ಯಮ ಯಾರಿಗೂ ಕರುಣೆ ತೋರುವುದಿಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು:

     ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ. ಈ ಸಮಯದಲ್ಲಿ ದೇವರು ಬಹಳ ಕ್ರೂರಿ ಎಂದು ಭಾವಿಸುವಂತಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಧಾನಸೌಧದಲ್ಲಿ ತಿಳಿಸಿದ್ದಾರೆ.ನಿನ್ನೆ ರಾತ್ರಿ ಕೊರೋನಾ ಸೋಂಕಿನಿಂದ ವಿಧಿವಶರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಗುರುವಾರ ವಿಧಾನಸಭೆಯಲ್ಲಿ ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿದ್ದಿಷ್ಟು.

   ನಿನ್ನೆ ರಾತ್ರಿ ನಮ್ಮ ಶಾಸಕರಿಗೆಲ್ಲ ಔತಣಕೂಟ ಆಯೋಜಿಸಿದ್ದೆ. 20 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಒಂದು ಕಾರ್ಯಕ್ರಮ ನಡೆಸಿದಾಗ ಆಗಿನ ಸಹಕಾರಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಮುದ್ದೂರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ನಂತರ ಕೆಲ ಹೊತ್ತಿನಲ್ಲೇ ಅವರು ಸಾವನ್ನಪಿದರು ಅಂತಾ ಸುದ್ದಿ ಬಂತು. ಅವತ್ತು ಅವರು ಕಾರ್ಯಕ್ರಮದಲ್ಲಿ ನನಗೆ ಒಂದು ಮಾತು ಹೇಳಿದ್ದರು. ‘ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ.. ಜಾಗ್ರತ.’ ಈ ಮನಸ್ಸು, ಹಣ ಚಂಚಲ ಇದ್ದಂತೆ. ಅದೇರೀತಿ ಯಮ ಕೂಡ ನಾನು ಯಾರಿಗಾದರೂ ಸಹಾಯ ಮಾಡುತ್ತೇನೆ, ಮಕ್ಕಳ ಮದುವೆ ಮಾಡುತ್ತೇನೆ ಕರುಣೆ ತೋರಿಸು ಎಂದರೆ ತೋರಿಸುವುದಿಲ್ಲವಂತೆ. ಅವನು ನಿರ್ಧರಿಸಿದರೆ ಯಾರನ್ನಾದರೂ ಮುಲಾಜಿಲ್ಲದೆ ಕರೆಸಿಕೊಳ್ಳುತ್ತಾನಂತೆ.

    ಅದೇರೀತಿ ಇಂದು ಸುರೇಶ ಅಂಗಡಿ ಅವರನ್ನು ಕರೆಸಿಕೊಂಡಿದ್ದಾನೆ. ಅವರು ಮಂತ್ರಿತಾಗಿ ಕೇವಲ ಒಂದು ಕಾಲು ವರ್ಷವಾಗಿದೆ. ಅವರು ಮಂತ್ರಿಯಾಗಿದ್ದಾಗ ಅವರನ್ನು ಭೇಟಿ ಮಾಡಿದ್ದೆ. ಆಗ ನಾನು ಮಂತ್ರಿ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಅವರೇ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನನದೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕೈಲಾದ ಸಹಾಯವನ್ನು ರಾಜ್ಯಕ್ಕೆ ಮಾಡುತ್ತೇನೆ ಎಂದಿದ್ದರು. ಅವರು ಅಲ್ಪಾವಧಿಯಲ್ಲೇ ರಾಜ್ಯಕ್ಕೆ ಉತ್ತಮ ಯೋಜನೆ ತರುವ ಪ್ರಯತ್ನ ಮಾಡಿದ್ದಾರೆ. ಅವರ ಬಗ್ಗೆ ಯಮ ಕರುಣೆ ತೋರಲಿಲ್ಲ.

    ನಾನು ಈ ಕೊರೋನಾ ವಿಚಾರದಲ್ಲಿ ಸಾಕಷ್ಟು ಉಡಾಫೆ ಮಾಡುತ್ತಿದ್ದೆ. ನನಗೆ ಅದು ಬಂದಾಗ ನನಗೆ ಅರಿವಾಯಿತು. ಆಸ್ಪತ್ರೆಗೆ ಹೋಗಿ ಬಂದ ನಂತರ ಮತ್ತೆ ಜ್ವರ ಬಂತು. ಆ ಮೇಲೆ ಉರಾಟದ ಸಮಸ್ಯೆ ಕಾಣಿಸಿಕೊಂಡಿತು. ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಕೂಡ ಎಚ್ಚರವಹಿಸುವಂತೆ ಹೇಳುತ್ತಿದ್ದರು. ನಾನು ಅವರ ಮಾತನ್ನು ನಿರ್ಲಕ್ಷಿಸುತ್ತಿದ್ದೆ.

    ಕೆಲದಿನಗಳ ಹಿಂದೆ ಚೆನ್ನಾಗಿದ್ದು, ದೆಹಲಿಗೆ ಹೋದ ಅವರು ಈಗ ಇಲ್ಲ ಎಂದರೆ ನಂಬಲು ಸಾಧ್ಯವಾಗಲಿಲ್ಲ. ನಿನ್ನೆ ಶಾಸಕರ ಔತಣ ಕೂಟದಲ್ಲಿ ಈ ವಿಚಾರ ಕೇಳಿದಾಗ ಯಾರಿಗೂ ಊಟ ಮಾಡುವ ಮನಸ್ಸು ಇರಲಿಲ್ಲ. ಅವರೊಬ್ಬ ಅಜಾತಶತ್ರು. ಅವರ ಅಗಲಿಕೆ ರಾಜ್ಯಕ್ಕೆ ಆದ ನಷ್ಟ ಹಾಗೂ ಅನ್ಯಾಯ. ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ರೈತಕುಟುಂಬದಿಂದ ಬಂದು, ಶಿಕ್ಷಣ ಸಂಸ್ಥೆ ಕಟ್ಟಿ ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆದವರಿಗೆ ಈ ರೀತಿ ಆಗಬಾರದಿತ್ತು. ಸೌಮ್ಯ, ವಿನಯತೆಯಿಂದ ರಾಜಕೀಯ ಮಾಡಿಕೊಂಡು ಬಂದ ನಾಯಕನಿಗೆ ಭಗವಂತ ಈ ಶಿಕ್ಷೆ ಕೊಟ್ಟಿದ್ದು, ಭಗವಂತ ಎಷ್ಟು ಕ್ರೂರಿ ಯಾಕೆ? ಎಂದು ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹುಟ್ಟಿದ ಮೇಲೆ ಸಾಯಬೇಕು ನಿಜ, ಆದರೆ ಯಾವುದೇ ಅಭ್ಯಾಸ ಇಲ್ಲದೆ ಚೆನ್ನಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಸಾಯುತ್ತಾರೆ ಎಂದರೆ ನಿಜಕ್ಕೂ ಬೇಸರವಾಗುತ್ತದೆ.

   ಅವರ ಕುಟುಂಬ ಸದಸ್ಯರಿಗೆ, ಅನುಯಾಯಿಗಳಿಗೆ ತೀವ್ರ ನೋವಾಗಿದ್ದು, ಅವರಿಗೆ ಈ ದುಖಃ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.’

ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ:

    ವಿಧಾನಸೌಧದ ಹೊರಭಾಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ‘ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಒಂದು ವರ್ಷದ ಅವಧಿಯಲ್ಲಿ ಇಷ್ಟು ದುರಾಡಳಿತ ಮಾಡಿ ಕೆಟ್ಟ ಹೆಸರನ್ನು ಯಾವ ಸರ್ಕಾರಗಳು ಪಡೆದಿರಲಿಲ್ಲ. ಪ್ರತಿ ಹಂತದಲ್ಲೂ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಚರ್ಚೆ ಮಾಡಲು ಅಧಿವೇಶನದಲ್ಲಿ ಅವಕಾಶ ನೀಡಲಿಲ್ಲ. ನಮ್ಮ ಶಾಸಕರು 1600ಪ್ರಶ್ನೆ ಸಲ್ಲಿಸಿದರೆ ಒಂದಕ್ಕೂ ಉತ್ತರ ನೀಡಿಲ್ಲ. ಭ್ರಷ್ಟಾಚಾರದಲ್ಲಿ ಸಾಕ್ಷಿ ಸಮೇತ ತೋರಿಸಿದರೂ ಅದರ ಬಗ್ಗೆ ಮೌನ ವಹಿಸಿದೆ. ಈ ಸರ್ಕಾರ ಎಲ್ಲ ಪರಂಗದಲ್ಲೂ ವಿಫಲವಾಗಿದ್ದು, ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಕಳೆದುಕೊಂಡಿದೆ.

    ಸರ್ಕಾರ ಇಂದು ರೈತರ ಭೂಮಿ, ಅವರ ಬೆಳೆಯನ್ನು ಮಾತ್ರವಲ್ಲ ಇಡೀ ರೈತ ಸಮುದಾಯವನ್ನೇ ಮಾರಲು ಮುಂದಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಇಂದು ರೈತರನ್ನು ಕೂಲಿಗೆ ಇಳಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link