ತುರುವನೂರು ಕಾಲೇಜು ಸ್ಥಳಾಂತರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ.

ಚಳ್ಳಕೆರೆ

     ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ ಐದು ವರ್ಷಗಳಿಂದ ಆ ಭಾಗದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದು, ಯಾವುದೇ ಕಾರಣಕ್ಕೂ ಕಾಲೇಜನ್ನು ಸ್ಥಳಾಂತರ ಮಾಡದಂತೆ ಮುಖ್ಯಮಂತ್ರಿಗಳಿಗೆ ಬ್ಲಾಕ್ ಕಾಂಗ್ರೆಸ್ ಘಟಕ ತಹಶೀಲ್ದಾರ್ ಮೂಲಕ ಮನವಿ ಮಾಡಿದ್ದು, ಕಾಲೇಜನ್ನು ಸರ್ಕಾರ ಸ್ಥಳಾಂತರಗೊಳಿಸಲು ಯತ್ನಿಸಿದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯಕತೆ ಉಂಟಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

    ನಗರದ ವಾಲ್ಮೀಕಿ ವೃತ್ತದಿಂದ ಪಕ್ಷದ ಚುನಾಯಿತ ಜನಪ್ರತಿನಿಧಿಗಳು, ನಗರಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಆಗಮಿಸಿದ ಪಕ್ಷದ ಎಲ್ಲಾ ಹಂತದ ಮುಖಂಡರು ಇಲ್ಲಿನ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಯ ಬಗ್ಗೆ ಚಿಂತನೆ ನಡೆಸದೆ ರಾಜ್ಯ ಸರ್ಕಾರ ಆತೂರದ ನಿರ್ಧಾರ ಕೈಗೊಳ್ಳುವ ಮೊದಲು ಚಿಂತನೆ ನಡಸಬೇಕಿದೆ. ಈಗಾಗಲೇ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಕಾಲೇಜನ್ನು ವಿವಿಧ ಹಂತದ ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಸೇರ್ಪಡೆಯಾಗಲು ಕಾತೂರರಾಗಿದ್ಧಾರೆ. ಸರ್ಕಾರ ಈ ಬಗ್ಗೆ ಚಿಂತಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕಾಲೇಜು ಸ್ಥಳಾಂತರ ಮಾಡುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದರು.

   ಹಿರಿಯ ಮುಖಂಡ ಟಿ.ಪ್ರಭುದೇವ್, ಪ್ರಧಾನ ಕಾರ್ಯದರ್ಶಿ ಪಿ.ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್, ಕಿರಣ್‍ಶಂಕರ್, ಎಸ್.ಎಚ್.ಸೈಯದ್, ಬಡಗಿಪಾಪಣ್ಣ, ಪಾಲಯ್ಯ, ಭರಮಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಮಾಜನಾರ್ಥನ್, ರಂಜಿತಾ, ಮಹಿಳಾ ಘಟಕದ ಗೀತಾಬಾಯಿ, ವಾಣಿ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಕೆ.ವೀರಭದ್ರಪ್ಪ, ಕವಿತಾಬೋರಣ್ಣ, ವಿರೂಪಾಕ್ಷ, ಎಂ.ಜೆ.ರಾಘವೇಂದ್ರ, ಕೆ.ಎಂ.ಶಿವಕುಮಾರಸ್ವಾಮಿ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ತುರುವನೂರು ಕಾಲೇಜು ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಇಂದೇ ಕಳುಹಿಸಿಕೊಡುವ ಭರವಸೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link