ಹುಬ್ಬಳ್ಳಿ :
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಸಂಬಂಧಿಸಿದ ಕಸಬರಿಗೆ ಮತ್ತು ಫಿನಾಯಿಲ್ ಫ್ಯಾಕ್ಟರಿಗೆ ಬೆಂಕಿ ತಗುಲಿ ಕೋಟ್ಯಂತರ ರೂ. ಮೌಲ್ಯದ ಕಚ್ಚಾ ಸಾಮಗ್ರಿ ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಬಳಗಲಿ ಬಳಿ ನಡೆದಿದೆ.
ದಿವಂಗತ ಅನಂತಕುಮಾರ ಸಹೋದರ ನಂದಕುಮಾರ, ಅಚುತ್ ಲಿಮ್ಹೆ, ಉದಯ ಬಾಡಕರ ಹಾಗೂ ಸಂಸದ ಹಾಗೂ ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಅವರ ಪತ್ನಿ ಸೇರಿ ಒಟ್ಟು ನಾಲ್ಕು ಮಾಲೀಕರ ಒಡೆತನದಲ್ಲಿರುವ ಪ್ಯಾಕ್ಟರಿಗೆ ಸರಿಸುಮಾರು ನಿನ್ನೆ ಇಳಿಸಂಜೆ ನಾಲ್ಕು ಗಂಟೆಗೆ ಬೆಂಕಿ ತಗುಲಿತ್ತು. ವಿಭವ ಇಂಡಸ್ಟ್ರೀ 555 ಮಂಕಿ ಬ್ರಾಂಡ್ ಕಸಬರಿಗೆ ಎಂದು ಪ್ರಸಿದ್ಧವಾಗಿದೆ.
ಹಳೆಯ ಫ್ಯಾಕ್ಟರಿ ಕಟ್ಟಡದ ಗೋದಾಮಿನಲ್ಲಿ ಅಕಸ್ಮಾತ್ ಕಾಣಿಸಿಕೊಂಡ ಬೆಂಕಿಯ ನಂತರ ಸಂಪೂರ್ಣ ಗೋದಾಮಿಗೆ ವ್ಯಾಪಿಸಿಕೊಂಡಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಹತೋಟಿಗೆ ತರಲು ಪ್ರಯತ್ನಿಸಿದರು.
ಇಂಡಸ್ಟ್ರೀಯಲ್ಲಿ ಹೊತ್ತಿರುವ ಬೆಂಕಿ ಸುಮಾರು 10 ತಾಸಿಗೂ ಹೆಚ್ಚು ಕಾಲ ಉರಿದಿದ್ದು, ಸುಮಾರು 3 ಕೋಟಿಗೂ ಹೆಚ್ಚು ವಸ್ತುಗಳು ನಾಶವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟು ಮೂರು ಜಲ ಫಿರಂಗಿ ವಾಹನಗಳ ಮೂಲಕ ಸುಮಾರು ಎರಡು ತಾಸು ಹರಸಾಹಸಪಟ್ಟು ಬೆಂಕಿ ನಿಯಂತ್ರಿಸಿ ಹತೋಟಿಗೆ ತಂದರು. ಗೋದಾಮು ಪಕ್ಕದಲ್ಲಿಯೇ ಪಿನಾಯಿಲ್ ತಯಾರಿಸಲು ಬೇಕಾದ ಕಚ್ಚಾ ರಾಸಾಯನಿಕದ ಬ್ಯಾರೇಲ್ಗಳನ್ನು ಇಡಲಾಗಿತ್ತು. ಅದೃಷ್ಟವಶಾತ್ ಬೆಂಕಿ ಅವುಗಳತ್ತ ವ್ಯಾಪಿಸಿರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ