ಕೊರೋನಾ : ಮೃತರ ಅಂತ್ಯಕ್ರಿಯೆ ನಡೆಸಲು ಕೆಲವರ ಹಿಂದೇಟು

ತುಮಕೂರು

     ಕೊರೊನಾ ವೈರಸ್ ರೋಗಾಣು ದಿನೆ ದಿನೆ ಹೆಚ್ಚಳವಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ಈ ಸಮಯದಲ್ಲಿ ಸಂಭವಿಸುವ ಸಾವುಗಳು ಸಹ ಆತಂಕ ಉಂಟು ಮಾಡುತ್ತಿವೆ. ಸೋಂಕು ತಗುಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ಅತ್ಯಂತ ದಯನೀಯ ಸ್ಥಿತಿಗೆ ತಲುಪುತ್ತಿದೆ. ಈ ನಡುವೆ ಸೋಂಕು ಇಲ್ಲದೆಯೂ ಬೇರಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟವರ ಮೇಲೂ ಕೋವಿಡ್ ಶಂಕೆ ಆವರಿಸುತ್ತಿದ್ದು, ಈ ಬಗ್ಗೆ ಜನರಲ್ಲಿ ಇರುವ ಭಯವನ್ನು ನಿವಾರಿಸಬೇಕಾದ ಅಗತ್ಯತೆ ಇದೆ.

    ಮಾಧ್ಯಮಗಳಲ್ಲಿ ಶವವನ್ನು ಗುಂಡಿಗೆ ಎಸೆಯುವ ದೃಶ್ಯಗಳು ಜನರ ಮನಸ್ಸನ್ನು ಈಗಾಗಲೆ ಕದಡಿಬಿಟ್ಟಿವೆ. ಕೆಲವು ಅನಗತ್ಯ ಭೀತಿಗಳು ಜನ ಮಾನಸದಲ್ಲಿ ಆವರಿಸಿವೆ. ಮೃತಪಟ್ಟ ವ್ಯಕ್ತಿಗಳ ಶವದ ಹತ್ತಿರಕ್ಕೂ ಸುಳಿಯದೆ ಅನಾಥವಾಗಿ ಬಿಟ್ಟು ಹೋಗಿರುವ ಅದೆಷ್ಟೋ ಪ್ರಕರಣಗಳು ಇವೆ. ಅಲ್ಲಲ್ಲಿ ಕೆಲವು ಸಂಘ ಸಂಸ್ಥೆಗಳೆ ಮುಂದೆ ಬಂದು ಅಂತ್ಯ ಸಂಸ್ಕಾರ ನೆರವೇರಿಸಿರುವ ಉದಾಹರಣೆಗಳು ಸಹ ಇವೆ.
ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಾಗ ಅವರವರ ಸಂಪ್ರದಾಯದ ರೀತಿಯಲ್ಲಿಯೆ ವಿದಾಯ ಹೇಳಲಾಗುತ್ತದೆ. ಆದರೆ ಕೊರೊನಾ ಪರಿಣಾಮದಿಂದಾಗಿ ಅಂತ್ಯ ಸಂಸ್ಕಾರವು ಸಹ ಹೇಗೆ ಬೇಕೋ ಹಾಗೆ ನಡೆದು ಹೋಗುತ್ತಿವೆ.

      ಕೆಲವರ ಶವಗಳು ಅನಾಥವಾಗಿ ಹೋಗುತ್ತಿವೆ. ಕೋವಿಡ್ ಅಥವಾ ನಾನ್ ಕೋವಿಡ್ ಯಾವುದೇ ಇರಲಿ, ಈಗ ಸಂಭವಿಸುತ್ತಿರುವ ಸಾವುಗಳು ಸಂಬಂಧಿಸಿದ ಕುಟುಂಬಗಳಿಗೂ ಹಾಗೂ ಆಡಳಿತಕ್ಕೂ ತಲೆನೋವಾಗಿ ಪರಿಣಮಿಸುತ್ತಿವೆ. ಒಮ್ಮೆ ನೆಗೆಟಿವ್ ಇರುವುದು ಮತ್ತೊಮ್ಮೆ ಪಾಸಿಟಿವ್ ವರದಿ ಬರುವ ಆತಂಕಗಳು ಜನರ ನಿದ್ರೆಗೆಡಿಸಿವೆ. ಕೊರೊನಾ ವಾತಾವರಣದಲ್ಲಿ ಸಹಜವಾಗಿ ಸತ್ತವರ ಅಂತ್ಯಕ್ರಿಯೆಗೂ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತ್ಯ ಸಂಸ್ಕಾರದ ಪರಿಸ್ಥಿತಿ ಗೋಜಲು ಬಂಧುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರೆ ಯಾವ ಅಪಾಯವೂ ಇಲ್ಲ ಎಂದು ತಜ್ಞ ವೈದ್ಯರೆ ಹೇಳಿದ್ದಾರೆ.

ಮಾರ್ಗಸೂಚಿಯಲ್ಲೇನಿದೆ?

     ಮೃತರ ಅಂತ್ಯ ಸಂಸ್ಕಾರವನ್ನು ಅವರ ಕುಟುಂಬದವರ ಸಂಪ್ರದಾಯದ ಪ್ರಕಾರ ನಡೆಸಬಹುದು. ಮೃತ ದೇಹವನ್ನು ದಹಿಸಲು ಅಥವಾ ಹೂಳಲು ಅವಕಾಶವಿದೆ. ಸೋಂಕು ಹರಡದ ಕಾರಣ ಚಿತಾ ಭಸ್ಮವನ್ನು ಸಂಗ್ರಹಿಸಬಹುದು. ಕುಟುಂಬದ ಸದಸ್ಯರು ಮೃತ ದೇಹ ಸ್ಪರ್ಶಿಸಲು ಅವಕಾಶವಿಲ್ಲ. ಸ್ಮಶಾನದಲ್ಲಿ ಮೃತ ದೇಹದ ಮುಖ ವೀಕ್ಷಣೆಗೆ ಅನುವು ಮಾಡಿಕೊಡಬಹುದು. ಈ ಸಂಬಂಧ ಮುಖದ ಮೇಲಿನ ಬಟ್ಟೆ ಸರಿಸುವವರು ಸುರಕ್ಷತಾ ಕ್ರಮ ಕೈಗೊಂಡಿರಬೇಕು. ಶ್ವಾಸಕೋಶದ ಸಮಸ್ಯೆ, ಇನ್ನಿತರ ಗಂಭೀರ ಕಾಯಿಲೆ ಇರುವವರು ಭಾಗಿಯಾಗಬಾರದು. ಚಿತಾಗಾರದ ಸಿಬ್ಬಂದಿ ಮಾಸ್ಕ್, ಕೈ ಗವಸು ಧರಿಸಿರಬೇಕು.

     ಅಂತಿಮ ವಿಧಿ ಕೈ ಗೊಳ್ಳುವಾಗ 20ಕ್ಕಿಂತ ಹೆಚ್ಚು ಜನರು ಸೇರಕೂಡದು. ಸಂಸ್ಕಾರವನ್ನು ಅವರ ಕುಟುಂಬದ ಸದಸ್ಯರು ಸಂಪ್ರದಾಯದ ಪ್ರಕಾರವೆ ನಡೆಸಬಹುದು. ಭಯ ಪಡಬೇಕಾಗಿಲ್ಲ. ಆದರೆ ಈ ಬಗ್ಗೆ ಜನಜಾಗೃತಿ ಇಲ್ಲದಿರುವುದರಿಂದ ಅಪರಿಮಿತ ಭಯ ಆವರಿಸಿದೆ ಹಾಗೂ ಹಲವೆಡೆ ಪ್ರತಿಭಟನೆಗಳಾಗುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link