ಹುಳಿಯಾರು
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರಿಂದ ಯುವತಿ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಹಂದನಕೆರೆ ಹೋಬಳಿಯ ಮತಿಘಟ್ಟ ಗ್ರಾಮದಲ್ಲಿ ಜರುಗಿದೆ.
ಹುಳಿಯಾರು ಸಮೀಪದ ಮತಿಘಟ್ಟ ಗ್ರಾಮದ ಗಾಂಧಿನಗರದ ಬಳಿ ರಸ್ತೆ ಅಪಘಾತವಾಗಿ ಬಿಳಗಿಹಳ್ಳಿಯ ಯುವತಿ ಸೌಮ್ಯ (23) ಎಂಬುವವರಿಗೆ ತೀವ್ರ ಪೆಟ್ಟು ಬಿದ್ದಿದೆ. ದಾರಿಹೋಕರು ಕೂಡಲೆ ಆಕೆಯನ್ನು ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಸಿಗದೆ ಯುವತಿ ಸಾವನ್ನಪ್ಪಿದ್ದಾರೆ.
ಇದರಿಂದ ಯುವತಿಯ ಸಂಬಂಧಿಕರು ಆಕ್ರೋಶಗೊಂಡು ಯುವತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸಾವು ಸಂಭವಿಸುತ್ತಿರಲಿಲ್ಲ. ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವುದರಿಂದ ಸಾವು ಸಂಭವಿಸಿದೆ. ಇದಕ್ಕೆಲ್ಲ ಆರೋಗ್ಯ ಇಲಾಖೆಯವರೆ ಹೊಣೆ ಎಂದು ಆಸ್ಪತ್ರೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪ್ರಭಾರ ವೈದ್ಯೆ ಹಿಮಶ್ವೇತ ಆಸ್ಪತ್ರೆಯ ಸಿ.ಸಿ.ಟಿ.ವಿ.ಯ ಫುಟೇಜ್‍ಗಳನ್ನು ಆಧರಿಸಿ ಠಾಣೆಗೆ ದೂರು ನೀಡಿದ್ದಾರೆ. ಹಂದನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಂದನಕೆರೆ ಪಿಎಸ್‍ಐ ಯೋಗೀಶ್ ಭೇಟಿ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
