ತುಮಕೂರು :
ನಮ್ಮ ತುಮಕೂರನ್ನು ಸ್ವಚ್ಛವಾಗಿಡಿ, ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛತೆಯನ್ನು ಕಾಪಾಡಿ ಎಂದು ಮಹಾನಗರ ಪಾಲಿಕೆಯಿಂದ ಹಿಡಿದು ಜನಸಾಮಾನ್ಯರ ಬಾಯಲ್ಲಿ ಬರುತ್ತದೆಯೇ ಹೊರತು, ಅದನ್ನು ಯಾರು ಕಾರ್ಯಗತಮಾಡುವ ಯೋಚನೆ ಮಾಡುವುದೇ ಇಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಮರಳೂರು ಕೆರೆ.
ಹೌದು,,, ಶತಮಾನಗಳ ಇತಿಹಾಸ ಹೊಂದಿರುವ ಮರಳೂರು ಕೆರೆಯ ಇಂದಿನ ದುಃಸ್ಥಿತಿಯನ್ನು ನೋಡಿದರೆ ಪರಿಸರದ ಬಗ್ಗೆ ಕಾಳಜಿ ಉಳ್ಳ ಯಾರೇ ಆಗಿದ್ದರೂ ಕೂಡ ಒಂದು ಕ್ಷಣ ಮೌನವಾಗಿ ಬಿಡುತ್ತಾರೆ. ಅಷ್ಟರಮಟ್ಟಿಗೆ ಅಧ್ವಾನವಾಗಿದೆ ಈ ಮರಳೂರು ಕೆರೆ. ತುಮಕೂರು ನಗರದಿಂದ ಕುಣಿಗಲ್ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರೆ ಇದೆ ಕೆರೆಯ ಮೇಲೆ ಹಾದು ಹೋಗಿದ್ದು,
ಕೋಳಿ, ಮಾಂಸ, ಮೀನಿನ ತ್ಯಾಜ್ಯದಿಂದ ಹಿಡಿದು ಪ್ಲಾಸ್ಟಿಕ್ ಮನೆ ತ್ಯಾಜ್ಯದವರೆಗೆ ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಇನ್ನೂ ನಗರದ ಕೊಳಚೆ ನೀರಿನಿಂದ ಗಬ್ಬೆದ್ದು ನಾರುತ್ತಿದೆ. ಇದನ್ನು ನೋಡಿದರೆ ಇದೇನು ಕೆರೆಯೋ ಅಥವಾ ತ್ಯಾಜ್ಯವಿಲೇವಾರಿ ಘಟಕವೋ ಎಂದು ಭಾಸವಾಗುವುದು ಸುಳ್ಳಲ್ಲ.
ತುಮಕೂರು ಹೃದಯ ಭಾಗದಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆದಿದ್ದು, ನಗರದ ಹೊರಭಾಗದಲ್ಲಿರುವ ಐತಿಹಾಸಿಕ ಪ್ರದೇಶಗಳು, ಸ್ಮಾರಕಗಳ ಅಭಿವೃದ್ಧಿ ಮರೀಚಿಕೆಯಾಗಿದೆ. ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕಣ್ಮುಂದೆ ಕಾಣುವ ಅಮಾನಿಕೆರೆ ಮತ್ತು ಅಕ್ಕ-ತಂಗಿ ಕೆರೆಗಳ ಬೆಳವಣಿಗೆ ಬಿಟ್ಟರೆ ಮತ್ತಿನ್ಯಾವ ಪ್ರದೇಶಗಳು ಕೂಡ ಅವರ ಕಣ್ಣಿಗೆ ಕಾಣುವುದೇ ಇಲ್ಲ.
ಇನ್ನು ಈ ಬಾರಿ ಉತ್ತಮ ಮಳೆಯಾಗಿದ್ದು ಮರಳೂರು ಕೆರೆಗೆ ಅಲ್ಪ ಪ್ರಮಾಣದ ನೀರು ಹರಿದು ಬಂದಿದೆ. ಮಾತ್ರವಲ್ಲದೆ ನಗರದಲ್ಲಿನ ಕೊಳಚೆ ನೀರು ಕೂಡ ಸೇರಿ, ಕೆರೆ ತುಂಬಿದ ಹಾಗೆ ಕಂಡುಬರುತ್ತಿದೆ. ಒಂದುಕಡೆ ಸೀಮೆ ಜಾಲಿ ಗಿಡ, ಜೊಂಡು ಹುಲ್ಲು ಬೆಳೆದಿದ್ದರೆ.
ಮತ್ತೊಂದು ಕಡೆ ಕೊಳಚೆ ನೀರಿನಿಂದಾಗಿ ಸಾಲ್ವೇನಿಯ ಎಂಬ ಗಿಡಗಳು ಇಡೀ ಕೆರೆಯನ್ನು ಆವರಿಸಿವೆ. ಇದನ್ನೇ ಬಂಡವಾಳ ಮಾಡಿಕೊಂಡ ನಗರದ ಅನಾಗರಿಕರು ಇದಕ್ಕೆ ತ್ಯಾಜ್ಯವನ್ನು ತಂದು ಎಳೆಯುತ್ತಿರುವುದು, ಅದನ್ನು ನೋಡಿಕೊಂಡು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಕಣ್ಮುಚ್ಚಿ ಕುಳಿತಿರುವುದು ಬೇಜವಾಬ್ದಾರಿತನ ಪರಮಾವದಿ.
ಇಷ್ಟು ಮಾತ್ರವಲ್ಲದೆ ನೂರಾರು ಎಕರೆ ಪ್ರದೇಶಗಳ ಮರಳೂರು ಕೆರೆಯು ಒತ್ತುವರಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಪಾಲಿಕೆ ಬಜೆಟ್ ನಲ್ಲಿ ನಗರದಲ್ಲಿರುವ ಕೆರೆಕಟ್ಟೆಗಳ ಅಭಿವೃದ್ಧಿಗೆ ಹಣವನ್ನು ಮೀಸಲಿರಿಸಿ ಅವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಜ್ಜೆ ಹಾಕಿದರೆ ನಗರ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಐತಿಹಾಸಿಕ ಪ್ರದೇಶಗಳು ಕಣ್ಮರೆಯಾಗುವುದು ತಪ್ಪುತ್ತದೆ.
ಮಧ್ಯ ಏಷ್ಯಾ, ಯುರೋಪ್, ಮಧ್ಯ ಯುರೋಪ್, ಅಮೆರಿಕ, ಮಂಗೋಲಿಯಾ, ಸೈಬೀರಿಯಾ, ಉತ್ತರ ಹಿಮಾಲಯ, ಪರ್ವತದಲ್ಲಿ ನವಂಬರ್ ಡಿಸೆಂಬರ್ ಮತ್ತು ಜನವರಿ, ಫೆಬ್ರುವರಿ ತಿಂಗಳುಗಳಲ್ಲಿ ತುಮಕೂರಿನ ಹಲವಾರು ಕೆರೆ-ಕಟ್ಟೆಗಳಿಗೆ ಪಕ್ಷಿಗಳು ವಲಸೆ ಬರುತ್ತವೆ.
ಹಿಂದೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಂತಹ ಪಕ್ಷಿಗಳು ಇಂದು ಕೇವಲ ನೂರರ ಸಂಖ್ಯೆಗೆ ಇಳಿದಿದೆ. ಇದಕ್ಕೆ ಕಾರಣ ಜಲಮೂಲಗಳ ನಾಶ, ಸ್ಥಿತಿಗತಿಗಳ ಬದಲಾವಣೆ ಇವೆಲ್ಲದರ ಪರಿಣಾಮ ಪಕ್ಷಿಗಳ ಜೀವನದ ಮೇಲೆ ಬೀರಿದೆ.

ಈ ಬಗ್ಗೆ ಮಾತನಾಡಿದ ಪರಿಸರವಾದಿ ಬಿ ವಿ ಗುಂಡಪ್ಪ ಅವರು, ತುಮಕೂರು ನಗರದಲ್ಲಿನ ಘನತ್ಯಾಜ್ಯಗಳ ಮತ್ತು ಚರಂಡಿ ನೀರನ್ನು ಜಲಮೂಲಗಳಿಗೆ ಹರಿಸುವುದರಿಂದ ಸಂಪೂರ್ಣವಾಗಿ ಹಾಳಾಗುತ್ತಿದೆ. ಸಿಮೆಂಟಿನ ಉಳಿಕೆ ಪದಾರ್ಥಗಳು, ಪ್ಲಾಸ್ಟಿಕ್ಕಿನ ಪದಾರ್ಥಗಳು ಮನೆಬಳಕೆಯ ಹಲವಾರು ವಸ್ತುಗಳ ರಾಸಾಯನಿಕಗಳು ಕೆರೆಕಟ್ಟೆಗಳಲ್ಲಿ ಇರುವಂತಹ ಜೀವಸಂಕುಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಐತಿಹಾಸಿಕ ಮರಳೂರು ಕೆರೆಯನ್ನು ಉಳಿಸುವ ಸಲುವಾಗಿ ಕೆರೆಯ ಸುತ್ತಲೂ ಫೆನ್ಸಿಂಗ್ ಅಳವಡಿಸಬೇಕು. ಜೊತೆಗೆ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಂತಹ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಬೇಕು ಎಂದು ಸ್ಥಳೀಯರು ಮತ್ತು ಪರಿಸರವಾದಿಗಳು ಒತ್ತಾಯ ಮಾಡಿದ್ದಾರೆ.
ಘನ ತ್ಯಾಜ್ಯಗಳನ್ನು ಕೆರೆಕಟ್ಟೆಗಳಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ನೀರಿನಲ್ಲಿ ಯೂಟೋಫಿಕೇಷನ್ ನಡೆಯುತ್ತದೆ. ಇದರಿಂದಾಗಿ ಅದರಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಸಸ್ಯಗಳು ಹಾಳಾಗಿ, ಜಲ ಚರಗಳ ಮೇಲೆ ಪರಿಣಾಮ ಬೀರುತ್ತದೆ. ಜಲಮೂಲಗಳನ್ನು ಹಾಳು ಮಾಡಿದರೆ ಕೇವಲ ಮಾನವರಿಗೆ ಮಾತ್ರವಲ್ಲ ಅಲ್ಲಿರುವ ಜಲಚರ ಪ್ರಾಣಿ ಪಕ್ಷಿಗಳಿಗೂ ಕೂಡ ಪರಿಣಾಮ ಬೀರುತ್ತದೆ.
ಬಿ ವಿ ಗುಂಡಪ್ಪ, ಪರಿಸರವಾದಿ
- ಮಂಜುನಾಥ್ ಹೆಚ್ ಆರ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








