ಇಂತಹ ವಿಚಿತ್ರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳಮಾಳ ಕೋಟೆ ಪೈಸಾರಿಯಲ್ಲಿ.
ಹೊಳಮಾಳ ಕೋಟೆ ಪೈಸಾರಿಯ 23 ವರ್ಷದ ಯುವಕ ಗಣೇಶ್ ಎಂಬಾತ ನಿಧಿ ಆಸೆಗಾಗಿ ತನ್ನ ಮನೆಯನ್ನು ನಿಗೂಢವಾಗಿ ಅಗೆಸಲು ಆರಂಭಿಸಿದ್ದ. ಮನೆಯಲ್ಲಿ ನಿಧಿ ಇದೆ ಎಂದು ಹೇಳಿದ್ದ ಕೇರಳದ ಮಾಂತ್ರಿಕರ ಮಾತು ಕೇಳಿದ್ದ ಗಣೇಶ್ ನಿಧಿ ಆಸೆಗಾಗಿ ತನ್ನ ಮನೆಯನ್ನೇ ಅಗೆಸಿದ್ದಾನೆ.15 ಅಡಿ ಅಗೆದಾಗ ಸಿಕ್ಕಿದ್ದು ನಿಧಿಯಲ್ಲ, ನೀರು..!
ವಾರದ ಹಿಂದೆ ಕೇರಳದಿಂದ ಇಬ್ಬರು ಮಾಂತ್ರಿಕರನ್ನು ಕರೆತಂದಿದ್ದ ಗಣೇಶ್ ಮಾಂತ್ರಿಕರಿಂದ ಮನೆಯಲ್ಲೇ ವಿವಿಧ ಪೂಜೆಗಳನ್ನು ನೆರವೇರಿಸಿ ಕೋಳಿ ಬಲಿ ನೀಡಿದ್ದ. ನಂತರ ಮನೆ ಬಾಗಿಲು ಹಾಕಿಕೊಂಡು ಯಾರಿಗೂ ಗೊತ್ತಾಗದಂತೆ ಮನೆಯ ಒಂದು ಕೋಣೆಯನ್ನು ಅಗೆಸಿದ್ದ.
ಬರೋಬ್ಬರಿ 15 ಅಡಿಗೂ ಹೆಚ್ಚು ಆಳದವರೆಗೆ ಗುಂಡಿ ತೋಡಿಸಿದ್ದ. ಗುಂಡಿಯಲ್ಲಿ ನಿಧಿ ಬದಲು ನೀರು ಬರಲು ಆರಂಭಿಸಿತ್ತು. ಅಷ್ಟು ಆಳದ ಗುಂಡಿ ತೆಗೆದರೂ ಏನೂ ದೊರೆತ್ತಿರಲಿಲ್ಲ.
ಹೀಗಾಗಿ ಮತ್ತೊಂದು ದೊಡ್ಡ ಬಲಿಯನ್ನು ಕೊಡಲು ಸಿದ್ಧವಾಗಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ತೆಗೆದ ಮಣ್ಣನ್ನು ಮನೆಯ ಮತ್ತೊಂದು ಕೊಠಡಿಯಲ್ಲಿ ಶೇಖರಿಸಿ ಇಡುತ್ತಿದ್ದ. ಮನೆಯೊಳಗೆ ಅಷ್ಟು ದೊಡ್ಡ ಗುಂಡಿ ತೆಗೆದಿದ್ದ ಪರಿಣಾಮ ಮನೆ ಬೀಳುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
ಕುಸಿಯುವ ಹಂತಕ್ಕೆ ತಲುಪಿದ ಮನೆ..!
ಇನ್ನೊಂದಷ್ಟು ಅಡಿಗಳ ಮಣ್ಣನ್ನು ತೆಗೆದಿದ್ದಲ್ಲಿ ಮನೆಯ ಒಂದು ಭಾಗ ಕುಸಿದು ಬೀಳುವ ಸಾಧ್ಯತೆ ಇತ್ತು ಎನ್ನಲಾಗಿದೆ. ಇದರಿಂದ ಮನೆಯಲ್ಲಿ ಇದ್ದವರೆ ಜೀವ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ವಾರದಿಂದ ಮನೆಯಲ್ಲಿ ಗುಂಡಿ ತೋಡುತ್ತಿದ್ದರು, ಈ ವಿಷಯ ಯಾರ ಗಮನಕ್ಕೂ ಬಾರದಂತೆ ಆರೋಪಿಗಳು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಆದರೆ ವಾರಾಂತ್ಯದ ಕರ್ಫ್ಯೂ ಜಾರಿ ಆಗಿದ್ದರಿಂದ ಜನರು ಮನೆಯಲ್ಲೇ ಉಳಿದಿದ್ದರಿಂದ ಊರವರಿಂದ ಮಾಹಿತಿ ಪೊಲೀಸರಿಗೆ ತಲುಪಿದೆ. ಖಚಿತ ಮಾಹಿತಿ ಆಧರಿಸಿದ ಕೊಡಗು ಡಿಸಿಐಬಿ ಮತ್ತು ಸಿದ್ದಾಪುರ ಪೊಲೀಸರು ಗಣೇಶ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.
ಮೂಢನಂಬಿಕೆಯಿಂದ ಜೈಲುಪಾಲಾದ ಯುವಕ
ಪೊಲೀಸರು ದಾಳಿ ಮಾಡಿ ಪ್ರಕರಣ ಭೇದಿಸಿರುವುದರಿಂದ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ದಾಳಿ ನಡೆಸಿದ ಡಿಸಿಐಬಿ ಪೊಲೀಸರು ಗಣೇಶ್ ಮನೆಯಲ್ಲಿ ನಿಧಿ ಶೋಧಿಸುತ್ತಿದ್ಧವರನ್ನು ಬಂಧಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮನೆ ಮಾಲೀಕ ಗಣೇಶ್ ಮತ್ತು ಕೇರಳದಿಂದ ಮಾಂತ್ರಿಕರನ್ನು ಕರೆತಂದಿದ್ದ ಉಡುಪಿಯ ಜಿಲ್ಲೆಯ ಸಾದಿಕ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನು ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಇಲ್ಲದ ನಿಧಿ ಆಸೆಗೆ ಮನೆ ಅಗೆಸಿ ಮನೆಯನ್ನು ನರಕ ಮಾಡಿ ತಾನು ಜೈಲುಪಾಲಾಗಿರೋದು ಆತನ ಮೂಢನಂಬಿಕೆಯ ಪರಮಾವಧಿಯೇ ಸರಿ.
ಇತ್ತೀಚೆಗೆ ಮೈಸೂರಿನ ನಂಜನಗೂಡಿನಲ್ಲಿ ಅಪ್ರಾಪ್ತ ಗೆಳಯರು ತಾತನಿಂದ ಕಲಿತ ವಾಮಾಚಾರ ಪ್ರಯೋಗಿಸಲು ಹೋಗಿ 16 ವರ್ಷದ ಬಾಲಕ ಬಲಿಯಾಗಿದ್ದ.