ಗ್ರಾ.ಪಂ. ಚುನಾವಣೆ : ಆಟೊ, ಟ್ರ್ಯಾಕ್ಟರ್ ಚಿಹ್ನೆಗೆ ಭಾರಿ ಬೇಡಿಕೆ

ಹುಳಿಯಾರು : 

      ಈ ಬಾರಿಯ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಆಟೊರಿಕ್ಷಾ ಮತ್ತು ಟ್ರ್ಯಾಕ್ಟರ್ ಚಿಹ್ನೆಗೆ ಬಲು ಬೇಡಿಕೆ ಕಂಡುಬಂದಿದ್ದು ಎಲ್ಲಾ ಪಂಚಾಯ್ತಿಗಳಲ್ಲೂ ಈ ಎರಡು ಚಿಹ್ನೆಗಳನ್ನು ಲಾಟರಿ ಮೂಲಕ ಹಂಚಲಾಗಿದೆ.

      ಗ್ರಾಮ ಪಂಚಾಯಿತಿ ಚುನಾವಣೆಯು ಪಕ್ಷ ರಹಿತವಾಗಿ ನಡೆಯುವುದರಿಂದ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಾಗಿದ್ದರೂ ಪಕ್ಷಗಳ ಚಿಹ್ನೆಗಳನ್ನು ಬಳಸುವಂತಿಲ್ಲ. ಹಾಗಾಗಿ ಚುನಾವಣಾ ಆಯೋಗ ನೂರಕ್ಕೂ ಹೆಚ್ಚು ಚಿಹ್ನೆಗಳನ್ನು ನಿಗದಿಪಡಿಸಿದೆ. ಈ ಹೆಚ್ಚಿನ ಚಿಹ್ನೆಗಳಲ್ಲಿ ಯಾವುದಾದರೂಂದನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು.

      ಆದರೆ ಚುನಾವಣಾ ಆಯೋಗ ನೀಡಿರುವ ನೂರಾರು ಚಿಹ್ನೆಗಳಲ್ಲಿ ಆಟೊ ರಿಕ್ಷಾ ಮತ್ತು ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆಗಳಿಗೆ ಬಹು ಬೇಡಿಕೆ ಕಂಡುಬಂದಿತ್ತು. ಶಂಕರ್ ನಾಗ್ ಅಭಿನಯದ ಆಟೋ ರಾಜ ಸೇರಿದಂತೆ ಬಹುತೇಕ ಸಿನಿಮಾಗಳಲ್ಲಿ ಆಟೋವನ್ನು ಜನರ ಸೇವಕ ಎನ್ನುವಂತೆ ಚಿತ್ರಿಸಿರುವುದರಿಂದ ಮತದಾರರ ಸೇವೆಗೆ ನಾನು ಸಾದಾ ಸಿದ್ಧ ಎಂದು ತೋರಿಸುವ ಸಲುವಾಗಿ ಅಭ್ಯರ್ಥಿಗಳು ಆಟೋ ಚಿಹ್ನೆ ಪಡೆಲಯು ಉತ್ಸುಕರಾಗಿದ್ದಾರೆ. ಅಲ್ಲದೆ ಟ್ರ್ಯಾಕ್ಟರ್ ರೈತ ಸ್ನೇಹಿಯಾಗಿದ್ದು ನಾನೊಬ್ಬ ರೈತ ಎಂದು ತೋರಿಸುವ ಸಲುವಾಗಿ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆ ಪಡೆಯುತ್ತಿದ್ದಾರೆ.

      ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು `ಆಟೊರಿಕ್ಷಾ’ ಮತ್ತು ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆಗೆ ಹೆಚ್ಚಿನ ಒಲವು ತೋರಿದ್ದಾರೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಿರ್ದಿಷ್ಟ ಚಿಹ್ನೆಗೆ ಬೇಡಿಕೆ ಸಲ್ಲಿಸಿದರೆ ಆಯೋಗದ ನಿಯಮದಂತೆ ಆ ಚಿಹ್ನೆಯನ್ನು ಲಾಟರಿ ಮೂಲಕ ಹಂಚಿಕೆ ಮಾಡಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಬಹುತೇಕ ಕಡೆಗಳಲ್ಲಿ ಈ ಎರಡು ಚಿಹ್ನೆಗಳನ್ನು ಲಾಟರಿ ಮೂಲಕವೇ ಹಂಚಿಕೆ ಮಾಡಲಾಯಿತು.

      ಉಳಿದಂತೆ ಜನರು ಹೆಚ್ಚಾಗಿ ಬಳಸುವ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ, ಪ್ರಚಾರಕ್ಕೆ ಅನುಕೂಲಕರವಾದ ಚಿಹ್ನೆಗಳಾದ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್, ಕುಕ್ಕರ್, ಹೊಲಿಗೆ ಯಂತ್ರ, ತೆಂಗಿನ ತೋಟ, ದೂರವಾಣಿ, ಮುತ್ತಿನಹಾರ, ವಜ್ರ ಮತ್ತಿತರ ಚಿಹ್ನೆಗಳನ್ನು ಎರಡು ಮತ್ತು ಮೂರನ್ನೇ ಸ್ಥಾನದಲ್ಲಿ ಬೇಡಿಕೆಯಿಟ್ಟಿದ್ದರು. ಅಭ್ಯರ್ಥಿಗಳ ಬೇಡಿಕೆಗಳಂತೆ ಚುನಾವಣಾ ಆಯೋಗದ ನಿಯಮದಂತೆ ಎಲ್ಲಾರಿಗೂ ಶನಿವಾರ ಸಂಜೆ ಚಿಹ್ನೆಗಳನ್ನು ಹಂಚಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link