ವೀಳ್ಯದೆಲೆ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಯತ್ನ

ತುಮಕೂರು:

ಅಂತರಸನಹಳ್ಳಿಯ ಸಿದ್ದಿವಿನಾಯಕ ತರಕಾರಿ, ಹೂವು,ಹಣ್ಣು ಮತ್ತು ವಿಳೇದೆಲೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಅಧಿಕೃತವಾಗಿ ಪರವಾನಗಿ ಪಡೆದು, ವಿಳೇದೆಲೆ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರ ಒಕ್ಕಲಿಸಲು ಹೊರಟಿರುವುದರ ವಿರುದ್ದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ,ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಲಾಯಿತು.

ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ವಿಳೇದೆಲೆ ವ್ಯಾಪಾರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಎಪಿಎಂಸಿ ಮಾಜಿ ನಿರ್ದೇಶಕ ಧನಿಯಕುಮರ್,ಸುಮಾರು 3 ವಿಳೇದೆಲೆ ವ್ಯಾಪಾರಿಗಳು,

ನಗರದ ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿದ್ದ ಕೆ.ಆರ್. ಮಾರುಕಟ್ಟೆ,ಜೆ.ಸಿ.ರಸ್ತೆಯ ಸಿದ್ದವಿನಾಯಕ ಮಾರುಕಟ್ಟೆ ಹಾಗೂ ಅಂತರಸನಹಳ್ಳಿಯ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ.ಎಲ್ಲಾ ರೀತಿಯಿಂದ ತೆರಿಗೆ ಕಟ್ಟಿ, ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿರುವ ಇವರನ್ನು ಏಕಾಎಕಿ ಎತ್ತಂಗಡಿ ಮಾಡಲು ಹೊರಟಿರುವುದು ಸರಿಯಲ್ಲ ಎಂದರು.

ಅಂತರಸನಹಳ್ಳಿಯ ಶ್ರೀಸಿದ್ದಿವಿನಾಯಕ ಹಣ್ಣು, ತರಕಾರಿ, ಹೂವು ಮತ್ತು ವಿಳೇದೆಲೆ ಮಾರುಕಟ್ಟೆ ಆರಂಭದಲ್ಲಿ ಸುಮಾರು 33 ವಿಳೇದೆಲೆ ಮಾರಾಟಗಾರರಿಗೆ ಜಾಗ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಅಂದಿನ ಎಪಿಎಂಸಿ ಕಾರ್ಯದರ್ಶಿಗಳಾದ ಡಾ.ರಾಜಣ್ಣ ಅವರೊಂದಿಗೆ ಮಾತನಾಡಿ, ವ್ಯಾಪಾರಕ್ಕೆ ಜಾಗ ಕಲ್ಪಿಸುವಂತೆ ಒತ್ತಾಯಿಸಿದಾಗ,

ಮಾರುಕಟ್ಟೆಯ ಒಳಗೆ 10*12 ಅಳತೆಯಲ್ಲಿ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದ್ದರು. ವ್ಯಾಪಾರಸ್ಥರು ತಾವು ನಿರ್ಮಿಸಿಕೊಂಡ ಶೆಡ್‍ಗೆ ,ವಿದ್ಯುತ್ ಸಂಪರ್ಕ ಪಡೆದು ವ್ಯಾಪಾರ ನಡೆಸುತ್ತಾ ಬಂದಿದ್ದಾರೆ ಎಂದರು.

ಸದರಿ ವ್ಯಾಪಾರಿಗಳು ವಾರಕ್ಕೆ 620 ರೂ ತೆರಿಗೆಯನ್ನು ಕಟ್ಟುತ್ತಿದ್ದಾರೆ.ಹೀಗಿದ್ದೂ ಹೊಸ ಆಡಳಿತ ಮಂಡಳಿ, ಜನವರಿ 25ರಂದು ಯಾವುದೇ ನೊಟೀಸ್ ನೀಡದೆ,ವಿಳೇದೆಲೆ ವ್ಯಾಪಾರಿಗಳು ಜಾಗ ಮಾಡುವಂತೆ ಮೈಕ್‍ನಲ್ಲಿ ಅನೌನ್ಸ್ ಮಾಡಿರುವು ದಲ್ಲದೆ, ಜಾಗ ಬಿಟ್ಟು ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ.

ಇವರ ತಾತನ ಕಾಲದಿಂದಲೂ ವಿಳೇದೆಲೆ ಮಾರಿಯೇ ಜೀವನ ನಡೆಸುತ್ತಿರುವ ಇವರಿಗೆ ಬೇರೆ ಉದ್ಯೋಗ ಗೊತ್ತಿಲ್ಲ.ಈಗಾಗಲೇ ಎಪಿಎಂಸಿ ಸಚಿವರಿಗೆ, ಸ್ಥಳೀಯ ಶಾಸಕರು, ಸಂಸದರಿಗೂ ಮನವಿ ಸಲ್ಲಿಸಲಾಗಿದೆ.ಹಾಗಾಗಿ ಅವರಿಗೆ ಸದರಿ ಜಾಗದಲ್ಲಿಯೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

ವಿಳೇದೆಲೆ ವ್ಯಾಪಾರಿ ಚಿಕ್ಕರೇವಮ್ಮ,ರಾಜೇಶ್,ಗೀತ ಮಾತನಾಡಿ,ಎರಡು ರೂಪಾಯಿಯಿಂದ ಸುಂಕ ಕಟ್ಟಿಕೊಂಡು ವಿಳೇದೆಲೆ ವ್ಯಾಪಾರದಿಂದಲೇ ಜೀವನ ನಡೆಸುತ್ತಿದ್ದೇವೆ.ಈಗ ಏಕಾಎಕಿ ನಮ್ಮ ಶೆಡ್‍ಗಳಿಗೆ ಹಾಕಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಹೊರ ಹೋಗಿ ಎನ್ನುತಿದ್ದಾರೆ. ಜಿಲ್ಲಾಡಳಿತ ನಮ್ಮಗೆ ನ್ಯಾಯ ದೊರಕಿಸಬೇಕೆಂದರು.ನಮ್ಮ ಹಿರಿಯರು ಇದ್ದೇನೆ ನಂಬಿ ಬದುಕು ನಡೆಸುತ್ತಿದ್ದರು,ನಾವುಗಳು ಹಾಗೆಯೇ ಮುಂದುವರೆದಿದ್ದೇವೆ.

ಇಲ್ಲಿಂದ ಎತ್ತಿಸಿದರೆ ನಮಗೆ ಬದುಕಲು ಬೇರೆ ದಾರಿಯಿಲ್ಲ. ಮನೆಮಂದಿಯೆಲ್ಲಾ ಸೇರಿ ವಿಷ ಕುಡಿಯುವುದೊಂದೆ ಉಳಿದಿರೊದು.ಸಂಬಂಧಪಟ್ಟವರು ಗಮನಹರಿಸಿ,ನಮಗೆ ಆಗಿರುವ ತೊಂದರೆ ಯನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link