ಮಂಗಳೂರು
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರಿನಲ್ಲಿ ಕೂಡ ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ಮಳೆಯಾಗುವ ನಿರೀಕ್ಷೆ ಇದೆ. ರಾಜಧಾನಿಯ ಹೆಚ್ ಎಎಲ್ನಲ್ಲಿ 29.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಿಗೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನದಿ ಮತ್ತು ಸಮುದ್ರ ತೀರದ ಜನರಿಗೆ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.
ಆರೆಂಜ್ ಅಲರ್ಟ್:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆಯಿಂದ 18 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನಲೆ ಹೆಚ್ಚು ಮಳೆಯಾಗಲಿರುವ ನಿರೀಕ್ಷೆಯಿಂದ ದಕ್ಷಿಣ ಕನ್ನಡದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ನೀರು ಇರುವ ತಗ್ಗು ಪ್ರದೇಶ, ಕರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀವ ಹೋಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸಂಭಾವ್ಯ ಹಾನಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶಗಳಿಂದ ದೂರವಿದ್ದು, ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಲು ಹೇಳಲಾಗಿದೆ.
ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ನಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡುವುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತಗಳು ಸಂಭಾವ್ಯ ಪರಿಣಾಮಗಳನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಾರಂಭಿಸಿವೆ. ನಿವಾಸಿಗಳು ಮನೆಯೊಳಗೆ ಇರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಒತ್ತಾಯಿಸಲಾಗಿದೆ. ಭಾರೀ ಮಳೆಯಿಂದ ಉಂಟಾಗುವ ಯಾವುದೇ ಘಟನೆಗಳಿಗೆ ಸ್ಪಂದಿಸಲು ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ವೈದ್ಯಕೀಯ ತಂಡಗಳು ಸೇರಿದಂತೆ ತುರ್ತು ಸೇವೆಗಳು ಹೆಚ್ಚಿನ ಸಿದ್ಧತೆ ಮಾಡಿಕೊಂಡಿವೆ.