ರಾಯಚೂರು :

ಯಾರೋ ದುಷ್ಕರ್ಮಿಗಳು ಕೆರೆಗೆ ವಿಷ ಹಾಕಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ರಾಯಚೂರು ತಾಲೂಕಿನ ಕಟ್ಲಟ್ಕೂರಿನಲ್ಲಿರುವ 350 ಎಕರೆ ವಿಸ್ತಾರದ ಕೆರೆಯು ಈ ವರ್ಷದ ಭರ್ತಿಯಾಗಿದೆ. ಈ ಕೆರೆಯನ್ನು ನಂಬಿ ಇಲ್ಲಿನ 150 ಕುಟುಂಬಗಳು ಬದುಕುತ್ತಿವೆ.
ಮೂರು ತಿಂಗಳ ಕೆಳಗೆ ಆಂಧ್ರಪ್ರದೇಶದ ಕಾಕಿನಾಡದಿಂದ ಕಟ್ಲಾ, ರೂಹು, ಮೃಗಲಾ ಸೇರಿ ನಾನಾ ತಳಿಯ 5 ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ತಂದು ಕೆರೆಗೆ ಬಿಡಲಾಗಿತ್ತು. ಇನ್ನೂ ಮೂರು ತಿಂಗಳು ಕಳೆದಿದ್ದರೆ ಮೀನುಗಾರರಿಗೆ ಫಸಲು ಕೈ ಸೇರುತ್ತಿತ್ತು. ಆದರೆ, ಯಾರೋ ದುಷ್ಕರ್ಮಿಗಳ ದುಷ್ಕೃತ್ಯದಿಂದ ಕೆರೆಯಲ್ಲಿನ 5 ಲಕ್ಷಕ್ಕೂ ಹೆಚ್ಚು ಮೀನುಗಳು ಸಾವನ್ನಪ್ಪಿದ್ದು, ಮೀನುಗಾರರು ಬೀದಿಗೆ ಬರುವಂತಾಗಿದೆ.
ಗುಂಜಳ್ಳಿಯ ಗಂಗಾಮತಸ್ಥರ ಮೀನುಗಾರರ ಸಹಕಾರ ಸಂಘದ ಅಡಿಯಲ್ಲಿ 150 ಕುಟುಂಬಗಳು ಬಂಡವಾಳ ಹಾಕಿವೆ. ಈಗ ಮೀನುಗಳು ಸತ್ತಿರುವುದರಿಂದ ಸುಮಾರು 25 ಲಕ್ಷ ರೂಪಾಯಿ ನಷ್ಟವಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಪರೀಕ್ಷೆ ಕಳುಹಿಸಿದ್ದಾರೆ. ವರದಿ ಬಳಿಕ ಮೀನುಗಳ ಮಾರಣಹೋಮಕ್ಕೆ ಕಾರಣ ತಿಳಿದುಬರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








