ದಲ್ಲಾಳಿಗಳ ಕೈ ಸೇರುತ್ತಿರುವ ಸಹಾಯಧನ

  ಪಾವಗಡ :


ತಾಲ್ಲೂಕಿನಲ್ಲಿ 15 ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಅತಿವೃಷ್ಟಿ ಅಥವಾ ಅನಾವೃಷ್ಟಿಯೆಂದು ಒಂದಲ್ಲೊಂದಕ್ಕೆ ತುತ್ತಾಗುತ್ತಿರುವ ರೈತರಿಗೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಅನ್ನದಾತರನ್ನು ವಂಚಿಸುತ್ತಿದ್ದಾರೆ ಎಂದು ರೈತ ಪರ ಹೋರಾಟಗಾರರು ಆರೋಪಿಸಿದ್ದಾರೆ.

      ಆಡಳಿತದಲ್ಲಿ ಇರುವ ಸರ್ಕಾರಗಳು ರೈತರಿಗೆ ವಿವಿಧ ರೂಪದಲ್ಲಿ ಕೃಷಿ ಯೋಜನೆಗಳನ್ನು ಘೋಷಣೆ ಮಾಡುವ ಪ್ರವೃತಿ ಬೆಳೆಸಿಕೊಳ್ಳ್ಳುವುದು ಬಿಟ್ಟರೆ, ಯೋಜನೆಗಳಿಂದ ಯಾವುದೇ ರೀತಿಯಲ್ಲಿ ರೈತನಿಗೆ ಸದುಪಯೋಗವಾಗಿಲ್ಲ. ಯೋಜನೆಗಳು ನಾಮಕಾವಸ್ಥೆಗೆ ಮಾತ್ರ ಸೃಷ್ಟಿಯಾಗಿ, ರೈತರಿಗೆ ಸರ್ಕಾರ ನೀಡುವ ರಿಯಾಯಿತಿ ಸಹಾಯಧನ ಕೂಡ ದಲ್ಲಾಳಿಗಳ ಕೈಸೇರುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಸುಮಾರು ವರ್ಷಗಳಿಂದ ಪಾವಗಡ ತಾಲ್ಲೂಕಿನಲ್ಲಿ ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದ, ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಿ.ಎಂ.ಯೋಜನೆಯಡಿಯಲ್ಲಿ ರೈತರ ಖಾತೆಗಳಿಗೆ ಮೂರು ತಿಂಗಳಿಗೊಮ್ಮೆ ಎರಡು ಸಾವಿರ ರೂ. ಸಹಾಯ ಧನ ಜಮಾ ಮಾಡುತ್ತಿರುವುದು ಶ್ಲಾಘನೀಯ. ಆದರೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಒಂದು ವರ್ಷಕ್ಕೆ 6 ಸಾವಿರ ರೂಪಾಯಿ ಯಾವ ಲೆಕ್ಕಾಚಾರ ಎಂದು ರೈತರು ಆರೋಪಿಸಿದ್ದಾರೆ.

      ಬ್ಯಾಂಕ್‍ನಲ್ಲಿ ರೈತರ ಜಮೀನು ಮತ್ತು ಒಡವೆಗಳನ್ನು ಸಾಲದ ರೂಪದಲ್ಲಿ ಅಡವಿಟ್ಟು, ಬಂದಂತ ಹಣದಿಂದ ಮಳೆ ಆಶ್ರಿತ ಬೆಳೆಗಳನ್ನು ಬಿತ್ತನೆ ಮಾಡಿದರೆ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಕೈಗೆ ಸಿಗದೆ ಹಾಳಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಬೇಸಾಯ ಪದ್ದತಿಯು ಮತ್ತು ರೈತರು ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೈತ ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಈ ಹಿಂದಿನ ಸರ್ಕಾರದ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ಶೇ. 60 ರಷ್ಟು ರೈತರಿಗೆ ಅನುಕೂಲವಾಗಿದೆ. ಇನ್ನು ಕೆಲವು ರೈತರಿಗೆ ಯೋಜನೆ ಕೈತಪ್ಪಿದ್ದು, ಇಂತಹ ರೈತರ ಬಗ್ಗೆ ಗಮನ ಹರಿಸಿ ಸರ್ಕಾರ ಸುದೀರ್ಘವಾಗಿ ಚರ್ಚೆ ನಡೆಸಿ, ಈ ಯೋಜನೆಯಲ್ಲಿ ಕೈ ಬಿಟ್ಟ ರೈತರ ಸಾಲ ಮನ್ನಾ ಮಾಡಬೇಕಾಗಿದೆ. ಮನ್ನಾ ಮಾಡಿದ ರೈತರಿಗೆ ಮತ್ತೆ ಬ್ಯಾಂಕ್‍ಗಳಲ್ಲಿ ಸಾಲ ಕೊಡಿಸಲು ಸರ್ಕಾರ ಮುಂದೆ ಬರಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.

      ಪಾವಗಡ ತಾಲ್ಲೂಕಿನ ರೈತರು ಮಳೆ ಆಶ್ರಿತ ಬೆಳೆಗಳನ್ನು ನಂಬಿ ಕೈಸುಟ್ಟುಕೊಂಡು, 2020-21 ನೆ ಸಾಲಿನಲ್ಲಿ ನೀರಾವರಿ ಪದ್ದತಿಯಿಂದ ತರಿಕಾರಿ ಬೆಳೆಗಳಿಗೆ ಮುಖ ಮಾಡಿದ್ದ ರೈತರಿಗೂ ಅತಿವೃಷ್ಟಿಯಿಂದ ಬೆಳೆ ನಾಶವಾಗಿ ಸಾಲಕ್ಕೆ ಸಿಲುಕಿ ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ ರೈತರು ಸಾವಿರಾರು ಹೆಕ್ಟೇರ್‍ನಲ್ಲಿ ಟೊಮ್ಯಾಟೊ ಬೆಳೆದು, ಈ ಹಿಂದಿನ ವರ್ಷದಲ್ಲಿ ಬೆಲೆ ಕುಸಿತವಲ್ಲದೆ, ಕೊರೋನಾ ವೈರಸ್‍ನಿಂದ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ದಿಕ್ಕು ತೋಚದಂತಾಗಿತ್ತು. ಅಲ್ಲದೆ ಟೊಮ್ಯಾಟೊ ಬೆಳೆಯು ರೋಗಕ್ಕೆ ತುತ್ತಾಗಿ, ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟಕ್ಕೆ ಗುರಿಯಾಗಿದ್ದನ್ನು ಕಂಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಟೊಮ್ಯಾಟೊ ಬೆಳೆ ಇಡಲು ರೈತರು ಮುಂದಾಗಿದ್ದು, ಸರ್ಕಾರ ತರಿಕಾರಿ ಬೆಳೆಗಳಿಗೆ ನಿಗದಿತ ಬೆಲೆ ಘೋಷಣೆ ಮಾಡಬೇಕು ಎಂದು ರೈತಾಪಿ ವರ್ಗ ಒತ್ತಾಯಿಸಿದೆ.

ರೈತರನ್ನು ಲೂಟಿ ಮಾಡುತ್ತಿರುವ ನರ್ಸರಿ ಮಾಲೀಕರು :

      ತಾಲ್ಲೂಕಿನಲ್ಲಿ ಸುಮಾರು 100 ಕ್ಕಿಂತ ಹೆಚ್ಚಿನದಾಗಿ ಪೈರು ನೀಡುವ ನರ್ಸರಿಗಳು ತಲೆ ಎತ್ತಿದ್ದು, ಗುಣ ಮಟ್ಟದ ಸಸಿ ನೀಡದೆ ಕಲಬೆರಕೆ ಸಸಿ ನೀಡಿದ ಕಾರಣ ಕೆಲ ರೈತರಿಗೆ ಟೊಮ್ಯಾಟೊ ಬೆಳೆಯಲ್ಲಿ ನಷ್ಟವಾಗಿದೆ. ಇದು ಒಂದು ಕಡೆಯಾದರೆ, ದುಬಾರಿ ಬೆಲೆಯಲ್ಲಿ ಸಸಿ ನೀಡುತ್ತಿದ್ದರೂ, ರೈತರು ಹಿಂದೆ ಮುಂದೆ ನೋಡದೆ ಟೊಮ್ಯಾಟೊ ಬೆಳೆಯಲು ನಾಮುಂದು ತಾಮುಂದು ಎಂಬಂತೆ ಸಸಿ ಕೊಳ್ಳಲು ಹೊರಟಿದ್ದಾರೆ.

     ನರ್ಸರಿಗಳಲ್ಲಿ ಸಸಿ ನೀಡುವಾಗ ಒಂದು ಸಸಿಗೆ 60 ಪೈಸೆಯಿಂದ ಹಿಡಿದು ಒಂದು ರೂಪಾಯಿಯವರೆಗೂ ಬೆಲೆ ನಿಗದಿ ಮಾಡಿ, ಮಾರಾಟ ಮಾಡುತ್ತಿದ್ದಾರೆ. ಈ ದುಬಾರಿ ಬೆಲೆಗೆ ಸಸಿ ಮಾರಲು ಮಾಲೀಕರಿಗೆ ಯಾರು ಆದೇಶ ನೀಡಿದ್ದಾರೆ ಎಂಬ ಮಾಹಿತಿ ಇದುವರಿಗೂ ನಮಗೆ ಗೊತ್ತಿಲ್ಲ. ನರ್ಸರಿ ಪ್ರಾರಂಭಿಸುವ ಮಾಲೀಕರು ಯಾರಿಂದ ಅನುಮತಿ ಪಡೆಯುತ್ತಾರೋ ಗೊತ್ತಿಲ್ಲ ಎಂದು ಪ್ರಜ್ಞಾವಂತ ರೈತರು ಆರೋಪಿಸಿದ್ದಾರೆ. ತೋಟಗಾರಿಕೆ ಸಹಾಯ ನಿರ್ದೇಶಕರು ಕಣ್ಣು ಮುಚ್ಚಿ ಕುಳಿತಿದ್ದಾರೆ

      ಪಾವಗಡ ತಾಲ್ಲೂಕಿನಲ್ಲಿ ಅಂತಾ ರಾಜ್ಯ ಆಂಧ್ರದಿಂದ ಬಂದಂತಹ ಜನ ನರ್ಸರಿ ಪ್ರಾರಂಭಿಸಿದ್ದಾರೆ. ಇವರಿಗೆ ಯಾರದಾದರೂ ಅನುಮತಿ ಬೇಕೋ ಬೇಡವೋ ಗೊತ್ತಿಲ್ಲ. ಇವರು ಹೇಳಿದ್ದೇ ಅಂತಿಮ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಇವರ ಮೇಲೆ ತೋಟಗಾರಿಕೆ ಅಧಿಕಾರಿಗಳು ಯಾವ ರೀತಿ ಕಾನೂನು ಕ್ರಮ ತೆಗೆದು ಕೊಳ್ಳುತ್ತಾರೊ ಕಾದು ನೋಡಬೇಕಾಗಿದೆ.

      ತಾಲ್ಲೂಕಿನ ರೈತರು ಯಾವ ಬೆಳೆ ಇಡಲು ಮುಂದಾಗುತ್ತಾರೋ ಅಂತಹ ರೈತರಿಗೆ ಅರಿವು ಮತ್ತು ತರಬೇತಿ ನೀಡುವ ಜವಾಬ್ದಾರಿ ಅಧಿಕಾರಿಗಳಿಗೆ ಇರಬೇಕು. ಈ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ತಾಲ್ಲೂಕಿನಲ್ಲಿ ಗುಣ ಮಟ್ಟದ ಬೆಳೆ ಬೆಳೆದ ರೈತರನ್ನು ಗುರ್ತಿಸುವ ಸೌಜನ್ಯ ಸಹ ಇವರಿಗಿಲ್ಲ. ಸರ್ಕಾರದಿಂದ ಕೋಟಿಗಟ್ಟಲೆ ಸಹಾಯ ಧನ ಮಂಜೂರಾಗುತ್ತದೆ. ಮಂಜೂರಾದ ಸಹಾಯ ಧನವನ್ನು ಯಾವ ಯೋಜನೆಯಲ್ಲಿ ರೈತನಿಗೆ ನೀಡುತ್ತಿದ್ದೇವೆ ಎಂಬ ಅರಿವು ಸಹ ಇವರಿಗಿಲ್ಲ. ರೈತರು ಬೇಕಿಲ್ಲ, ಸರ್ಕಾರದಿಂದ ಬಂದಂತ ಸಹಾಯ ಧನವನ್ನು ಏಜೆನ್ಸಿಗಳಿಗೆ ನೀಡುವುದೇ ಇವರ ಕೆಲಸ ಎಂದು ರೈತರು ಆರೋಪಿಸಿದ್ದಾರೆ.

      ಏಪ್ರಿಲ್ 27 ಕ್ಕೆ ಭರಣಿ ಮಳೆ ಪ್ರಾರಂಭವಾದ ತಕ್ಷಣವೆ, ತೋಟಗಾರಿಕೆಗೆ ಸಂಬಂಧ ಪಟ್ಟಂತೆ ತರಿಕಾರಿ ಬೆಳೆ ಬೆಳೆಯಲು ಎಷ್ಟು ರೈತರು ಮುಂದಾಗುತ್ತಾರೆ ಎಂಬ ಮಾಹಿತಿ ಪಡೆಯಬೇಕು. ರೈತರಿಗೆ ಯಾವ ಸಸಿ ನಾಟಿ ಮಾಡಿದರೆ ಇಳುವರಿ ಹೆಚ್ಚು ಬರುತ್ತದೆ ಮತ್ತು ಬೆಳೆಗಳಿಗೆ ತಕ್ಕಂತೆ ಬಿತ್ತನೆ ಮಾಡುವ ಸಂದರ್ಭದಲ್ಲಿ ಯಾವ ಗೊಬ್ಬರ ಬಳಸಬೇಕೆಂಬ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

      ಸರ್ಕಾರ ರೈತರಿಗೆ ವಿವಿಧ ಯೋಜನೆಗಳನ್ನು ರೂಪಿಸಿ, ತೋಟಗಾರಿಕೆ ಬೆಳೆಗಳಾದ ಮಾವು, ಸಪೋಟ, ತೆಂಗು, ದಾಳಿಂಬೆ, ವಿವಿಧ ಹಣ್ಣು ಮತ್ತು ಹೂವು ಹಾಗೂ ತರಿಕಾರಿ ಬೆಳೆಯುವ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು. ರೈತರು ಪರ್ಯಾಯ ಬೆಳೆ ಬೆಳೆದು ಜೀವನ ಮಟ್ಟ ಸುಧಾರಿಸಲು ಸರ್ಕಾರ ಯೋಜನೆ ರೂಪಿಸಬೇಕು. ಅಧಿಕಾರಿ ಗಳು ಜಡ್ಡು ಹಿಡಿದು ಕುಳಿತು ರೈತರಿಗೆ ಮಾಹಿತಿ ತಿಳಿಸದೆ ಯೋಜನೆ ದುರುಪಯೋಗ ಪಡಿಸುತ್ತಿರುವುದನ್ನು ಕಛೇರಿಯ ದಾಖಲಾತಿಯಲ್ಲಿ ನಾವು ಕಾಣಬಹುದಾಗಿದೆ. 

 

ಎಚ್.ರಾಮಾಂಜಿನಪ್ಪ ಪಾವಗಡ

Recent Articles

spot_img

Related Stories

Share via
Copy link