ಬೆಂಗಳೂರು:
ಮಹಾಮಾರಿ ಡೆಂಗ್ಯೂ ಜ್ವರದಿಂದ ಸಾವು-ನೋವು ರಾಜ್ಯಾದ್ಯಂತ ಹೆಚ್ಚಾಗುತ್ತಿದೆ. ನಿನ್ನೆ ಮೈಸೂರಿನಲ್ಲಿ ಆರೋಗ್ಯಾಧಿಕಾರಿಯೇ ಮೃತಪಟ್ಟ ಬೆನ್ನಲ್ಲೇ ಹಾಸನದಲ್ಲಿ 8 ವರ್ಷದ ಬಾಲಕಿ ಸಮೃದ್ಧಿ ಮೃತಪಟ್ಟಿದ್ದಾಳೆ. ಈಡಿಪಸ್ ಸೊಳ್ಳೆಗಳಿಂದ ಹರಡುತ್ತಿರುವ ಡೆಂಗ್ಯೂ ಜನರನ್ನು ಹೈರಾಣಾಗಿಸುತ್ತಿದೆ. ನಿನ್ನೆ ಮೈಸೂರಿನಲ್ಲಿ ಸಮುದಾಯ ಆರೋಗ್ಯಾಧಿಕಾರಿಯೇ ಸೋಂಕಿಗೆ ಬಲಿಯಾಗಿದ್ದಾರೆ. ಹುಣಸೂರು ಆರೋಗ್ಯಾಧಿಕಾರಿ ನಾಗೇಂದ್ರ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಹಾಸನದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
ಹಾಸನ ಜಿಲ್ಲೆಯಲ್ಲಿ ಮಕ್ಕಳು ಡೆಂಗ್ಯೂಗೆ ಬಲಿಯಾಗುತ್ತಿದ್ದಾರೆ. ಕಳೆದೊಂದು ವಾರದಲ್ಲಿ, ಹೊಳೆನರಸೀಪುರದ ಇಬ್ಬರು ಮಕ್ಕಳು, ಅರಕಲಗೂಡಿನಲ್ಲಿ ಮಗುವೊಂದು ಡೆಂಗ್ಯೂವಿನಿಂದ ಪ್ರಾಣ ಕಳೆದುಕೊಂಡಿದೆ. ಹಿಮ್ಸ್ನಲ್ಲಿ 37 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, 8 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಡೆಂಗ್ಯೂ ಮೊದಲ ಬಲಿ ಪಡೆದಿದೆ. ಅಂಕೋಲದ ಬಾವಿಕೇರಿ ನಿವಾಸಿ ಹರೇರಾಮ್ ಗೋಪಾಲ್ ಭಟ್, ವಾರದಿಂದ ಬೆಳಗಾವಿ ಆಸ್ಪತ್ರೆಯಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದವರು ಮೃತಪಟ್ಟಿದ್ದಾರೆ.
ಡೆಂಗ್ಯೂ ಪ್ರಕರಣಗಳ ಏರಿಕೆ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಿಸಿ ಹಾಗೂ ಡಿಹೆಚ್ಓಗಳ ಜೊತೆ ವಿಧಾನಸೌಧದಲ್ಲಿ ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಜಿಲ್ಲಾಡಳಿತ, ತಾಲೂಕು, ಪಂಚಾಯ್ತಿ ಅಧಿಕಾರಿಗಳು ಡೆಂಗ್ಯೂ ನಿಯಂತ್ರಿಸಲು ಶ್ರಮ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.