ಬೆಂಗಳೂರು:
ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ರಸಗೊಬ್ಬರಕ್ಕಾಗಿ ರೈತರು ಓಡಾಡುತ್ತಿದ್ದಾರೆ. ನಿತ್ಯ ಇದಕ್ಕಾಗಿ ಅಲೆಯುತ್ತಿದ್ದಾರೆ. ಈ ಸಮಯದಲ್ಲಿ 50 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ ಎಂಬ ಕೃಷಿ ಸಚಿವರ ಹೇಳಿಕೆ ಅಚ್ಚರಿ ಮೂಡಿಸಿದೆ. ಸುಮಾರು ಒಂದು ತಿಂಗಳಿಂದ ರಸಗೊಬ್ಬರಕ್ಕಾಗಿ ಪರದಾಡುತ್ತಿರುವ ರೈತರು, ನೆರೆಹೊರೆ ಜಿಲ್ಲೆಗಳಿಗೂ ಇದಕ್ಕಾಗಿ ದಾಂಗುಡಿ ಇಡುತ್ತಿದ್ದಾರೆ. ಪ್ರತಿಯೊಂದು ಬೆಳೆಗೂ ಅಗತ್ಯವಾಗಿ ಬೇಕಿರುವ ಡಿಎಪಿ ರಸಗೊಬ್ಬರಕ್ಕಾಗಿ ಅತ್ತಿತ್ತ ಪರದಾಡುತ್ತಿರುವ ಜತೆಗೆ, ಸಂಬಂಧಪಟ್ಟವರ ಬಳಿ ಈ ಸಮಸ್ಯೆ ಹೇಳಿದರೂ ಪ್ರಯೋಜನವಾಗದೆ ದಿಕ್ಕು ತೋಚದಂತಾಗಿದ್ದಾರೆ.
ಹಣ್ಣು, ತರಕಾರಿ ಬೆಳೆಗಳನ್ನು ಯತೇಚ್ಛವಾಗಿ ಬೆಳೆಯುವ ಚಿಕ್ಕಬಳ್ಳಾಪುರ ಮಾತ್ರವಲ್ಲದೆ, ಇತರೆ ಜಿಲ್ಲೆಗಳಲ್ಲೂ ರಸಗೊಬ್ಬರದ ಕೊರತೆ ರೈತರನ್ನು ಕಾಡುತ್ತಿದೆ. 50 ಕೆಜಿ ಡಿಎಪಿ ಬೆಲೆ 1200 ರೂ. ಇತ್ತು. ಈಗ 1900ರೂ.ಗೆ ಹೆಚ್ಚಳವಾಗಿದೆ. 1300 ರೂ. ಇದ್ದ 20-20 ಗೊಬ್ಬರ ಬೆಲೆ 1400ರೂ.ಗೆ, 1300ರೂ. ಇದ್ದ ಮಂಗಳ 1470ರೂ.ಗೆ ಏರಿಕೆಯಾಗಿದೆ. ಬೆಲೆ ಹೆಚ್ಚಾದರೂ, ಬೆಳೆಗಾಗಿ ಖರೀದಿಸಲು ಮುಂದಾದರೆ, ಅದು ಸಿಗದಂತಾಗಿದೆ. ಯೂರಿಯಾ ಪರಿಸ್ಥಿತಿಯೂ ಇದೆ ಆಗಿದೆ. ಯೂರಿಯಾ ಕೇಳಿದರೆ, ಜಿಪ್ಸನ್, 25ಕೆಜಿ 2600ರಿಂದ 3000ರೂ.ಗೆ ಮಾರಾಟ ಮಾಡುವ ವಾಡರ್ ಸಲ್ಯೂಷನ್ ಖರೀದಿಸುವಂತೆ ಮಾರಾಟಗಾರರು ಒತ್ತಡ ಹೇರುತ್ತಿರುವುದಾಗಿ ದೂರು ವ್ಯಕ್ತವಾಗಿದೆ. ಇನ್ನು ಕ್ರಿಮಿನಾಶಕಗಳು ಕೈಗೆಟುಕದಷ್ಟು ದುಬಾರಿಯಾಗಿದೆ. ಆಂಧ್ರಪ್ರದೇಶ ಮತ್ತಿತರೆಡೆಯಿಂದ ಪೂರೈಕೆ ಆಗುತ್ತಿರುವ ನಕಲಿ ಕ್ರಿಮಿನಾಶಕವನ್ನು ಖರೀದಿಸಿ ರೈತರು ಮೋಸ ಹೋಗುತ್ತಿದ್ದಾರೆ.
ಬೆಳೆ ಬೆಳೆಯಲು ಅತ್ಯಗತ್ಯವಾದ ರಸಗೊಬ್ಬರ ಸೇರಿದಂತೆ ಇತರೆ ಸಾಮಗ್ರಿಗಳಿಗಾಗಿ ಪರದಾಡುತ್ತಿರುವ ಈ ಸಮಯದಲ್ಲಿ ತಮ್ಮ ಇಲಾಖೆ ಸಾಧನೆ ಹೇಳಿಕೊಳ್ಳುವ ಭರದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ನೀಡಿರುವ `ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ. 50 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಈ ವರ್ಷಕ್ಕಾಗಿ ನಾವು ದಾಸ್ತಾನು ಮಾಡಿದ್ದೇವೆ. ಯೂರಿಯಾ 30 ಸಾವಿರ ಮೆ.ಟನ್ ಇದ್ದು, ಡಿಎಪಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ’ ಎಂಬ ಹೇಳಿಕೆ ರೈತರನ್ನು ತಬ್ಬಿಬ್ಬಾಗಿಸಿದೆ.
ಖದ್ದು ಪರಿಶೀಲಿಸಿ:
ಅಧಿಕಾರಿಗಳು ನೀಡಿರುವ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. ಸಚಿವರು ಖುದ್ದು ಪರಿಶೀಲಿಸಿದರೆ, ವಾಸ್ತವಾಂಶ ಅರಿವಾಗಲಿದೆ. ಒಂದುವೇಳೆ ದಾಸ್ತಾನು ಇದ್ದು, ಅದು ಗೋದಾಮಿನಲ್ಲಿದ್ದರೆ ಪ್ರಯೋಜನವೇನು ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ಬೇಸಿಗೆ ಕಾಲದಲ್ಲಿ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಅಗತ್ಯ ಇರುವುದಿಲ್ಲ. ಇಂತಹ ಸಂದರ್ಭದಲ್ಲೂ ರಸಗೊಬ್ಬರಕ್ಕಾಗಿ ಪರದಾಡುವಂತಾದರೆ, ಪರಿಸ್ಥಿತಿಯನ್ನು ಸಚಿವರು ಅವಲೋಕಿಸಬೇಕು. ರಸಗೊಬ್ಬರ ರೈತರಿಗೆ ಕೈಗೆಟಕುವಂತೆ ಕ್ರಮ ವಹಿಸಬೇಕು ಎಂಬ ಒತ್ತಾಯ ಹೆಚ್ಚಿದೆ.
ಸುಮಾರು ಒಂದು ತಿಂಗಳಿಂದ ರಸಗೊಬ್ಬರ ದೊರಕುತ್ತಿಲ್ಲ. ಯೂರಿಯಾ ಪೂರೈಕೆ ಆಗುತ್ತಿಲ್ಲ. ಕ್ರಿಮಿನಾಶಕ ಕೈಗೆಟುಕದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ರಸಗೊಬ್ಬರು ದಾಸ್ತಾನಿದೆ, ಯಾವುದೆ ಕೊರತೆ ಇಲ್ಲ ಎಂದು ಕೃಷಿ ಸಚಿವರು ನೀಡಿರುವ ಹೇಳಿಕೆ ಸರಿಯಲ್ಲ. ವಾಸ್ತವಾಂಶವನ್ನು ಖದ್ದು ತಿಳಿಯಬೇಕು. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.
-ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ