ಪಾವಗಡ :

ಭದ್ರಾ ಮೇಲ್ದಂಡೆ ಯೋಜನೆಗಾಗಿ ತಾಲ್ಲೂಕಿನ ರೈತರು, ಸಂಘ ಸಂಸ್ಥೆಗಳು ನಡೆಸಿದ ಅಹೋರಾತ್ರಿ ಧರಣಿ ಇಂದು ವ್ಯರ್ಥವಾಯಿತು ಎಂದು ಸಮಾಜ ಸೇವಕ ಹಾಗೂ ಪಾವಗಡ ವಿಧಾನ ಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ನೇರಳಕುಂಟೆ ನಾಗೇಂದ್ರ ಕುಮಾರ್ ತಿಳಿಸಿದರು.
ಅವರು ಪಟ್ಟಣದ ಗುರುಭವನದ ಕ್ರೀಡಾಂಗಣದಲ್ಲಿ ಒಂದು ಲಕ್ಷ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ತಾಲ್ಲೂಕಿನ ರೈತರು, ಸಂಸ್ಥೆಗಳು 33 ದಿನಗಳ ಕಾಲ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ಫಲವಾಗಿ ಅಂದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯರವರು 2351 ಕೋಟಿ ರೂ. ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದ್ದರು. ಆ ಯೋಜನೆಯಲ್ಲಿ ಪಾವಗಡ ತಾಲ್ಲೂಕಿಗೆ 1 ಟಿಎಂಸಿ ನೀರನ್ನು ಮೀಸಲಿಟ್ಟಿದ್ದರು. ಆದರೆ ಇಂದು ಯೋಜನೆ ಪೂರ್ಣಗೊಂಡು ನೀರು ಬರುವ ಸಮಯದಲ್ಲಿ ತಾಲ್ಲೂಕಿಗೆ ಅರ್ಧ ಟಿಎಂಸಿ ನೀರು ಮಾತ್ರ ಮೀಸಲಿಟ್ಟು, ತಾಲ್ಲೂಕಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಾವಗಡ ತಾಲ್ಲೂಕಿನಲ್ಲಿ ಅಂದು ಅಹೋರಾತ್ರಿ ನಡೆದ ಧರಣಿಯಿಂದ ಇತರೆ 11 ತಾಲ್ಲೂಕುಗಳಿಗೆ ಯೋಜನೆ ವರದಾನ ಆಗಿದೆ. ಆದರೆ ಯೋಜನೆಗೆ ಪಟ್ಟು ಹಿಡಿದಿದ್ದ ತಾಲ್ಲೂಕಿನ ಜನತೆಗೆ ಇಂದು ಮೋಸವಾಗಿದ್ದು, ತಾಲ್ಲೂಕಿಗೆ 2 ಟಿಎಂಸಿ ನೀರು ಕೊಡಲೆ ಬೇಕು. ನೀರಿಗಾಗಿ ಸರಕಾರದ ಮೇಲೆ ಒತ್ತಡ ಹೇರಲು ತಾಲ್ಲೂಕಿನ ಸಂಘ ಸಂಸ್ಥೆಗಳ, ರೈತರ, ಯುವ ಜನತೆಯ ಒಂದು ಲಕ್ಷ ಸಹಿ ಸಂಗ್ರಹ ಮಾಡಿ, ರಾಜ್ಯ ಸರಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದ ಅವರು, ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು, ಅಪರವಾಗಿ ಹೋರಾಟಕ್ಕೆ ಶಕ್ತಿ ಸಿಗಲಿದೆ ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ಹಲವು ದಿನಗಳ ಹೋರಾಟದ ಪ್ರತಿಫಲವಾಗಿ ಯೋಜನೆ ಜಾರಿಯಾದರೂ, ಇಂದು ಗಡಿ ಪ್ರದೇಶಕ್ಕೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ನೀರು ಸಿಗುವ ತನಕ ಸರಕಾರದ ವಿರುದ್ದ ಪಕ್ಷಾತೀತ ಹೋರಾಟಕ್ಕೆ ನಾವು ಸಿದ್ದವೆಂದರು. ಅಶ್ವತ್ಥ ನಾರಾಯಣ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








