ತಾಪಂ ಸದಸ್ಯರಿಂದ ಎಂಜಿನಿಯರ್‍ಗೆ ತರಾಟೆ..!

ತುರುವೇಕೆರೆ

     ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಎಇಇ ಶೈಲಜ ಹಾಗೂ ಎಂಜಿನಿಯರ್ ವೀಣಾರನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

    ಸದಸ್ಯ ದಂಡಿನಶಿವರ ಕುಮಾರ್ ಮಾತನಾಡಿ, ತಾಲ್ಲೂಕು ಪಂಚಾಯ್ತಿ ಸದಸ್ಯರ ಸಭೆ ಕರೆಯದೆ ಟಾಸ್ಕ್ ಫೋರ್ಸ್ 33 ಲಕ್ಷ ರೂ. ಅನುದಾನವನ್ನು ಸರಿಯಾದ ಮಾನದಂಡ ಅನುಸರಿಸದೆ ಕ್ರಿಯಾ ಯೋಜನೆ ಮಾಡಿದ್ದೀರಿ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಭೆಯಲ್ಲಿ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿಯರ್‍ಗಳನ್ನು ತರಾಟೆಗೆ ತೆಗೆದುಕೊಂಡು, ನಾವು ಸಹ ಜನರಿಂದ ಮತ ಹಾಕಿಸಿಕೊಂಡು ಆಯ್ಕೆಯಾಗಿ ಬಂದಿರುವುದು ತಿಳಿದುಕೊಳ್ಳಿ ಎಂದರು.

     ಸದಸ್ಯ ಮಹಾಲಿಂಗಯ್ಯ ಮಾತನಾಡಿ, ಸರ್ಕಾರದ ಮಾನದಂಡ ಏನಿದೆ ಅದರ ಬಗ್ಗೆ ಸದಸ್ಯರಿಗೆ ತಿಳಿಸಿ ಸಭೆಯನ್ನು ಕರೆಯದೆ ಕ್ರಿಯಾ ಯೋಜನೆ ಅನುಮೋದನೆ ಮಾಡಬಹುದೆ ಎಂದು ಪ್ರಶ್ನಿಸಿದರು. ಮಧ್ಯ ಪ್ರವೇಶಿದ ಪಿ.ಕೆ.ನಂಜೇಗೌಡ ಹಾಗೂ ಸ್ವಾಮಿ ಜಿಲ್ಲಾ ಪಂಚಾಯ್ತಿ ಎಂಜಿನಿಯರ್‍ಗಳು ತಾಲ್ಲೂಕು ಪಂಚಾಯ್ತಿ ಸದಸ್ಯರ ಮಾತುಗಳಿಗೆ ಬೆಲೆ ಕೊಡಲ್ಲ, ನಾವು ಹೇಳಿದ ಒಂದು ಕೆಲಸವನ್ನೂ ಮಾಡಲ್ಲ. ಆದರೆ ಗುತ್ತಿಗೆದಾರರ ಕೆಲಸಗಳು ಮಾತ್ರ ಬೇಗ ಆಗುತ್ತವೆ. ಇದರ ಮರ್ಮವೇನೊ ಗೊತ್ತಾಗುತ್ತಿಲ್ಲ ಎಂದು ಆರೋಪಿಸಿದರು.

      ಎಇಇ ಶೈಲಜ ಮಾತನಾಡಿ, ಸಮಯದ ಅಭಾವದಿಂದ ಮೀಟಿಂಗ್ ಕರೆಯಲಾಗದೆ ಟಾಸ್ಕ್ ಫೋರ್ಸ್ 33 ಲಕ್ಷ ರೂ. ಅನುದಾನವನ್ನು ಶಾಸಕರಿಗೆ ತಿಳಿಸಿ, ಸಹಿ ಪಡೆದು ಅನುಮೋದನೆ ಪಡೆದು ಕ್ರಿಯಾ ಯೋಜನೆ ಮಾಡಲಾಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಉತ್ತರಿಸಿದರು.

       ಸದಸ್ಯ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ಕ್ಷೇತ್ರದ ಸಮಸ್ಯೆ ವಿಚಾರವಾಗಿ ಎಂಜಿನಿಯರ್ ವೀಣಾಗೆ ಫೋನ್ ಮಾಡಿದರೆ ಯಾವ ಮಹಾಲಿಂಗಯ್ಯ ಹೇಳಿ? ನಿಮ್ಮ ಹೆಸರಿನವರು ಮೂರು ಜನರು ಇದ್ದಾರೆ ಎನ್ನುತ್ತಾರೆ. ಕಚೇರಿಗೆ ಹೋದರೆ ಕನಿಷ್ಠ ಬೆಲೆ, ಗೌರವವನ್ನು ಕೊಡಲ್ಲ. ಮೊದಲು ನಿಮ್ಮ ವರ್ತನೆಯನ್ನು ಸರಿ ಪಡಿಸಿಕೊಳ್ಳರಿ ಎಂದು ವೀಣಾರನ್ನು ತರಾಟೆಗೆ ತೆಗೆದುಕೊಂಡು, ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದ್ದೀರಾ? ಚಿಕ್‍ಮೆಂಟ್ ಹಾಕಿದ್ದೀರಾ ಹೇಳಿ? ಕುಳಿತಲ್ಲಿಯೇ ಬಿಲ್ ಬರಿತೀರಿ, ಅದಲ್ಲದೇ ಕಾಮಗಾರಿ ಮಾಡದೆ ಉಚಿತ ಬಿಲ್ ಬರೆದುಕೊಟ್ಟಿದ್ದೀರಿ. ಎಲ್ಲ ನಮಗೂ ಗೊತ್ತಿದೆ, ಎಲ್ಲ ದಾಖಲೆ ಸಮೇತ ಕೆಲವೆ ದಿನಗಳಲ್ಲಿ ಬಹಿರಂಗ ಗೊಳಿಸುತ್ತೇನೆ ಎಂದರು.ಮಾನದಂಡದಂತೆ ಮಾಡದ ಜಿಲ್ಲಾ ಪಂಚಾಯ್ತಿ ಎಂಜಿನಿಯರ್‍ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸದಸ್ಯರೆಲ್ಲರು ಅಧ್ಯಕ್ಷರನ್ನು ಒತ್ತಾಯಿಸಿದರು.

      ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಸ್ವಾಮಿ, ಸದಸ್ಯರಾದ ಭೈರಪ್ಪ, ರವಿ, ತೀರ್ಥಕುಮಾರಿಶಿವಾನಂದ್, ಹೇಮಾವತಿಶಿವಾನಂದ್, ತೇಜಾವತಿನಾಗೇಶ್, ಕೆಂಪಮ್ಮ, ಇಓ ಜಯಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap