ಬೆಲೆ ಏರಿಕೆಗೆ ಮತ್ತಷ್ಟು ಬಿಸಿಯಾದ ಅಡುಗೆಮನೆ

ತುಮಕೂರು:

ತರಕಾರಿ, ಸೊಪ್ಪು, ಹೂವು ಹಾಗೂ ಹಣ್ಣಿನ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿದ್ದು, ಸದ್ಯ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಬಡ, ಮಧ್ಯಮ ವರ್ಗಗಗಳ ಅಡುಗೆ ಮನೆಯಿಂದ ತರಕಾರಿ-ಕಾಯಿಪಲ್ಲೆಗಳು ದೂರವಾಗಿ ತಿಂಗಳುಗಳೆ ಕಳೆದಿವೆ. ಜನರು ಬೆಲೆ ಏರಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ತರಕಾರಿ ಬದಲಿಗೆ ಹಳ್ಳಿಗಳಲ್ಲಿ ಕಡಿಮೆ ಬೆಲೆಗೆ ಸಿಗುವ ಕಾಳು-ಕಡಿ, ಸೊಪ್ಪು-ಸೆದೆ, ಇತರೆ ಹಿತ್ತಲು ಕಾಯಿಪಲ್ಲೆಗಳ ಮೊರೆಹೋಗಿ ಏನೋ ಒಂಚೂರು ತಿಂದು ಜೀವ ಉಳಿಸಿಕೊಂಡರೇ ಸಾಕು ಎಂದು ದಿನದೂಡುತ್ತಿದ್ದಾರೆ.

ಸತತ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದ್ದು, ಧಾರಣೆ ಏರುಮುಖವಾಗಿದೆ. ಕಳೆದ 2-3 ವಾರಗಳಿಂದ ಮಳೆ ಇಲ್ಲವಾಗಿದ್ದು, ಬಿಸಿಲು ಮೂಡಿದ್ದು, ಶುಷ್ಕ ವಾತಾವರಣ ಕಂಡುಬರುತ್ತಿದೆ. ಈ ಹಿಂದೆ ಅತಿಯಾದ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಹೋಗಿತ್ತು. ಅಲ್ಪಸ್ವಲ್ಪ ಉಳಿದ ಗಿಡಗಳಿಂದ ತರಕಾರಿ ಕಿತ್ತು ತಂದು ರೈತರು ಮಾರಾಟ ಮಾಡುತ್ತಿದ್ದಾರೆ. ಸದ್ಯಕ್ಕೆ ಪೂರೈಕೆ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ .

ಶತಕದತ್ತ ಸೊಪ್ಪು-ತರಕಾರಿ :

ಬೀನ್ಸ್ ಕೆ.ಜಿ.ಗೆ 10 ಏರಿಕೆಯಾಗಿ, ಕೆ.ಜಿ 80-90ಕ್ಕೆ ಹೆಚ್ಚಳವಾಗಿದೆ. ಟೊಮೆಟೊ ಮತ್ತೆ ಕೆ.ಜಿ.ಗೆ 10 ದುಬಾರಿಯಾಗಿದ್ದು 70-80 ರೂ.ನಂತೆ ಮಾರಾಟವಶಗುತ್ತಿದೆ. ಗೆಡ್ಡೆಕೋಸು, ಬದನೆಕಾಯಿ, ಎಲೆಕೋಸು, ಹಾಗಲಕಾಯಿ, ಹಸಿಮೆಣಸಿನಕಾಯಿ, ಕ್ಯಾಪ್ಸಿಕಂ ಸೇರಿದಂತೆ ಬಹುತೇಕ ತರಕಾರಿಗಳ ಧಾರಣೆ ಈ ವಾರವೂ ಹೆಚ್ಚಳವಾಗಿದೆ. ಕೆ.ಜಿ.ಗೆ 20-30 ರೂ.ದಾಟದ ಮೂಲಂಗಿ ಬೆಲೆಯೇ 50-60 ಕ್ಕೆ ಜಿಗಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ 50-60, ಸಬ್ಬಕ್ಕಿ 80, ಮೆಂತ್ಯ ಸೊಪ್ಪು ಕೆ.ಜಿ 60, ಪಾಲಕ್ ಸೊಪ್ಪು ಕೆ.ಜಿ 50 ಕ್ಕೆ ಮಾರಾಟವಾಗಿದೆ.

ಇದು ಅಂತರಸನಹಳ್ಳಿ ಮಾರುಕಟ್ಟೆಯ ಧಾರಣೆಯಾಗಿದ್ದು, ಚಿಲ್ಲರೆಯಾಗಿ ಹಾಗೂ ಇತರೆ ಮಾರುಕಟ್ಟೆಗಳಲ್ಲಿ ಬಹುತೇಕ ತರಕಾರಿಗಳ ಬೆಲೆ ಕೆ.ಜಿ 1100 ದಾಟಿವೆ. ಜನಸಾಮಾನ್ಯರು ಕೊಂಡುಕೊಳ್ಳಲು ಸಾಧ್ಯವಾಗದೆ, ತರಕಾರಿ ಬದಲಿಗೆ ಅಡುಗೆಗೆ ಬೇಳೆ, ಇತರೆ ಕಾಳುಗಳನ್ನು ಬಳಸಲು ಆರಂಭಿಸಿದ್ದಾರೆ.

ಹಣ್ಣುಗಳು ದುಬಾರಿ :

ಹಣ್ಣುಗಳ ಬೆಲೆಯೂ ಇಳಿಕೆಯಾಗುತ್ತಿಲ್ಲ. ಬಾಳೆಹಣ್ಣು, ನಾಟಿ ಕಿತ್ತಳೆ ಬಿಟ್ಟರೆ ಇತರೆ ಹಣ್ಣುಗಳ ಧಾರಣೆ ಮತ್ತಷ್ಟು ಏರಿಕೆಯಾಗಿದೆ. ದಾಳಿಂಬೆ, ಮೂಸಂಬಿ, ಸಪೋಟ, ಸೀಬೆ, ಪೈನಾಪಲ್, ಕರಬೂಜ ಹಣ್ಣು ದುಬಾರಿಯಾಗಿವೆ.

ಅಡುಗೆಎಣ್ಣೆ ಬಹುತೇಕ ಸ್ಥಿರ :

ಬೇಳೆ ಹಾಗೂ ಧಾನ್ಯಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಉದ್ದಿನ ಬೇಳೆ ದುಬಾರಿಯಾಗಿದ್ದರೆ, ಹೆಸರು ಬೇಳೆ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇಳಿಕೆ ಕಂಡಿದ್ದ ಕಡಲೆಬೀಜ ಮತ್ತೆ ಕೊಂಚ ಏರಿಕೆ ದಾಖಲಿಸಿದೆ. ಅಡುಗೆಎಣ್ಣೆ ಬೆಲೆ ಬಹುತೇಕ ಸ್ಥಿರತೆ ಕಾಪಾಡಿಕೊಂಡಿದ್ದು, ಸನ್‍ಫ್ಲವರ್ ಕೆ.ಜಿ 138-140, ಪಾಮಾಯಿಲ್ ಕೆ.ಜಿ 120 ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಮತ್ತೆ ಏರಿದ ಕೋಳಿ ಬೆಲೆ :

ಕಾರ್ತಿಕ ಮಾಸದಲ್ಲಿ ಇಳಿಕೆಯಾಗಿದ್ದ ಕೋಳಿ ಬೆಲೆ ಈಗ ಏರಿಕೆಯತ್ತ ಮುಖ ಮಾಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ. 20 ರೂ. ಹೆಚ್ಚಳವಾಗಿದ್ದು 160 ಕ್ಕೆ, ರೆಡಿ ಚಿಕನ್ 220 ಕ್ಕೆ, ಮೊಟ್ಟೆ ಕೋಳಿ ಕೆ.ಜಿ 135 ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೀನಿನ ಧಾರಣೆ ಕೊಂಚ ತಗ್ಗಿದ್ದು, ಬಂಗುಡೆ ಕೆ.ಜಿ 200, ಬೂತಾಯಿ 240, ಅಂಜಲ್ ಕೆ.ಜಿ 560, ಬಿಳಿಮಾಂಜಿ 740, ಕಪ್ಪುಮಾಂಜಿ ಕೆ.ಜಿ 530, ಬೊಳಿಂಜರ್ 220, ಸೀಗಡಿ ಕೆ.ಜಿ 700 ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)

ಸೇಬು 120-160
ದಾಳಿಂಬೆ 200
ಮೊಸಂಬಿ 80
ಕಿತ್ತಳೆ 40-50
ಸಪೋಟ 60-80
ಏಲಕ್ಕಿ ಬಾಳೆ 40
ಪಚ್ಚ ಬಾಳೆ 20
ಪಪ್ಪಾಯ 25
ಕಲ್ಲಂಗಡಿ 30-40
ಕರಬೂಜ 70
ಸೀಬೆ 80
ಪೈನಾಪಲ್ 40-50
ದ್ರಾಕ್ಷಿ 160-180

ತರಕಾರಿ (ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕÀಟ್ಟೆ)
ಟೊಮೆಟೊ 70-80
ಈರುಳ್ಳಿ 35-40
ಆಲೂಗಡ್ಡೆ 25-30
ಬೀನ್ಸ್ 70-80
ಕ್ಯಾರೆಟ್ 50-60
ಬೀಟ್ರೂಟ್ 40-50
ಮೂಲಂಗಿ 50-60
ಗೆಡ್ಡೆಕೋಸು 80-90
ನುಗ್ಗೆಕಾಯಿ 150-200
ಬದನೆಕಾಯಿ 50-60
ಎಲೆಕೋಸು 60-50
ಹೂಕೋಸು 40-50
ಹಸಿ ಮೆಣಸಿನಕಾಯಿ 50-60
ಕ್ಯಾಪ್ಸಿಕಂ 80-100

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 130
ಫಾರಂ 110
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 120-150
ಮೊಟ್ಟೆ (1 ಡಜನ್) 60

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 16,100
ಗರಿಷ್ಠ 17,800
ಮಾದರಿ 17,800
ಒಟ್ಟು ಆವಕ–1622.39 ಕ್ವಿಂಟಾಲ್
(3773 ಚೀಲ)

  -ಚಿದಾನಂದ್ ಹುಳಿಯಾರು

Recent Articles

spot_img

Related Stories

Share via
Copy link
Powered by Social Snap