ಪಾವಗಡ : ರಾಮಕೃಷ್ಣಾಶ್ರಮ ಸೇವಾಯಜ್ಞಕ್ಕೆ ಸಚಿವರ ಸಹಕಾರ

 ಪಾವಗಡ : 

      ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ನಿರಂತರವಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಜಪಾನಂದಜೀರವರ ಸೇವಾ ಯಜ್ಞಕ್ಕೆ ತಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಇದ್ದೇ ಇರುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

      ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀರವರು ಡಿ.1 ರ ಮಂಗಳವಾರ ಬೆಂಗಳೂರಿನಲ್ಲಿ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದಾಗ ಸಚಿವರು ಸ್ವಾಮೀಜಿಯೊಂದಿಗೆ ಮಾತನಾಡುತ್ತಾ ಹೀಗೆಂದು ತಿಳಿಸಿದ್ದಾರೆ. 

      ಈ ಸಂದರ್ಭದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಕೈಗೊಳ್ಳುತ್ತಿರುವ ನೂತನ ಯೋಜನೆಗಳ ಬಗ್ಗೆ ಸ್ವಾಮೀಜಿ ಸಚಿವರಿಗೆ ತಿಳಿಸಿ, ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರಿದ ನಾಲ್ಕು ತಾಲ್ಲೂಕುಗಳಾದ ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಶಿರಾ ತಾಲ್ಲೂಕುಗಳ ಆಯ್ದ 20 ಸರ್ಕಾರಿ ಪ್ರೌಢಶಾಲೆಗಳಿಗೆ ದೂರತರಂಗ ಶಿಕ್ಷಣಕ್ಕಾಗಿ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದೊಂದಿಗೆ ಮೊದಲ ಹಂತದಲ್ಲಿ ಡಿಜಿಟಲ್ ಕ್ಯಾಮರಾ, ಡಿಜಿಟಲ್ ಸ್ಕ್ರೀನ್ ಹಾಗೂ ಕಂಪ್ಯೂಟರ್, ಯು.ಪಿ.ಎಸ್. ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೀಡುವ ಮಹಾನ್ ಯೋಜನೆಗೆ ಚಾಲನೆ ನೀಡಲು ಗೌರವಾನ್ವಿತ ಮಂತ್ರಿಗಳೊಂದಿಗೆ ಮಾತುಕತೆಯಾಡಿದರು.

     ಕಳೆದ ಎರಡೂವರೆ ದಶಕಗಳಿಂದಲೂ ಎಸ್.ಸುರೇಶ್ ಕುಮಾರ್‍ರವರ ನಿಕಟ ಸಂಬಂಧ ಹೊಂದಿರುವ ಸ್ವಾಮಿ ಜಪಾನಂದಜೀರವರು ತಮ್ಮ ಈ ಮಹಾನ್ ಯೋಜನೆಗೆ ಚಾಲನೆ ನೀಡಲು ಮಂತ್ರಿಯವರನ್ನು ಆಹ್ವಾನಿಸಿದರು. ಈ ವೇಳೆ ದೂರತರಂಗ ಶಿಕ್ಷಣದ ಯೋಜನೆಯ ಮುಖ್ಯ ಕಾರ್ಯಾಧಿಕಾರಿ ಮಹೇಶ್ (ಸಾಹಸ್ ಯೋಜನೆಯ ಅಧಿಕಾರಿ), ವೆಂಕಟೇಶ್, ಆಶ್ರಮದ ಸಂಯೋಜಕರು ಭಾಗಿಯಾಗಿದ್ದರು.ಈ ಯೋಜನೆಯು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದು ಜಪಾನಂದಜಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link