ಪೆಟ್ರೋಲ್‌ ಹಾಕುವಾಗ ಬಾಟಲ್‌ ಸ್ಪೋಟ : ಬಾಲಕಿ ಸಾವು…..!

ತುಮಕೂರು:

   ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

   ಕಟ್ಟಿಗೆಹಳ್ಳಿ ಗ್ರಾಮದ ವಿದ್ಯಾರ್ಥಿನಿ ಸೌಂದರ್ಯ (16) ಮೃತ ದುರ್ದೈವಿ. ಯಡಿಯೂರು ಹೋಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮೊಂಬತ್ತಿ ಬೆಳಕಿನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕುವಾಗ ಪೆಟ್ರೊಲ್‌ ಬಾಟಲ್‌ ಕೈತಪ್ಪಿ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸೌಂದರ್ಯ ಭಾನುವಾರ ಮೃತಪಟ್ಟಿದ್ದಾರೆ.

   ಗ್ರಾಮದ ಲಕ್ಷ್ಮಣ ಎಂಬುವರ ಮಗಳು ಸೌಂದರ್ಯ ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿದ್ದರು.

   ಶುಕ್ರವಾರ ರಾತ್ರಿ ಮನೆಯ ಅಂಗಡಿಯಲ್ಲಿ ವಿದ್ಯುತ್ ಇಲ್ಲದಾಗ ಮೊಂಬತ್ತಿ ಹಚ್ಚಿ ಇಡಲಾಗಿತ್ತು. ಎದುರಿನಲ್ಲಿಯೇ ಬೈಕ್‌ಗೆ ಪೆಟ್ರೋಲ್ ಹಾಕುತ್ತಿದ್ದರು, ಈ ವೇಳೆ ಕರೆಂಟ್ ಬಂದಿದೆ,  ಇದರಿಂದ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿ ಕೈ ಬಿಟ್ಟ ಕಾರಣ ಪೆಟ್ರೋಲ್ ಚೆಲ್ಲಿ ಮೇಣದಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಅಂಗಡಿ ಸಾಮಗ್ರಿ ಆಹುತಿಯಾಗಿತ್ತು.

    ಗಾಯಗೊಂಡಿದ್ದ ಸೌಂದರ್ಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ