ಬೆಂಗಳೂರು
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಅನುಭವ ಹೆಚ್ಚಿದ್ದು, ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಆಡಳಿತ ಅನುಭವ ಇದೆ. ಕಳೆದ ಬಾರಿಯಂತೆ ಈ ಬಾರಿಯೂ ಸರಾಗವಾಗಿ ಆಡಳಿತ ನಡೆಯಲಿದೆ. ಅವರ ಕಾರ್ಯಕ್ರಮ ಕಾರ್ಯವೈಖರಿಯೇ ಮತ್ತೆ ರಿಪೀಟ್ ಆಗಲಿದೆ ಎಂದರು. ಸಿದ್ದರಾಮಯ್ಯ ಅವರಿಂದ ರಾಜ್ಯದ ಜನ ಮತ್ತು ಪಕ್ಷಕ್ಕೆ ಅನುಕೂಲವಾಗುವ ವಿಶ್ವಾಸವಿದೆ.
ಸೀಕ್ರೆಟ್ ಬ್ಯಾಲೆಟ್ ಮಾನದಂಡದ ಮೇಲೆ ಸಿದ್ದರಾಮಯ್ಯ ಆಯ್ಕೆ ನಡೆದಿದೆ. ಡಿಕೆ ಶಿವಕುಮಾರ್ ಡಿಸಿಎಂ ಆಗಬಹುದೂ ಅಥವಾ ಇಲ್ಲದೇ ಇರಬಹುದು. ನಾವೆಲ್ಲ ಅಧಿಕಾರ ಇರಲಿ ಇಲ್ಲದೇ ಇರಲಿ ಪಕ್ಷಕ್ಕಾಗಿ ದುಡಿಯುತ್ತೇವೆ. ಅಂತೆಯೇ ಲೋಕಸಭೆ ಚುನಾವಣೆ ಕೂಡ ಮಾಡುತ್ತೇವೆ ಎಂದರು.
ತಮಗೂ ಕೂಡ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸುತ್ತೇನೆ. ಬೇರೆ ಸಮುದಾಯಕ್ಕೆ ಡಿಸಿಎಂ ಹುದ್ದೆ ಕೊಟ್ಟರೆ ನಾನು ಕೂಡ ಪಕ್ಷವನ್ನು ಕೇಳುತ್ತೇನೆ. ವೈಯಕ್ತಿಕವಾಗಿ ಡಿಸಿಎಂ ಬೇಡ, ಸಚಿವನಾಗಿಯೇ ಇರುತ್ತೇನೆ. ಡಿ.ಕೆ. ಶಿವಕುಮಾರ್ ಕೆಲಸ ಕೊಡುಗೆ ಬಹಳ ಇದೆ. ಅವರ ಮಧ್ಯೆ ಸಮಾಧಾನಕರ ರೀತಿಯಲ್ಲೇ ಸಂಧಾನ ಆಗಿದೆ. ಒಬ್ಬರೇ ಸಿಎಂ-ಡಿಸಿಎಂ ಇದ್ದರೆ ಒಳ್ಳೆಯದು ಎಂದು ಸತೀಶ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








