ತುಮಕೂರು : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ಆರೋಪಿಗೆ 10 ವರ್ಷ ಸಜೆ!!

 ತುಮಕೂರು :

     ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಅಲ್ಲಲ್ಲಿ ಸುತ್ತಾಡಿಸಿ ಕೊನೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಇಲ್ಲಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆಗಿರುವ ಪೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

      2014 ರಲ್ಲಿ ತುಮಕೂರಿನಲ್ಲಿ ನಡೆದಿದ್ದ ಘಟನೆ ಇದು. ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮನೆಯೊಂದರಲ್ಲಿ ವಾಸವಿದ್ದ 16ವರ್ಷದ ಬಾಲಕಿಯನ್ನು ಬೆಂಗಳೂರು ಗ್ರಾಮಾಂತರ ನೆಲಗುಂಟೆ ಗ್ರಾಮದ ಲಕ್ಷ್ಮಣ ಎಂಬಾತ ಬೆಳ್ಳಂಬೆಳಿಗ್ಗೆ ಬೈಕ್‍ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದ. ತುಮಕೂರಿನಿಂದ ಬೈಕ್‍ನಲ್ಲೇ ಕರೆದುಕೊಂಡು ಹೋಗಿ ದೊಡ್ಡಬಳ್ಳಾಪುರ ಮೊದಲಾದ ಕಡೆ ಸುತ್ತಾಡಿಸಿ ಮಂಡ್ಯ ಬಳಿ ಲೈಂಗಿಕ ದೌರ್ಜನ್ಯ ನಡೆಸಿದ್ದ.

      ಬಾಲಕಿ ಕಾಣೆಯಾದ ದಿನವೆ ಪೋಷಕರು ತುಮಕೂರಿನ ಹೊಸ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು. ಆನಂತರ ಆರೋಪಿಗಳನ್ನು ಪತ್ತೆ ಮಾಡಿ ಎನ್‍ಇಪಿಎಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ ಅವರು ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

      ನ್ಯಾಯಾಲಯದಲ್ಲಿ ಆರೋಪ ರುಜುವಾತಾದ ಕಾರಣ ಆರೋಪಿ ಲಕ್ಷ್ಮಣನಿಗೆ ಪೋಕ್ಸೋ ಕಾಯ್ದೆ ಕಲಂ 6ಅಡಿಯಲ್ಲಿ 10 ವರ್ಷ ಕಠಿಣ ಶಿಕ್ಷೆ, 20 ಸಾವಿರ ರೂ. ದಂಡ, ಐಪಿಸಿ ಕಲಂ 366 ಎ ಅಡಿಯಲ್ಲಿ 5 ವರ್ಷ ಕಠಿಣ ಶಿಕ್ಷೆ 5 ಸಾವಿರ ರೂ. ದಂಡ, ಕಲಂ 234ರ ಅಡಿಯಲ್ಲಿ 2 ವರ್ಷ ಶಿಕ್ಷೆ 5 ಸಾವಿರ ರೂ. ದಂಡ, 506ರ ಅಡಿಯಲ್ಲಿ 2 ವರ್ಷ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರಾದ ಎನ್.ಕೃಷ್ಣಯ್ಯ ತೀರ್ಪು ನೀಡಿರುತ್ತಾರೆ. ಸಂತ್ರಸ್ತ ಬಾಲಕಿಗೆ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾದ ಜಿ.ವಿ.ಗಾಯತ್ರಿ ರಾಜು ವಾದ ಮಂಡಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link