ಪ.ಜಾ.-ಪ.ಪಂ.ಗಳ ಸಭೆಗೆ ಅಧಿಕಾರಿಗಳ ಗೈರು ; ಪ್ರತಿಭಟನೆ!!

ಮಧುಗಿರಿ :

      ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳ ಪ.ಜಾ. ಮತ್ತು ಪ.ಪಂ.ಗಳ ಉಪವಿಭಾಗ ಮಟ್ಟದ ಸಭೆಗೆ ಉಪಾವಿಭಾಗಾಧಿಕಾರಿ ಹಾಗೂ ಕೆಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದಾರೆಂದು ಆರೋಪಿಸಿ ಸಮುದಾಯಗಳ ಮುಖಂಡರು ಸಭೆಯನ್ನು ಬಹಿಷ್ಕರಿಸಿ ತಾಪಂ ಮುಂದಿನ ರಸ್ತೆಯಲ್ಲಿ ಕೆಲ ಹೊತ್ತು ಪ್ರತಿಭಟಿಸಿದರು.

      ಪಟ್ಟಣದ ಶಿರಾ ಗೇಟ್ ಬಳಿ ಇರುವ ತಾಪಂ ಸಭಾಂಗಣದಲ್ಲಿ ಉಪವಿಭಾಗ ಮಟ್ಟದ ಪಜಾ ಪಪಂಗಳ ಕುಂದುಕೊರತೆ ಸಭೆಯನ್ನು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದು, ಸಭೆಗೆ ಉಪವಿಭಾಗಾಧಿಕಾರಿಗಳ ಹಾಜರಿಯೇ ಇಲ್ಲವೆಂದು ಹಾಗೂ ಅನುಪಾಲನಾ ವರದಿಯನ್ನು ಸರಿಯಾಗಿ ಮಾಡಿಲ್ಲವೆಂದು ಆರೋಪಿಸಿ ಮುಖಂಡರು ಸಭೆಯನ್ನು ಬಹಿಷ್ಕರಿಸಿರುವ ಘಟನೆ ಗುರುವಾರ ನಡೆಯಿತು.
ತಡವಾಗಿ ಬಂದ ಎಸಿ: ಸಭೆಗೆ ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಆಗಮಿಸಿದ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ಅವರು ಪ್ರತಿಭಟನಾಕಾರರನ್ನು ಮನವೊಲಿಸಿ ಸಭೆಗೆ ಆಗಮಿಸಿದರು. ಆದರೇ ಎಷ್ಟೊತ್ತು ಕಾದರೂ ಮುಖಂಡರು ಮಾತ್ರ ಒಳ ಬರಲೇ ಇಲ್ಲ. ಕೊನೆಗೆ ಮತ್ತೊಮ್ಮೆ ಉಪವಿಭಾಗಾಧಿಕಾರಿಗಳು ಧರಣಿ ನಿರತರ ಬಳಿ ಬಂದು ಮಾತನಾಡಿದರು. ಆಗ ಮುಖಂಡರು ಅನುಪಾಲನಾ ವರದಿ ಸರಿಯಿಲ್ಲ ಎಂದು ಹಠಕ್ಕೆ ಬಿದ್ದು ಪ್ರತಿಭಟನೆಯನ್ನು ಮುಂದುವರಿಸಿದರು.

      ಅಧಿಕಾರಿಗಳಿಂದ ದಿಕ್ಕು ತಪ್ಪಿಸುವ ಕೆಲಸ :

      ಮಧುಗಿರಿ ಉಪವಿಭಾಗದ ಸಭೆಗೆ ಮಧುಗಿರಿ, ಪಾವಗಡ ಮತ್ತು ಶಿರಾ ಹಾಗೂ ಕೊರಟಗೆರೆ ತಾಲ್ಲೂಕುಗಳನ್ನು ಪ್ರತ್ಯೇಕವಾಗಿ ಮಾಡಿದ್ದರ ಉದ್ದೇಶವಾದರೂ ಏನು..? ಮಧುಗಿರಿ ಜಿಲ್ಲೆಯಾಗುವ ಎಲ್ಲಾ ಅರ್ಹತೆ ಇದ್ದರೂ ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಿರಾ ಎಂದು ಆರೋಪಿಸಿದಾಗ, ತಹಸಿಲ್ದಾರ್ ವೈ.ರವಿ ಅವರು ಉತ್ತರಿಸಿ ನಮಗೆ ಯಾವುದೇ ದುರುದ್ದೇಶ ಇಲ್ಲ, ಕೊರೋನಾ ನಿಯಮಾವಳಿಯಲ್ಲಿ ಸಭೆಯನ್ನು ಬೇರ್ಪಡಿಸಿದ್ದೇವೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.

     ಶಿರಾದಲ್ಲಿ ರಾಜಕೀಯ ಸಭೆಗಳ ಅದ್ಧೂರಿಯಾಗಿ ನಡೆದವು. ಆಗ ಕೊರೋನಾ ಅಡ್ಡ ಬರಲಿಲ್ಲವೇ ಎಂದು ಮುಖಂಡರ ಮರು ಪ್ರಶ್ನೆ ಕೇಳಿ ಬಂದಾಗ ನಾವು ಕಾನೂನಿನ ಅಡಿಯಲ್ಲೇ ಕೆಲಸ ಮಾಡುತ್ತಿದ್ದೇವೆ ಎಂದು ತಹಸಿಲ್ದಾರ್ ವೈ.ರವಿ ಅವರು ಉತ್ತರಿಸಿದರು.
ದಲಿತ ಮುಖಂಡರು ಕೆಲ ಸಮಯ ರಸ್ತೆ ತಡೆ ನಡೆಸಿ, ಅಧಿಕಾರಿಗಳ ಕ್ರಮಗಳನ್ನು ವಿರೋಧಿಸಿ, ಘೋಷಣೆ ಕೂಗಿ, ಕ್ರಾಂತಿಗೀತೆಗಳನ್ನು ಹಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಸೋಮಪ್ಪಕಡಕೋಳ ಅವರು ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.

      ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರುಗಳಾದ ಡಿ.ಟಿ.ಸಂಜೀವಮೂರ್ತಿ, ಸಿದ್ಧಾಪುರರಂಗಶ್ಯಾಮಣ್ಣ, ಜನಕಲೋಟಿ ರಂಗಾಧಾಮಯ್ಯ, ಎಂ.ವೈ.ಶಿವಕುಮಾರ್, ಭರತ್, ರಾಜಗೋಪಾಲ್, ತುಂಡೋಟಿ ರಾಮಾಂಜಿ, ಡಿ.ಹೆಚ್.ನರಸಿಂಹಮೂರ್ತಿ, ಆರ್.ಕೃಷ್ಣಪ್ಪ, ಬೇಡತ್ತೂರು ತಿಪ್ಪೇಸ್ವಾಮಿ, ನಾರಾಯಣಪ್ಪ, ಕೆ.ಎನ್.ರಾಜು, ಎಸ್.ಸಂಜೀವಯ್ಯ, ಚಿಕ್ಕಮ್ಮ, ಜೀವಿಕಮಂಜು, ಕೋಟೆಕಲ್ಲಪ್ಪ, ಮಹರಾಜು, ಮಹಾಲಿಂಗಯ್ಯ, ರಂಗನಾಥ್, ಕೆ.ಎನ್.ರಾಜು, ಪಾವಗಡದ ನಾಗೇಶ್, ಸಿ.ಕೆ.ತಿಪ್ಪೇಸ್ವಾಮಿ, ಪೆದ್ದಣ್ಣ, ರಘು, ರಮೇಶ್, ಪಿ.ಹೆಚ್.ಹನುಮಂತರಾಯಪ್ಪ ಮತ್ತಿತರರು ಹಾಜರಿದ್ದರು.

ತಿರುಚಿದ ಭೂ ದಾಖಲೆ : ಆರೋಪ :

      ಸಭೆ ಆರಂಭಕ್ಕೂ ಮುನ್ನಾ ತಹಶೀಲ್ದಾರ್ ವೈ.ರವಿ ಅವರು ಉಪವಿಭಾಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಾವಗಡಕ್ಕೆ ಸ್ಥಳಪರಿಶೀಲನೆಗೆ ಹೋಗಿರುವುದರಿಂದ ಸಭೆ ಆರಂಭದ ನಂತರ ಬಂದು ಸೇರಿಕೊಳ್ಳುತ್ತಾರೆ ಎಂದು ಹೇಳಿ ಸಭೆ ಆರಂಭಿಸಿದರು. ಸಭೆಯ ಆರಂಭದಲ್ಲೇ ಪಾವಗಡದ ನಾಗಲಮಡಿಕೆ ಹೋಬಳಿಯ ಪಳವಳ್ಳಿ ಗ್ರಾಮದ ತಳವಾರಿಕೆ ಇನಾಮಿಗೆ ಬಂದಿದ್ದ ಜಮೀನನ್ನು ಕಂದಾಯ ಅಧಿಕಾರಿಗಳು ದಾಖಲೆಗಳನ್ನು ತಿರುಚಿ ಭೂಪರಿವರ್ತನೆ ಮಾಡಿರುತ್ತಾರೆ. ಇದನ್ನು ರದ್ದು ಪಡಿಸುವಂತೆ ಹಾಗೂ ಭೂ ಪರಿವರ್ತನೆ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ನಾರಾಯಣಪ್ಪ ಆರೋಪಿಸಿದರು.

ಸಭೆ ಬಹಿಷ್ಕಾರಕ್ಕೆ ಕಾರಣವಾದ ಅನುಪಾಲನಾ ವರದಿ :

      ಅನುಪಾಲನಾ ವರದಿಯಲ್ಲಿ ಗಿರಿಯಮ್ಮ ಕೋಂ ಎಸ್.ವಿ.ಶ್ರೀನಿವಾಸಮೂರ್ತಿ, ಸ.ನಂ.13 ಈ ಜಮೀನು, ಪೌತಿ ವಾರಸುದಾರಿಕೆ ಆಧಾರದ ಮೇಲೆ ಖಾತೆ, ಪಹಣಿ ಬದಲಾವಣೆಯಾಗಿದ್ದು, ಹಿಡುವಳಿ ಜಮೀನು ಅಗಿರುತ್ತದೆ. ಈ ಸರ್ವೆ ನಂಬರ್‍ನಲ್ಲಿ ಯಾವುದೇ ರೀತಿಯ ಭೂ ಪರಿವರ್ತನೆಯಾಗಿರುವುದು ಕಂಡುಬರುವುದಿಲ್ಲ ಎಂದು ತಹಸೀಲ್ದಾರ್ ಅವರು ವರದಿ ಸಲ್ಲಿಸಿದ್ದಾರೆಂಬ ಅನುಪಾಲನಾ ವರದಿಯೇ ಸಭೆಯ ಬಹಿಷ್ಕಾರಕ್ಕೆ ಕಾರಣವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link