ತುಮಕೂರು
ಕೋವಿಡ್ 19 ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಸುಕಿನ ಜೋಳ ಬೇಡಿಕೆ ಇಲ್ಲದ ಕಾರಣ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಸಂಕಷ್ಟಕ್ಕೊಳಗಾದ ಬೆಳೆಗಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಅಂತಹ ರೈತರಿಗೆ 5 ಸಾವಿರ ರೂ. ನೀಡಲು ಘೋಷಣೆ ಮಾಡಿದೆ.
ತುಮಕೂರು ತಹಸೀಲ್ದಾರರ ಕಚೇರಿಯಲ್ಲಿ ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು ನೀಡುವ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆಯ ಜಂಟಿ ಪರಿಶೀಲನಾ ಸಭೆ ನಡೆಸಲಾಯಿತು.ಈಗಾಗಲೇ ತುಮಕೂರು ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಿಸಿದ ಮುಸುಕಿನ ಜೋಳ ಬೆಳೆಗಾರರ ಪಟ್ಟಿಯನ್ನು ಪ್ರದರ್ಶಿಸಲಾಗಿದೆ.
ಮುಸುಕಿನ ಜೋಳ ಬೆಳೆದ ರೈತರು ಪಹಣಿ, ಆಧಾರ್ ಜೋಡಿತ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಪ್ರತಿಗಳನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಾಯಿಸಿದ ರೈತರ ಪಟ್ಟಿಯಲ್ಲಿ ಪರಿಶೀಲಿಸಿ ಕೊಳ್ಳಲು ಹಾಗೂ ಕೆ ಕಿಸಾನ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳದಿದ್ದಲ್ಲಿ ಕೂಡಲೆ ನೋಂದಾಯಿಸಿ ಆರ್ಥಿಕ ಸಹಾಯ ಪಡೆಯಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಕೆಂಗೇಗೌಡರು ತಿಳಿಸಿದ್ದಾರೆ.
ಒಂದು ವೇಳೆ ಸರ್ವೆ ನಂ. ಕೆ.ಕಿಸಾನ್ ತಂತ್ರಾಂಶದಲ್ಲಿ ದಾಖಲಾಗದಿದ್ದಲ್ಲಿ ಕೂಡಲೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಪೌತಿ ಪ್ರಕರಣಗಳಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಉತ್ತರಾಧಿಕಾರ ಪ್ರಮಾಣ ಪತ್ರ ಪಡೆದು, ಆ ಕುಟುಂಬದ ಇತರೆ ಸದಸ್ಯರಿಂದ ನಿರಾಕ್ಷೇಪಣಾ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಜಂಟಿ ಖಾತೆ ಹೊಂದಿದ್ದಲ್ಲಿ ಒಬ್ಬ ರೈತನಿಗೆ ಆರ್ಥಿಕ ನೆರವು ವರ್ಗಾವಣೆಗೆ ಅವಕಾಶವಿದ್ದು, ಉಳಿದ ಖಾತೆದಾರರಿಂದ ಒಪ್ಪಿಗೆ ಪತ್ರವನ್ನು ನೋಟರಿಯಿಂದ ದೃಢೀಕರಿಸಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಲು ಎನ್.ಕೆಂಗೇಗೌಡ ಮನವಿ ಮಾಡಿದ್ದಾರೆ.
ಸಭೆಯಲ್ಲಿ ತುಮಕೂರು ತಾಲ್ಲೂಕಿನ ತಹಸೀಲ್ದಾರ್ ಮೋಹನ್‍ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ, ಹೋಬಳಿಗಳ ಉಪತಹಸೀಲ್ದಾರ್‍ಗಳು, ರಾಜಸ್ವ ನಿರೀಕ್ಷಕರು, ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
