ತುಮಕೂರು : ಗ್ರಾಹಕರಿಗೆ ಕಿರಿಕ್ ತರಿಸುತ್ತಿವೆ ಬ್ಯಾಂಕ್ ನಡಾವಳಿ

ತುಮಕೂರು : 

      ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರದಲ್ಲಿ ನಿತ್ಯ ಗ್ರಾಹಕರು ಒಂದಲ್ಲ ಒಂದು ರೀತಿಯ ಕಿರಿಕಿರಿಗೆ ಒಳಗಾಗುತ್ತಲೆ ಇದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಯಾಗಬಹುದು ಎಂಬ ನಿರೀಕ್ಷೆಗಳೆಲ್ಲವೂ ಹುಸಿಯಾಗುತ್ತಿದ್ದು, ಬದಲಿಗೆ ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಖಾತೆಗೆ ಹಣ ಹಾಕುವುದರಿಂದ ಹಿಡಿದು, ಹಣ ತೆಗೆದುಕೊಳ್ಳುವ ತನಕ, ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇವೆ. ಖಾತೆಯಲ್ಲಿ ಹಣವಿದ್ದೂ ಕೆಲವೊಮ್ಮೆ ಅದನ್ನು ಪಡೆಯಲಾಗದೆ ಅದೆಷ್ಟೋ ಜನ ಪರಿತಪಿಸುತ್ತಿದ್ದಾರೆ. ಗ್ರಾಹಕರಂತೂ ಬ್ಯಾಂಕ್‍ಗಳ ಈ ನಡಾವಳಿಗೆ ಬೇಸತ್ತು ಹೋಗುತ್ತಿದ್ದಾರೆ.

      ಹಿಂದೆಲ್ಲ ಗ್ರಾಹಕರು ಬ್ಯಾಂಕ್‍ಗಳಿಗೆ ಹೋದರೆ ಸಣ್ಣಪುಟ್ಟ ತಪ್ಪುಗಳನ್ನು ಅವರೆ ಸರಿಪಡಿಸಿಕೊಳ್ಳುತ್ತಿದ್ದರು. ಎಲ್ಲಿ ತಪ್ಪಾಗಿದೆ, ಏನು ಸರಿಪಡಿಸಬೇಕು ಎಂಬ ಮಾಹಿತಿಯನ್ನು ಅವರೆ ನೀಡುತ್ತಿದ್ದರು. ಆಗೆಲ್ಲ ಒಂದು ರೀತಿಯಲ್ಲಿ ಜನಸ್ನೇಹಿಯಾಗಿಯೇ ಬ್ಯಾಂಕ್ ಸಿಬ್ಬಂದಿ ವರ್ತಿಸುತ್ತಿದ್ದರು. ಎಲ್ಲೋ ಕೆಲವರನ್ನು ಹೊರತುಪಡಿಸಿದರೆ ಉಳಿದಂತೆ ಬ್ಯಾಂಕ್‍ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ವ್ಯವಸ್ಥಾಪಕರು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ ನಡೆದುಕೊಳ್ಳುತ್ತಿದ್ದರು. ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ಸಂಬಂಧವು ಉತ್ತಮವಾಗಿತ್ತು. ಅಷ್ಟೇ ಅಲ್ಲ, ಆತ್ಮೀಯತೆಯೂ ಕಾಣುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ ಜನಸ್ನೇಹಿ, ಗ್ರಾಹಕ ಸ್ನೇಹಿ ಎಂಬ ಪದಗಳಿಗೆ ಅರ್ಥವೆ ಇಲ್ಲದಂತಾಗಿದೆ.

      ಬೆರಳೆಣಿಕೆಯ ಕೆಲವು ಬ್ಯಾಂಕ್‍ಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಬ್ಯಾಂಕ್‍ಗಳ ಧೋರಣೆ ಗ್ರಾಹಕರಿಗೆ ಸಿಟ್ಟು, ಅಸಹನೆ ತರಿಸುತ್ತಿವೆ. ಗ್ರಾಹಕರೊಂದಿಗೆ ಮಾತನಾಡುವ ಸೌಜನ್ಯವಿಲ್ಲ. ಸಮರ್ಪಕ ಮಾಹಿತಿಗಳಿಲ್ಲ. ಅರ್ಥವಾಗದ ಯಾವುದಾದರೂ ಸಮಸ್ಯೆಯನ್ನು ಬ್ಯಾಂಕ್ ಅಧಿಕಾರಿಗಳು ಅಥವಾ ಸಿಬ್ಬಂದಿಗೆ ಹೇಳಿದರೆ ಅಲ್ಲಿ ಬೋರ್ಡ್ ಇದೆ ಓದಿಕೊಳ್ಳಿ ಎನ್ನುತ್ತಾರೆ. ಕಷ್ಟಮರ್ ಕೇರ್‍ಗೆ ಕರೆ ಮಾಡಿ ಎನ್ನುತ್ತಾರೆ. ಒಂದೆರಡು ಮಾತುಗಳಲ್ಲಿ ಬಗೆಹರಿಸಬಹುದಾದ ಸಮಸ್ಯೆಗೆ ಸ್ಪಂದಿಸಲು ಅಲ್ಲಿ ತಾಳ್ಮೆ ಇಲ್ಲ. ಇದರ ಗಂಭೀರ ಪರಿಣಾಮ ಗ್ರಾಹಕರ ಮೇಲೆ ಉಂಟಾಗುತ್ತಿದೆ.

      ಕೊರೊನಾ ವೈರಸ್ ಪರಿಣಾಮ ಉಂಟಾದ ಲಾಕ್‍ಡೌನ್ ಸಂದರ್ಭ ಹಾಗೂ ಆನಂತರದ ದಿನಗಳಲ್ಲಿ ಗ್ರಾಹಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಬವಣೆ ಇನ್ನೂ ತಪ್ಪಿಲ್ಲ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಬ್ಯಾಂಕ್ ಮುಂದೆ ಫಲಕ ಹಾಕಿರುತ್ತಾರೆ. ಹೆಚ್ಚು ಜನರನ್ನು ಬ್ಯಾಂಕ್ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಕೊರೊನಾ ನಿಯಂತ್ರಣಕ್ಕಾಗಿ ತರಲಾದ ಈ ನಿಯಮಾವಳಿಗಳನ್ನು ಜನತೆ ಪಾಲಿಸುತ್ತಲೂ ಇದ್ದಾರೆ. ಆದರೆ ಬ್ಯಾಂಕ್ ಒಳಗೆ ಮಾತ್ರ ಸೌಲಭ್ಯಗಳು/ಮಾಹಿತಿಗಳು ನಿಖರವಾಗಿ ತಲುಪುತ್ತಿಲ್ಲ. ಸಿಬ್ಬಂದಿಯನ್ನು ಒಂದೆರಡು ಕ್ಷಣ ಮಾತನಾಡಿಸಲು ಆಗದಂತಹ ಪರಿಸ್ಥಿತಿ ಅಲ್ಲಿ ಕಂಡುಬರುತ್ತದೆ. ಬ್ಯಾಂಕ್‍ನಲ್ಲಿ ಉದ್ಯೋಗಿಗಳ ಕೊರತೆ, ಕನ್ನಡ ಮಾತನಾಡಲು ಬಾರದ ಸಿಬ್ಬಂದಿ ಹೀಗೆ ಹಲವು ಹತ್ತು ಸಮಸ್ಯೆಗಳನ್ನು ಅಲ್ಲಿ ಎದುರಿಸಬೇಕಾಗುತ್ತದೆ.

      ಬಹುತೇಕ ಬ್ಯಾಂಕ್‍ಗಳಲ್ಲಿ ಎದುರಾಗುತ್ತಿರುವ ಸಮಸ್ಯೆ ಎಂದರೆ ಸರ್ವರ್ ಸಮಸ್ಯೆ. ಎಲ್ಲವೂ ಆನ್‍ಲೈನ್, ಡಿಜಿಟಲ್ ವ್ಯವಹಾರವಾಗಿರುವ ಕಾರಣ ಸರ್ವರ್ ಸಮಸ್ಯೆ ಉಂಟಾಗಿ ಗ್ರಾಹಕರು ಪರಿತಪಿಸುವಂತಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗೋಪಾಯಗಳನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ. ಡಿಜಿಟಲೀಕರಣಕ್ಕೆ, ಆನ್‍ಲೈನ್ ವರ್ಗಾವಣೆಗೆ ನೀಡಿದ ಆಸಕ್ತಿ ಮತ್ತು ಒತ್ತನ್ನು ಗ್ರಾಹಕರ ಸಂಕಷ್ಟಗಳ ಪರಿಹಾರಕ್ಕೆ ಅಥವಾ ಸಲಕರಣೆಗಳ ಆಧುನೀಕರಣಕ್ಕೆ ನೀಡಲಿಲ್ಲ. ಈ ಎಲ್ಲ ಹೊಣೆಗಾರಿಕೆಗಳು ಗ್ರಾಹಕರ ಮೇಲೆ ಬೀಳುತ್ತಿವೆ.

      ಬ್ಯಾಂಕ್ ಆಡಳಿತ ಎಷ್ಟು ಕೆಟ್ಟು ಹೋಗಿದೆ ಎಂದರೆ ಗ್ರಾಹಕನ ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಕೊಡಲಾಗದಷ್ಟು ಸೌಲಭ್ಯಗಳ ಕೊರತೆ ಉಂಟಾಗಿದೆ. ಎಂಟ್ರಿ ಮಾಡುವ ಯಂತ್ರಗಳು ಬಹುತೇಕ ಕಡೆ ದುರಸ್ತಿಯಲ್ಲಿವೆ. ಹಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ಯಂತ್ರಗಳಿವೆ. ಕೋವಿಡ್ ಸಂದರ್ಭದ ಐದಾರು ತಿಂಗಳ ಕಾಲ ಈ ಯಂತ್ರಗಳೆಲ್ಲ ಬಂದ್ ಆಗಿದ್ದವು. ಎಂಟ್ರಿ ಮಾಡಲಾಗದು ಎಂಬ ಫಲಕ ಹಾಕಿದ್ದರು. ಈಗ ಅವಕಾಶವಿದ್ದರೂ ಯಂತ್ರಗಳು ಕೆಟ್ಟು ಹೋಗಿವೆ. ಇದೊಂದೇ ಅಲ್ಲ, ಬ್ಯಾಂಕ್‍ನಲ್ಲಿರುವ ಇತರೆ ಸೌಲಭ್ಯಗಳ ಯಂತ್ರಗಳು ಪದೆ ಪದೆ ಕೆಟ್ಟು ಹೋಗುತ್ತಲೇ ಇರುತ್ತವೆ. ಓರ್ವ ಗ್ರಾಹಕ ಒಂದು ಸಣ್ಣ ಕೆಲಸಕ್ಕಾಗಿ ಮೂರ್ನಾಲ್ಕು ಬಾರಿ ಬ್ಯಾಂಕ್‍ಗೆ ಅಲೆಯುವಂತಹ ಪರಿಸ್ಥಿತಿ ಎದುರಾಗಿದೆ.

      ಬ್ಯಾಂಕ್‍ಗಳಲ್ಲಿ ನಗದು ವ್ಯವಹಾರ ಕಡಿಮೆ ಮಾಡಲು ಎಟಿಎಂ ಯಂತ್ರಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿಯೇ ಎಟಿಎಂ ಕಾರ್ಡ್ ವಿತರಿಸಲಾಗುತ್ತದೆ. ಈ ಕಾರ್ಡ್‍ಗಳಲ್ಲಿ ಸಣ್ಣ ದೋಷ ಉಂಟಾದರೂ ಕಾರ್ಯ ನಿರ್ವಹಿಸುವುದಿಲ್ಲ. ಇದರ ಹೊಣೆಗಾರಿಕೆಯನ್ನು ಬ್ಯಾಂಕ್‍ಗಳು ಹೊರುವುದೇ ಇಲ್ಲ. ಒಂದು ಕಡೆ ಬ್ಯಾಂಕ್‍ಗಳಲ್ಲಿ ನಗದೀಕರಣಕ್ಕೆ ನಿರಾಕರಿಸಲಾಗುತ್ತದೆ. ಆನ್‍ಲೈನ್ ವ್ಯವಹಾರಕ್ಕೆ ಉತ್ತೇಜಿಸಲಾಗುತ್ತದೆ. ಆದರೆ ಎಷ್ಟು ಮಂದಿ ಇಂತಹ ಆನ್‍ಲೈನ್ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯ? ನಗದು ವಹಿವಾಟು ಇಲ್ಲದೆಯೆ ಸಮಾಜದಲ್ಲಿ ವ್ಯಾಪಾರ ವಹಿವಾಟು, ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ಸಾಧ್ಯವೆ?

      ತುಮಕೂರಿನ ಕೆಲವು ಕಡೆಗಳಲ್ಲಿ ಬ್ಯಾಂಕ್ ವ್ಯವಹಾರ ನಡೆಸುವ ಗ್ರಾಹಕರಿಗೆ ಪರಿಸ್ಥಿತಿ ಸಾಕಷ್ಟು ಅಸಮಾಧಾನ ತರಿಸಿದೆ. ವಿಜಯಾ ಬ್ಯಾಂಕ್ ಈಗ ಬ್ಯಾಂಕ್ ಆಫ್ ಬರೋಡದಲ್ಲಿ ವಿಲೀನವಾಗಿದೆ. ಇಲ್ಲಿ ಹೊಸದಾಗಿ ಜಾರಿಗೆ ಬಂದಿರುವ ನಿಯಮಗಳು ಗ್ರಾಹಕರನ್ನು ಆತಂಕಕ್ಕೆ ತಳ್ಳುತ್ತಿವೆ. ಈ ಬ್ಯಾಂಕ್‍ಗಳಲ್ಲಿ ಈಗ ಹೆಚ್ಚು ಹಿಂದಿ ಭಾಷೆ ಮಾತನಾಡುವವರು ಸೇರಿಬಿಟ್ಟಿದ್ದಾರೆ. ಅಲ್ಲಿನ ಚಲನ್‍ಗಳು ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿವೆ. ಈ ಎರಡೂ ಭಾಷೆ ಬಾರದವರು ಅಂದರೆ ಕನ್ನಡದವರು, ಅನಕ್ಷರಸ್ಥರು, ಅಷ್ಟಾಗಿ ವಿದ್ಯಾವಂತರಲ್ಲದವರು ಇಲ್ಲಿ ವ್ಯವಹರಿಸುವುದು ಅತ್ಯಂತ ಕಷ್ಟದಾಯಕವಾಗುತ್ತಿದೆ.

      ಕೋವಿಡ್ ನಿಯಮಾವಳಿ ಪಾಲನೆ ಮಾಡುವ ಹೆಸರಿನಲ್ಲಿ ಗ್ರಾಹಕರನ್ನು ಕ್ಯೂನಲ್ಲಿ ನಿಲ್ಲಿಸಲಾಗುತ್ತಿದೆ. ಒಳಗೆ ಮಾತ್ರ ತ್ವರಿತವಾಗಿ ಕೆಲಸಗಳು ಆಗುತ್ತಿಲ್ಲ. ನವೆಂಬರ್ 1 ರಿಂದ ಅನ್ವಯವಾಗುವಂತೆ ಬ್ಯಾಂಕ್ ಆಫ್ ಬರೋಡಾದಲ್ಲಿ ಹಣದ ವರ್ಗಾವಣೆಗೆ ಶುಲ್ಕ ನಿಗದಿಪಡಿಸಲಾಗಿದೆ. ಈ ಹಿಂದೆ ವಿಜಯಾ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದ ಗ್ರಾಹಕರಿಗೆ ಈಗ ಮತ್ತೆ ಹೊಸದಾಗಿ ಕೆವೈಸಿ ದಾಖಲೆಗಳನ್ನು ನೀಡುವಂತೆ ನೋಟೀಸ್ ಕಳುಹಿಸುವುದು ಸೇರಿದಂತೆ ಇನ್ನಷ್ಟು ಕಿರಿಕಿರಿಗಳು ಇಲ್ಲಿ ಎದುರಾಗುತ್ತಿವೆ. ಖಾತೆ ಹೊಂದಿರುವವರು ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಹೆಣಗಾಡುವ ಪರಿಸ್ಥಿತಿ ಬಂದೊದಗಿದೆ.

      ಇದೊಂದೇ ಬ್ಯಾಂಕ್ ಮಾತ್ರವಲ್ಲ, ಇತರೆ ಬ್ಯಾಂಕ್‍ಗಳಲ್ಲಿಯೂ ಹಲವು ರೀತಿಯ ಕಿರಿಕಿರಿಗಳು ಎದುರಾಗುತ್ತಲೆ ಇವೆ. ಪಿಂಚಣಿದಾರರಂತೂ ತಮ್ಮ ಹಣ ಬಿಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ವಯೋವೃದ್ಧರಾಗಿರುವ ನಿವೃತ್ತರು ಯಾರದೋ ಸಹಾಯದಿಂದ ಬ್ಯಾಂಕ್‍ಗಳಿಗೆ ಹೋಗಿ ಅಲ್ಲಿ ವಿಚಾರಿಸುತ್ತಿರುವ, ಮತ್ತೆ ಮತ್ತೆ ಬ್ಯಾಂಕ್‍ಗಳಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿರುವುದು ಈಗ ಸಾಮಾನ್ಯ ಸಂಗತಿಯಾಗಿದೆ. ನಿಯಮಿತವಾಗಿ ಖಾತೆಗೆ ಪಿಂಚಣಿ ಹಣ ಜಮೆಯಾದರೂ ಅದರ ಮಾಹಿತಿ ನೀಡದಿರುವ, ನಾಳೆ ಬನ್ನಿ ಎಂದು ಹೇಳುವ ಪ್ರಸಂಗಗಳು ವಯೋವೃದ್ಧರನ್ನು ಸಾಕಷ್ಟು ಚಿಂತೆಗೆ ಈಡುಮಾಡಿದೆ.

  • – ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap