ಮಧುಗಿರಿ :
ಎತ್ತಿನಹೊಳೆ ನೀರನ್ನು ಸಮರ್ಥವಾಗಿ ಹಿಡಿದಿಟ್ಟುಕೊಳ್ಳಲು ಬಿಜಾವರ ಕೆರೆಯನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುತ್ತಿದ್ದು, ತಾಲ್ಲೂಕಿನ 87 ಕೆರೆಗಳಿಗೆ ನೀರು ತುಂಬಲಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ಬಿಜಾವರ ಗ್ರಾಮದ ನೂತನ ಹಾಲು ಉತ್ಪಾದಕರ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆರೆ ಅಭಿವೃದ್ಧಿಯಿಂದಾಗಿ ಈ ಕ್ಷೇತ್ರದ ಅಂತರ್ಜಲ ಹೆಚ್ಚಾಗಿ ರೈತರು ಆರ್ಥಿಕವಾಗಿ ಸದೃಢರಾಗಲಿದ್ದಾರೆ. ಅಂತರ್ಜಲ ವೃದ್ಧಿಗೆ ಕಾರಣವಾದ ಬಿಜಾವರ ಕೆರೆಯ ಅಭಿವೃದ್ಧಿಗಾಗಿ 20 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಯಲಾಗಿದ್ದು, ಮುಂದೆ 2 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಗೊಳಿಸಲಾಗುವುದು. ಚುನಾವಣೆಯ ನಂತರ ಈ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದು, ಈಗಾಗಲೇ 50 ಲಕ್ಷ ರೂ. ವೆಚ್ಚದಲ್ಲಿ ಚೆಕ್‍ಡ್ಯಾಂ, 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಸಮಗ್ರ ಗ್ರಾಮಾಭಿವೃದ್ಧಿ ಕಾಮಗಾರಿ ನಡೆದಿವೆ. ಬರಪೀಡಿತ ಕ್ಷೇತ್ರದಲ್ಲಿ ರೈತರಿಗೆ ವ್ಯವಸಾಯವು ಆರ್ಥಿಕ ಚೈತನ್ಯ ನೀಡುತ್ತಿಲ್ಲ. ಆದರೆ ಹಾಲು ಉತ್ಪಾದನೆಯು ರೈತರ ಕೈ ಹಿಡಿದಿದ್ದು, ಬದುಕು ಸದೃಢವಾಗಿದೆ. ಹೈನುಗಾರಿಕೆಯನ್ನು ಉಪ ಕಸುಬಾಗಿ ಬಳಸುತ್ತಿದ್ದು, 1975 ರಲ್ಲೇ ಈ ಗ್ರಾಮದಲ್ಲಿ ಡೇರಿ ಅಸ್ತಿತ್ವಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. 40 ಲೀ. ಹಾಲಿನಿಂದ ಆರಂಭವಾಗಿ ಇಂದು 700 ಲೀ. ಹಾಲು ಪ್ರತಿ ದಿನ ಉತ್ಪಾದನೆಯಾಗುತ್ತಿರುವುದು ಶ್ಲಾಘನೀಯ ಎಂದರು.
ತುಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಒಕ್ಕೂಟ ಆರಂಭವಾದಾಗ ಅಸ್ತಿತ್ವದಲ್ಲಿದ್ದ ಈ ಬಿಜಾವರ ಡೇರಿಯು ಪುರಾತನ ಡೇರಿಯಾಗಿದ್ದು, 18 ಲಕ್ಷ ರೂ. ವೆಚ್ಚದಲ್ಲಿ ಡೇರಿ ಕಟ್ಟಡವನ್ನು ಸದೃಢವಾಗಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಒಕ್ಕೂಟದಿಂದ 10 ಲಕ್ಷರೂ. ಅನುದಾನ ನೀಡಿದ್ದು, ಉಳಿದಂತೆ ಶಾಸಕರು ಹಾಗೂ ಡೇರಿ ಆಡಳಿತ ಮಂಡಳಿಯ ಸಹಕಾರದಿಂದ ನಿರ್ಮಾಣವಾಗಲಿದೆ. ಯಾರೇ ಅಧಿಕಾರದಲ್ಲಿರಲಿ ಜನತೆಗೆ ಅನನುಕೂಲ ಮಾಡಬಾರದು. ಜಿಲ್ಲೆಯಲ್ಲಿ 9 ಲಕ್ಷ ಲೀ. ಹಾಲು ಉತ್ಪಾದನೆಯಾದರೂ ಒಕ್ಕೂಟಕ್ಕೆ ಮಾರುಕಟ್ಟೆಯಿದೆ. ರೈತರಿಗೆ ಹಲವಾರು ರೀತಿಯಲ್ಲಿ ಆರ್ಥಿಕ ಸಹಾಯವಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಶಾರದಮ್ಮ ಶ್ರೀನಿವಾಸ್, ತುಮುಲ್ ವಿಸ್ತರಣಾಧಿಕಾರಿಗಳಾದ ಶಂಕರನಾಗ್, ಮಹಾಲಕ್ಷ್ಮೀ, ಧರ್ಮವೀರ್, ಪಿಡಿಓ ರಂಗನಾಥ್, ಡೇರಿ ಅಧ್ಯಕ್ಷ ವಿರೂಪಾಕ್ಷಪ್ಪ, ನಿರ್ದೇಶಕರಾದ ಬಿ.ಸಿ.ಮಂಜುನಾಥ್, ಲೋಕೇಶ್ ಗ್ರಾಪಂ ಸದಸ್ಯರಾದ ಚಿಕ್ಕರಂಗಯ್ಯ, ದಿನೇಶ್‍ಕುಮಾರ್, ಆರ್‍ಐ ಸಿದ್ದರಾಜು, ವಿ.ಎ.ಶಿವಕುಮಾರ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ