ಬರಗೂರು :
ಶಿರಾ ತಾಲ್ಲೂಕು ಬರಗೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಾವಿನ ಸಂಖ್ಯೆಯೂ ಸಹ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಕಂಪ್ಲೀಟ್ ಲಾಕ್ ಡೌನ್ ಮಾಡಿದ ಪರಿಣಾಮ ಶನಿವಾರ, ಭಾನುವಾರ ಎರಡು ದಿನ ಇಡೀ ಬರಗೂರು ಗ್ರಾಮವೇ ಸ್ತಬ್ದವಾಗಿತ್ತು.
ಬರಗೂರು ಗ್ರಾಮ ಪಟ್ಟಣ ಪಂಚಾಯ್ತಿಯಲ್ಲದಿದ್ದರೂ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು, ಹೆಚ್ಚು ವ್ಯಾಪಾರ ವಹಿವಾಟು ಸೇರಿದಂತೆ ವಾಣಿಜ್ಯ ವ್ಯವಹಾರಗಳ ಕೇಂದ್ರ ಬಿಂದುವಾಗಿದೆ. ಇತ್ತೀಚೆಗೆ ಕೊರೊನಾ ಸೋಂಕು ನಿಭಾಯಿಸುವಲ್ಲಿ ಪೋಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ಪಂಚಾಯ್ತಿ ಸಿಬ್ಬಂದಿ ಸೇರಿದಂತೆ ಹಲವು ಇಲಾಖೆಗಳು ಹದ್ದಿನ ಕಣ್ಣಿಟ್ಟು ಕೊರೊನಾ ತಡೆಗೆ ಮುಂದಾಗುತ್ತಿದ್ದಾರೆ. ಆದರೂ ಕೊರೊನಾ ಮಹಾಮಾರಿ ಹೆಚ್ಚುತ್ತಲೇ ಇದೆ. ಇತ್ತೀಚೆಗೆ ಕೊರೊನಾ ಸೋಂಕು ಕೊಂಡಿ ಕತ್ತರಿಸುವ ಸಲುವಾಗಿ 15 ದಿನ ಲಾಕ್ ಡೌನ್ ಮಾಡಿ ¨ಳಗ್ಗೆ6 ರಿಂದ 10ಗಂಟೆವರೆಗೆ ಅವಶ್ಯಕ ವಸ್ತುಗಳನ್ನು ಕೊಳ್ಳಲು ಸರ್ಕಾರ ಆದೇಶಿಸಿತ್ತು. ಆದರೂ ಸಹ ಸೋಂಕು ಕಡಿಮೆಯಾಗದೇ ಇದ್ದರಿಂದ ಗ್ರಾಮಸ್ಥರು ಹಾಗೂ ಪಂಚಾಯ್ತಿ ಸಿಬ್ಬಂದಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದೆಂದು ಜನರಿಗೆ ಸೂಚನೆ ನೀಡಿದ ಪರಿಣಾಮ ಬರಗೂರನ್ನು ಕಂಪ್ಲೀಟ್ ಲಾಕ್ ಡೌನ್ ಮಾಡಲಾಗಿತ್ತು.
ಸುತ್ತಮುತ್ತಲ ಗ್ರಾಮಗಳಲ್ಲೂ ಕಟ್ಟೆಚ್ಚರ ವಹಿಸಿ ಯಾವುದೇ ವಾಹನಗಳಾಗಲಿ, ಜನರಾಗಲಿ ಓಡಾಡದೆ ಮನೆಯಲ್ಲೇ ಇದ್ದು ಜನರು ಸಹಕರಿಸಿದ ಹಿನ್ನೆಲೆಯಲ್ಲಿ ಬರಗೂರು ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ನೀರವತೆ ನೆಲೆಸಿತ್ತು. ಆದರೂ ಸಹ ಕೊರೊನಾ ಲಂಗು, ಲಗಾಮಿಲ್ಲದೆ ಶರವೇಗದಲ್ಲಿ ಸಾಗುತ್ತಿರುವುದನ್ನು ಅರಿತ ಸರ್ಕಾರ ಕೆಲವೊಂದು ನಿಯಮಗಳನ್ನು ಬದಲಿಸಿ ಮತ್ತೆ 15 ದಿನಗಳ ಕಾಲ ಬೆಳಗ್ಗೆ 6ರಿಂದ 9ಗಂಟೆವರೆಗೆ ಅವಶ್ಯಕ ವಸ್ತುಗಳಿಗೆ ಕಲಾವಕಾಶ ಕೊಟ್ಟು ಉಳಿದ ಸಮಯವನ್ನು ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿ ಕೊರೊನಾ ತಡೆಗೆ ಮುಂದಾಗಿದೆ. ಜನರೂ ಸಹ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕಟ್ಟುನಿಟ್ಟಿನ ನಿಯಮಗಳ ನ್ನು ಪಾಲಿಸಿ, ಕೊರೊನಾ ತಡೆಗಟ್ಟುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
