ತುರುವೇಕೆರೆ :
ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಿಗೂ ಕನಿಷ್ಠ 50 ಆಮ್ಲಜನಕ ಸಹಿತ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದು ಅದರಂತೆ ತುರುವೇಕೆರೆಯಲ್ಲೂ 50 ಬೆಡ್ಗಳನ್ನು ಶೀಘ್ರವೇ ಸಿದ್ದಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಾಸಕ ಮಸಾಲ ಜಯರಾಮ್ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಯಾರಿಗೆ ಆಮ್ಲಜನಕದ ಅಗತ್ಯವಿದೆಯೋ ಅಂತಹವರನ್ನು ಇಲ್ಲಿ ಉಳಿಸಿಕೊಂಡು ಉಳಿದವರನ್ನು ಕೋವಿಡ್ ಕೇಂದ್ರಗಳಿಗೆ ಕಳುಹಿಸಿ. ಫಿಜಿಷಿಯನ್ ಹಾಗು ಅನಸ್ತೇಷಿಯಾ ವೈದ್ಯರುಗಳು ಐಸಿಯು ವೆಂಟಿಲೇರ್ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿ. ಅನಾವಶ್ಯಕವಾಗಿ ಬೆಡ್ ಇಲ್ಲವೆಂದು ಯಾರನ್ನೂ ಹೊರಗೆ ಕಳುಹಿಸಬೇಡಿ ಎಂದು ಟಿಎಚ್ಒ ಡಾ.ಸುಪ್ರಿಯಾ ಹಾಗು ವೈದ್ಯಾಧಿಕಾರಿ ಡಾ.ಶೀಧರ್ಗೆ ಸೂಚಿಸಿದರು.
ಕೋವಿಡ್ ಕೇಂದ್ರಗಳು ಹಾಗೂ ಆಸ್ಪತ್ರೆಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಮತ್ತು ನರ್ಸ್ಗಳ ಕೊರತೆ ಇದೆ ಎಂಬ ಟಿಎಚ್ಒ ಪ್ರಶ್ನೆಗೆ, ನಿವೃತ್ತರು ಅಥವಾ ಯಾರನ್ನಾದರು ಬೇಗ ಹುಡುಕಿ ಅವರ ಹೆಸರುಗಳ ಪಟ್ಟಿಯನ್ನು ಕೊಡಿ. ನಾನು ಡಿಎಚ್ಒ ಅವರ ಬಳಿ ಮಾತನಾಡುತ್ತೇನೆಂದು ಸ್ಥಳದಲ್ಲಿದ್ದ ತಹಶೀಲ್ದಾರ್ಗೆ ಸೂಚಿಸಿದರು. ಜಿಲ್ಲೆಯಲ್ಲೇ ತುರುವೇಕೆರೆ ಮತ್ತು ಶಿರಾ ತಾಲ್ಲೂಕು ಹೊರತು ಪಡಿಸಿ ಮಿಕ್ಕ ಎಲ್ಲಾ ತಾಲ್ಲೂಕುಗಳಲ್ಲಿಯೂ ಕೋವಿಡ್ ನಿಯಂತ್ರಣ ಹಾದಿಗೆ ಮರಳುತ್ತಿದೆ ಹಾಗಾಗಿ ನೀವು ತಾಲ್ಲೂಕಿನ ಜನರಿಗೆ ವ್ಯಾಕ್ಸಿನ್ ಹಾಕಿ, ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿಸಿ ಹಾಟ್ಸ್ಪಾಟ್ಗಳಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಸೋಂಕಿತರನ್ನು ಆಯಾ ಪ್ರಾಥಮಿಕ ಕೇಂದ್ರದ ಆಸ್ಪತ್ರೆಯ ವೈದ್ಯರು ಭೇಟಿ ನೀಡಿ ನಿಮಗೆ ವರದಿ ನೀಡಲೆಂದು ಟಿಎಚ್ಒಗೆ ಸೂಚಿಸಿದರು.
ಪಟ್ಟಣದಲ್ಲಿ ಜನರು ಯಥಾಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ. ತುರುವೇಕೆರೆಯಲ್ಲಿ ಲಾಕ್ಡೌನ್ಗೆ ಅರ್ಥವಿದೆಯೇನ್ರಿ. ಹಾಗೆ ತಿರುಗಿ ನೋಡ್ರೀ ರಸ್ತೆಯಲ್ಲಿ ಎಷ್ಟೋಂದು ವಾಹನಗಳು ಓಡಾಡುತ್ತಿವೆ, ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಹಿಡಿದು ಕೇಸ್ ಹಾಕಿ. ನನಗೆ ಕಥೆ ಹೇಳಬೇಡಿ, ಕೆಲಸ ಮಾಡ್ಬೇಕಷ್ಟೆ ಎಂದು ಡಿವೈಎಸ್ಪಿ ರಮೇಶ್ ಹಾಗು ವೃತ್ತನಿರೀಕ್ಷಕ ನವೀನ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಶಾಸಕ ಮಸಾಲಜಯರಾಂ ದ್ವನಿಗೂಡಿಸುತ್ತಾ ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದ್ದೆ. ಜನರು ಮಾಸ್ಕ್ ಹಾಕದೆ ಟೀ ಅಂಗಡಿ ಮುಂದೆ ಕೂರುತ್ತಾರೆ. ಪೊಲೀಸರು ಹಳ್ಳಿಗಳಿಗೆ ಹೋಗಿ ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಮೂಡಿಸುತ್ತಿಲ್ಲವೆಂದು ವೃತ್ತನಿರೀಕ್ಷಕರನ್ನು ಪ್ರಶ್ನಿಸಿದರು. ಅದಕ್ಕೆ ಸಚಿವರು ಜನ ಬೇಕಾಬಿಟ್ಟಿ ಓಡಾಡಿದರೆ ಅದ್ಹೆಗೆ ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣವಾಗುತ್ತದೆ.
ಜನ ಸಂಚಾರ ಬಿಗಿ ಮಾಡಿ. ಇಲ್ಲ ಸಂಪೂರ್ಣ ಬಿಟ್ಟುಬಿಡಿ. ಬನ್ರಿ ಚಿಕ್ಕನಾಯಕನಹಳ್ಳಿಗೆ, ದಿನಕ್ಕೆ ನೂರಾರು ವಾಹನಗಳನ್ನು ಹಿಡಿದು ಪೊಲೀಸರು ಕೇಸ್ ಹಾಕಿದ್ದಾರೆ ನೋಡಿ. ಬೆಳಗ್ಗೆ 6 ರಿಂದ 10 ಗಂಟೆಯೊಳಗೆ ಎಲ್ಲ ಬಂದ್ ಆಗಬೇಕು. ಕೇವಲ ದಿನಸಿ ಅಂಗಡಿಗೆ ಮಾತ್ರ ರಿಯಾಯಿತಿ ತೋರಿಸಿ ಅಷ್ಟೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ, ಟಿಎಚ್ಒ ಡಾ.ಸುಪ್ರಿಯಾ, ವೈದ್ಯಾಧಿಕಾರಿ ಡಾ.ಶ್ರೀಧರ್, ತಾಲ್ಲೂಕು ಪಂಚಾಯಿತಿ ಇಓ ಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಡಿವೈಎಸ್ಪಿ ರಮೇಶ್, ಸಿಪಿಐ ನವೀನ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ