ಶಿರಾದಲ್ಲಿ ಕಮಲೋದಯ, ಕಾಂಗ್ರೆಸ್- ಜೆಡಿಎಸ್‍ಗೆ ಸೋಲಿನ ಕಹಿ!!

ತುಮಕೂರು:

      ಶಿರಾ ಕ್ಷೇತ್ರದ ಇತಿಹಾಸದಲ್ಲಿ ದಾಖಲೆಯೆಂಬಂತೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ 13,414 ಮತಗಳ ಅಂತರದ ಮುನ್ನಡೆಯೊಂದಿಗೆ ಜಯಬೇರಿ ಭಾರಿಸಿದ್ದು, ಪ್ರಥಮ ಬಾರಿಗೆ ಕೋಟೆಯ ನಾಡಲ್ಲಿ ಕಮಲೋದಯವಾಗಿದೆ.

     ಅಂಚೆ ಮತವೂ ಸೇರಿ ಚಲಾವಣೆಯಾಗಿದ್ದ ಒಟ್ಟು 1,81,596 ಮತಗಳಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‍ಗೌಡ 76,564 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ 63,150 ಮತಗಳನ್ನು ಪಡೆದು ಪ್ರಬಲ ಪೈಪೋಟಿ ಒಡ್ಡಿದ್ದರೂ ಗೆಲುವಿನ ಸನಿಹಕ್ಕೆ ಬರಲಾಗಲಿಲ್ಲ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 36,783 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೂ ಪಕ್ಷದ ಪ್ರಾತಿನಿಧ್ಯ ತೋರಿಸುವ ಮತ ಚಲಾವಣೆಯಾಗಿದೆ. ಉಳಿದಂತೆ ಸಿಪಿಐನ ಗಿರೀಶ್ 1697, ಪಕ್ಷೇತರ ಹಾಗೂ ಇತರೆ ಪಕ್ಷಗಳ ಅಭ್ಯರ್ಥಿಗಳಾದ ಬಿ.ಟಿ.ಓಬಳೇಶಪ್ಪ 628, ತಿಮ್ಮಕ್ಕ 220, ಪೇಮಕ್ಕ 106, ಅಂಬ್ರೋಸ್ ಡಿ ಮೆಲ್ಲೊ 123, ಎಂಎಲ್‍ಎ ಆರ್.ಕಂಬಣ್ಣ, 135, ಎಂ.ಗುರುಸಿದ್ದಪ್ಪ 175, ಜಯಣ್ಣ221, ಎಲ್.ಕೆ.ದೇವರಾಜು 578, ಜಿ.ಎಸ್.ನಾಗರಾಜ 436, ರಂಗಪ್ಪ 212 ಹಾಗೂ ಸಾಧಿಕ್‍ಪಾಷಾ 568 ಮತಗಳನ್ನು ಪಡೆದಿದ್ದು  643 ನೋಟಾ ಮತಗಳು ಚಲಾವಣೆಗೊಂಡಿದ್ದು 182 ಅಂಚೆ ಮತಗಳು ತಿರಸ್ಕøತಗೊಂಡಿವೆ.

      ಎಲ್ಲಾ ಸುತ್ತುಗಳ ಎಣಿಕೆಯಲ್ಲೂ ಬಿಜೆಪಿ ಮುಂದು :

      ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಾರಂಭವಾಗಿ ಮೊದಲ ಸುತ್ತಿನಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿರಿಸಲಾರಂಭಿಸಿತು. ಮೊದಲ ಸುತ್ತಿನ ಎಣಿಕೆಯಲ್ಲೇ ಬಿಜೆಪಿ ಅಭ್ಯರ್ಥಿ 2429 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿಗಿಂತ 795 ಮತಗಳ ಮುನ್ನಡೆ ಸಾಧಿಸಿ ನಿರಂತರತೆ ಕಾಯ್ದುಕೊಂಡರು. ಎರಡನೇ ಸುತ್ತಿನಲ್ಲಿ ಮುನ್ನಡೆ ಅಂತರ 942, ಮೂರನೇ ಸುತ್ತಿನಲ್ಲಿ 1303, ನಾಲ್ಕನೇ ಸುತ್ತಿನಲ್ಲಿ 1519, ಐದನೇ ಸುತ್ತಿನಲ್ಲಿ 1488, ಆರನೇ ಸುತ್ತಿನಲ್ಲಿ 1394, ಏಳನೇ ಸುತ್ತಿನಲ್ಲಿ 3325, ಎಂಟನೇ ಸುತ್ತಿನಲ್ಲಿ 3973, ಒಂಬತ್ತನೇ ಸುತ್ತಿನಲ್ಲಿ 4806, ಹತ್ತನೇ ಸುತ್ತಿನಲ್ಲಿ 5975, ಹನ್ನೊಂದನೇ ಸುತ್ತಿನಲ್ಲಿ 6895, ಹನ್ನೆರೆಡನೇ ಸುತ್ತಿನಲ್ಲಿ 7,870, ಹನ್ನೊಂದನೇ ಸುತ್ತಿನಲ್ಲಿ 6895, ಹನ್ನೆರಡನೇ ಸುತ್ತಿನಲ್ಲಿ 7870, ಹದಿಮೂರನೇ ಸುತ್ತಿನಲ್ಲಿ 8471, ಹದಿನಾಲ್ಕನೇ ಸುತ್ತಿನಲ್ಲಿ 3,142, ಹದಿನೈದನೇ ಸುತ್ತಿನಲ್ಲಿ 1765, ಹದಿನಾರನೇ ಸುತ್ತಿನಲ್ಲಿ 3,797, ಹದಿನೇಳನೇ ಸುತ್ತಿನಲ್ಲಿ 5403, ಹದಿನೆಂಟನೇ ಸುತ್ತಿನಲ್ಲಿ 7,184, ಹತ್ತೊಂಬತ್ತನೇ ಸುತ್ತಿನಲ್ಲಿ 8893, ಇಪ್ಪತ್ತನೇ ಸುತ್ತಿನಲ್ಲಿ 10,385 ಮತಗಳ ಅಂತರದ ಮುನ್ನಡೆ ಸಾಧಿಸಿದರು.

      14,15ನೇ ಸುತ್ತಿನ ಎಣಿಕೆಯಲ್ಲಿ ಕೈ ಕಮಾಲ್:

      ಇಪ್ಪತ್ತೊಂದನೇ ಸುತ್ತಿನಲ್ಲಿ 10,874, ಇಪ್ಪತ್ತೆರಡನೇ ಸುತ್ತಿನಲ್ಲಿ 11,760, ಇಪ್ಪತ್ಮೂರನೇ ಸುತ್ತಿನಲ್ಲಿ 12418, ಕಡೆಯ ಇಪ್ಪತ್ನಾಲ್ಕನೇ ಸುತ್ತಿನಲ್ಲಿ 12,949 ಇವಿಎಂ ಮತಗಳ ಅಂತರದೊಂದಿಗೆ ಜಯದ ನಗೆ ಬೀರಿದರು. 24 ಸುತ್ತುಗಳ ಎಣಿಕೆಯಲ್ಲಿ ಬಿಜೆಪಿ ಎಲ್ಲಾ ಸುತ್ತಗಳಲ್ಲೂ ಮುನ್ನಡೆ ಹೆಚ್ಚಿಸಿಕೊಳ್ಳುತ್ತಾ ಬಂದರೂ 13ನೇ ಸುತ್ತಿನಲ್ಲಿ 8471 ರಷ್ಟಿದ್ದ ಮುನ್ನಡೆ ಅಂತರ ಏಕಾಏಕಿ 14, 15ನೇ ಸುತ್ತಿನ ಎಣಿಕೆಯಲ್ಲಿ ಕ್ರಮವಾಗಿ 3,142, 1765ಕ್ಕೆ ಇಳಿಕೆಯಾಗಿ ಫಲಿತಾಂಶದ ತಿರುವು ಪಡೆಯುವ ಸಾಧ್ಯತೆಯ ನಿರೀಕ್ಷೆಯನ್ನು ಹುಟ್ಟಿಹಾಕಿತು. ನಂತರದ ಸುತ್ತುಗಳಲ್ಲಿ ನಿರಂತರ ಮುನ್ನಡೆ ಸಾಧಿಸಿದ್ದು ಜಯದ ಅಂತರ ಹೆಚ್ಚಳಕ್ಕೆ ಕಾರಣವಾಯಿತು.

 ಅಂಚೆ ಮತಗಳಲ್ಲೂ ಮುನ್ನಡೆ: 

      16 ಅಭ್ಯರ್ಥಿಗಳಿಗೆ ಚಲಾವಣೆಯಾದ 4826 ಅಂಚೆ ಮತಗಳಲ್ಲಿ ಪ್ರಮುಖವಾಗಿ ಬಿಜೆಪಿಗೆ 2,042, ಕಾಂಗ್ರೆಸ್‍ಗೆ 1577, ಜೆಡಿಎಸ್‍ಗೆ 801 , ಸಿಪಿಐ ಅಭ್ಯರ್ಥಿಗೆ 69 ಮತಗಳು ಸಂದಾಯವಾಗಿದೆ.

ಪ್ರಬಲ ಪೈಪೋಟಿಯೊಡ್ಡಿದ ಕಾಂಗ್ರೆಸ್, ಜೆಡಿಎಸ್ ಮತ ಕಿತ್ತ ಬಿಜೆಪಿ :

      2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದಷ್ಟೇ ಮತಗಳನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದು ಕಾಂಗ್ರೆಸ್ ಮತಗಳಲ್ಲಿ ಅಂತಹ ವ್ಯತ್ಯಯವಾಗದಿರುವುದು ಫಲಿತಾಂಶದಲ್ಲಿ ಗೋಚರವಾಗಿದೆ. ಆಗಲೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ.ಬಿ.ಜಯಚಂದ್ರ ಅವರು 63,973 ಮತಗಳನ್ನು ಪಡೆದಿದ್ದು, ಈ ಬಾರಿ ತ್ರೀವ್ರ ಹಣಾಹಣಿಯ ನಡುವೆಯೂ ಜಯಚಂದ್ರ ಅವರ ಕೆಲಸಗಳು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಭಾವ, ಜಿಲ್ಲೆಯ ಕೈನಾಯಕರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಎಸ್.ಪಿ.ಮುದ್ದಹನುಮೇಗೌಡ, ಬಿ.ಎನ್.ಚಂದ್ರಪ್ಪ, ಷಫಿ ಅಹಮದ್ ಮತ್ತಿತರ ನಾಯಕರ ಶ್ರಮದಿಂದ ಕಾಂಗ್ರೆಸ್ ಮತಗಳು ಚದುರಿಹೋಗುವುದು ತಪ್ಪಿ, ಉಪಚುನಾವಣೆಯಲ್ಲೂ 63,150 ಮತಗಳನ್ನು ಪಡೆದಿದ್ದಾರೆ. ಆದರೆ ಕಳೆದ ಬಾರಿ ಗೆಲುವು ಸಾಧಿಸಿದ್ದ ಜೆಡಿಎಸ್ ಮಾಜಿ ಸಚಿವ ಬಿ.ಸತ್ಯನಾರಾಯಣ 74,338 ಮತಗಳನ್ನು ಪಡೆದಿದ್ದರು. ಹಾಲಿ ಉಪಚುನಾವಣೆಯಲ್ಲಿ ದಿ.ಬಿ.ಸತ್ಯನಾರಾಯಣ ಅವರ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 36,783 ಮತಗಳನ್ನು ಪಡೆದಿದ್ದು, ಹಿಂದಿನ 37,555 ಮತಗಳು ಜೆಡಿಎಸ್ ಕೈ ತಪ್ಪಿ ಬಿಜೆಪಿ ಪಾಲಾಗಿದೆ. ಆದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್ಡಿಕೆ, ಮಾಜಿ ಸಚಿವ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಗೌರಿಶಂಕರ್, ಶ್ರೀನಿವಾಸ್ ಎಂಎಲ್ಸಿ ತಿಪ್ಪೇಸ್ವಾಮಿ, ಹಾಗೂ ಮಾಜಿ ಶಾಸಕರುಗಳು ಹಾಗೂ ಸ್ಥಳೀಯ ಮುಖಂಡರು ಜೆಡಿಎಸ್‍ಗೆ ಅಸ್ಥಿತ್ವದ ಮತಗಳಿಸಿಕೊಟ್ಟಿದ್ದಾರೆ.

ಪ್ರಮಾಣಪತ್ರ ಸ್ವೀಕಾರ:

      ಮಧ್ಯಾಹ್ನ 3ರ ಸಮಯಕ್ಕೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಗೆಲುವಿನ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಯಿಂದ ಸ್ವೀಕರಿಸಿದರು. ಸಂಸದ ನಾರಾಯಣಸ್ವಾಮಿ, ಶಾಸಕ ರೇಣುಕಾಚಾರ್ಯ ಮತ್ತಿತರ ನಾಯಕರು ಈವೇಳೆ ಸಾಥ್ ನೀಡಿದರು.

      ಎಣಿಕೆ ಕೇಂದ್ರದ ಹೊರಗಡೆ ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು. ಬಿಜೆಪಿರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿಲ್ಲಾಧ್ಯಕ್ಷ ಸುರೇಶ್‍ಗೌಡ ಅವರನ್ನು ಹೆಗಲಮೇಲೆ ಹೊತ್ತು ಕುಣಿದು ಸಂಭ್ರಮಿಸಿದರು.

 
ಬಿಜೆಪಿಯಲ್ಲಿ ಮರುಕಳಿಸಿದ ಲೋಕಸಭೆ ಫಲಿತಾಂಶದ ಇತಿಹಾಸ :

      ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‍ಗೌಡ ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಘೋಷಿಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ 2009ರ ಲೋಕಸಭೆ ಚುನಾವಣೆ ಇತಿಹಾಸವನ್ನು ನೆನಪಿಸುವಂತೆ ಮಾಡಿದೆ. 2009ರ ಲೋಕಸಭೆ ಚುನಾವಣೆ ಸಮಯಕ್ಕೆ ಕಾಂಗ್ರೆಸ್‍ನ ಮಾಜಿ ಸಂಸದರಾದ ಜಿ.ಎಸ್.ಬಸವರಾಜು ಅವರನ್ನು ಬಿಜೆಪಿ ಪಕ್ಷಕ್ಕೆ ಕರೆತಂದು ಎಸ್.ಮಲ್ಲಿಕಾರ್ಜುನಯ್ಯ ಅವರ ಬದಲಿಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಯುಪಿಎ ಸರಕಾರವಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ ಜಿಎಸ್ಬಿ ಗೆಲುವು ಸಾಧಿಸಿದ್ದರು. ಇದೇ ಕಾರ್ಯತಂತ್ರದ ಫಲಿತಾಂಶ ಸದ್ಯ ಶಿರಾ ಉಪಚುನಾವಣೆಯಲ್ಲೂ ಪುನರಾವರ್ತನೆಯಾಗಿದೆ.

ಫಲಿಸಿದ ವಿಜಯೇಂದ್ರ, ಡಿಸಿಎಂಗಳ ತಂತ್ರಗಾರಿಕೆ, ಸಂಘಟಿತ ಪ್ರಯತ್ನಕ್ಕೆ ಸಂದ ಜಯ :

      ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯಾಗಿದ್ದ ಶಿರಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದ್ದು, ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಪ್ರಥಮಸ್ಥಾನಕ್ಕೇರಿ ಇತಿಹಾಸ ಸೃಷ್ಟಿಸಿದೆ. ಕೆ.ಆರ್.ಪೇಟೆ ಮಾದರಿಯಲ್ಲಿ ಶಿರಾ ಕ್ಷೇತ್ರದ ಗೆಲುವಿಗೆ ಠಿಕಾಣಿ ಹೂಡಿ ಅಭ್ಯರ್ಥಿ ಗೆಲ್ಲಿಸಲು ತಂತ್ರ ಎಣೆದ ಸಿಎಂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಹಾಗೂ ಪಕ್ಷದ ರಾಜ್ಯ ಹಾಗೂ ಜಿಲ್ಲಾ ನಾಯಕರ ಸಂಘಟಿತ ಪ್ರಯತ್ನ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದು, ಮದಲೂರು ಕೆರೆಗೆ ಆರು ತಿಂಗಳಲ್ಲಿ ನೀರು ಹರಿಸುವುದಾಗಿ ಮುಖ್ಯಮಂತ್ರಿಗಳು ಕೊಟ್ಟ ವಾಗ್ದಾನ, ಕಾಡುಗೊಲ್ಲರ ಅಭಿವೃದ್ಧಿ ನಿಗಮದ ರಚನೆಯ ಸಂಗತಿಗಳು ಪಕ್ಷದ ಪರ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ ದಲಿತರ ಮತ ಸೆಳೆಯುವಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸಂಸದ ನಾರಾಯಣಸ್ವಾಮಿ ಮಾಡಿದ ಪ್ರಯತ್ನ, ಡಿಸಿಎಂಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸವದಿ ರಾಜ್ಯಾಧ್ಯಕ್ಷ ಕಟೀಲ್ ಎಂಎಲ್ಸಿ ಎನ್.ರವಿಕುಮಾರ್ ಅವರು ವಿವಿಧ ಜಾತಿ, ಧರ್ಮದ ನಾಯಕರನ್ನು ಸೆಳೆಯಲು ಅನುಸರಿಸಿದ ಸಂಘಟನಾತ್ಮಕ ಸ್ಮಾರ್ಟ್ ಕಾರ್ಯತಂತ್ರ, ಜಿಲ್ಲಾಧ್ಯಕ್ಷ ಸುರೇಶ್‍ಗೌಡ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಂ, ಬಿ.ಸಿ.ನಾಗೇಶ್, ಪ್ರೀತಂಗೌಡ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಮಾಜಿ ಸಚಿವ ಶಿವಣ್ಣ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸ್.ಆರ್.ಗೌಡ ಬಿ.ಕೆ.ಮಂಜುನಾಥ್, ಸ್ಥಳೀಯ ಬಿಜೆಪಿ ಮುಖಂಡರುಗಳ ಸಂಘಟಿತ ಪ್ರಯತ್ನದಿಂದಾಗಿ ಪಕ್ಷ ಗೆಲುವಿನ ನಗೆ ಬೀರುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap