಿ ಹೋಗಿದ್ದು ಸದರಿ ಕಾಲುವೆಯನ್ನು ತೆರವುಗೊಳಿಸಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವಂತೆ ನಗರಸಭೆಯನ್ನು ಹಾಗೂ ಶಾಸಕರನ್ನು ಗಮನ ಸೆಳೆಯುವಂತಹ ಲೇಖನವನ್ನು ಪ್ರಜಾಪ್ರಗತಿ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.
ಜೂನ್:8 ರಂದು ಬೈಪಾಸ್ ಸಮೀಪದಲ್ಲಿದ್ದ ರಾಜಕಾಲುವೆ ಮುಖ್ಯ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಸತ್ಯನಾರಾಯಣ್ ಜಾಜಮ್ಮನಕಟ್ಟೆಗೆ ಹರಿದು ಬರುವ ಮಳೆಯ ನೀರು ಬಾರದಂತೆ ಸಂಪೂರ್ಣವಾಗಿ ಕಾಲುವೆಯ ಮುಖ್ಯ ದ್ವಾರವೇ ಮುಚ್ಚಿ ಹೋಗಿರುವುದನ್ನು ಗಮನಿಸಿ ಮುಚ್ಚಿ ಹೋದ ಕಾಲುವೆಯನ್ನು ತೆರವುಗೊಳಿಸಿ ತುರ್ತಾಗಿ ಮಳೆಯ ನೀರು ಹರಿಯಲು ಅನುವು ಮಾಡುವಂತೆ ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಅವರಿಗೆ ಶಾಸಕರು ಸೂಚನೆ ನೀಡಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಬಿ.ಸತ್ಯನಾರಾಯಣ್ ಲಕ್ಷಾಂತರ ರೂ ವೆಚ್ಚದಲ್ಲಿ ಜಾಜಮ್ಮನಕಟ್ಟೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು ಸದರಿ ಕೆರೆಯ ರಾಜಕಾಲುವೆಯ ಮೂಲಕ ಮಳೆಯ ನೀರು ಹರಿದು ಬರುವುದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಮನಗಂಡು ಕೂಡಲೇ ಕಾಲುವೆಯನ್ನು ತೆರವುಗೊಳಿಸಲು ನಗರಸಭೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಹಿಂದಿನ ರಾಜಕೀಯ ಬೆಳವಣಿಗೆಗಳಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿದ ಪರಿಣಾಮ ಕಾಲುವೆಯು ಕೂಡಾ ಕಿರಿದಾಗಿದ್ದು ಮಳೆಯ ನೀರು ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿತ್ತು. ಇದೀಗ ಮುಖ್ಯ ಕಾಲುವೆಯ ಸ್ಥಳವೇ ಮುಚ್ಚಿ ಹೋಗಿದ್ದರಿಂದ ಅದನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ನಗರಸಭೆಯ ಆಯುಕ್ತ ಪರಮೇಶ್ವರಪ್ಪ, ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಎ.ಇ.ಇ. ಸೇತುರಾಮ್‍ಸಿಂಗ್, ಇಂಜಿನಿಯರ್ ಶ್ರೀಮತಿ ಶಾರದಾ, ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
