ತುರುವೇಕೆರೆ : ಕೋವಿಡ್ ಹಾಟ್‍ಸ್ಪಾಟ್‍ಗೆ ಜಿಲ್ಲಾಧಿಕಾರಿ ಭೇಟಿ

 ತುರುವೇಕೆರೆ:

      ತಾಲ್ಲೂಕಿನ ಕೋವಿಡ್ ಹಾಟ್‍ಸ್ಪಾಟ್ ಕೇಂದ್ರವಾದ ದಂಡಿನಶಿವರ ಗ್ರಾಮಕ್ಕೆ ಗುರುವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ದಂಡಿನಶಿವರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಹೆಚ್ಚಿನ ಸೋಂಕಿನ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಲ್ಲಿಯೇ ಇದ್ದ ಪೊಲೀಸ್ ವಸತಿ ಗೃಹಗಳಿಗೆ ತೆರಳಿ ವೀಕ್ಷಿಸಿದರು. ನಂತರ ಗ್ರಾಮದಲ್ಲಿನ ಹೋಮ್ ಕ್ವಾರಂಟೈನ್‍ನಲ್ಲಿನ ಕೆಲ ಮನೆಗಳಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ರೋಗಿಗಳ ಆರೋಗ್ಯ ವಿಚಾರಿಸಿದರಲ್ಲದೆ ಗ್ರಾಮದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಅಲ್ಲಿನ ಗ್ರಾಮ ಸ್ವಚ್ಛತೆ ಮತ್ತು ನೈರ್ಮಲ್ಯಗಳನ್ನು ವೀಕ್ಷಿಸಿದರು. ನಂತರ ಗ್ರಾಮ ಪಂಚಾಯಿತಿ ಮುಂದೆ ಟಾಸ್‍ಫೋರ್ಸ್ ಸದಸ್ಯರೊಂದಿಗೆ ಚರ್ಚೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಏನೇನು ಕ್ರಮಗಳನ್ನು ಕೈಗೊಂಡಿದ್ದೀರಿ. ಹೋಂ ಹೈಸೋಲೇಷನ್ ಅನ್ನು ಶಿಸ್ತುಬದ್ದವಾಗಿ ಮಾಡಿ, ಇಲ್ಲಿನ ರೋಗಿಗಳಿಗೆ ಆರೋಗ್ಯದಲ್ಲಿ ಚೇತರಿಕೆ ಆಗದಿದ್ದರೆ ಹತ್ತಿರದ ಕೋವಿಡ್ ಕೇಂದ್ರಗಳಿಗೆ ಕಳುಹಿಸಿ. ಸರ್ಕಾರದಿಂದ ಕೋವಿಡ್‍ಗೆ ನೀಡುತ್ತಿರುವ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳುವಂತೆ ರೋಗಿಗಳಿಗೆ ಮಾಹಿತಿ ನೀಡಿ. ಅದೇ ರೀತಿ ಸಣ್ಣಪುಟ್ಟ ಕಾಯಿಲೆಗಳಿದ್ದರೆ ಆಸ್ಪತ್ರೆಗಳಿಗೆ ತೋರಿಸಿಕೊಳ್ಳಲು ಜನರಿಗೆ ಸಲಹೆ ನೀಡಿ. ಎಲ್ಲ ಕಡೆ ಒಳ್ಳೆಯ ವೈದ್ಯರುಗಳಿದ್ದಾರೆ, ಆಮ್ಲಜನಕ ಹಾಗು ಬೆಡ್ ಸಮಸ್ಯೆಗಳು ಯಾವುದೂ ಇಲ್ಲ. ಆದ್ದರಿಂದ ನೀವೆಲ್ಲರೂ ಬದ್ಧತೆಯಿಂದ ಕೆಲಸ ಮಾಡಿ ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಿಸಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಎಸ್ಪಿ ಡಾ.ವಂಶಿಕೃಷ್ಣ, ತಹಶೀಲ್ದಾರ್ ಆರ್.ನಯಿಂಉನ್ನೀಸಾ, ಟಿಎಚ್‍ಒ ಡಾ.ಸುಪ್ರಿಯಾ, ಸಿಪಿಐ ನವೀನ್‍ಕುಮಾರ್, ಡಾ.ವಿಂದ್ಯಾ, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಪಿಡಿಒ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link