ಜೈಪುರ
ಜೈಪುರ್‍ನ ಸವಾಯ್ ಮಾನ್‍ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‍ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಕ್ರಿಸ್ ಗೇಯ್ಲ್ ಅವರ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್‍ಗೆ 185 ರನ್‍ಗಳ ಗುರಿ ನೀಡಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಧಾನಗತಿ ಆರಂಭ ಪಡೆದರೂ 20 ಓವರಿನಲ್ಲಿ ಹೆಚ್ಚಿನ ಮೊತ್ತ ಪೇರಿಸುವಲ್ಲಿ ಯಶಸ್ಸು ಪಡೆದರು. ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಅರ್ಧ ಶತಕ ಬಾರಿಸಿ ತಂಡ ಮೊತ್ತವನ್ನು ಉಬ್ಬಿಸಿದರು. ಕ್ರಿಸ್ ಗೇಯ್ಲ್ 47 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ನೆರವಿನಿಂದ 79 ರನ್ ಗಳಿಸಿದರು.
ಕರ್ನಾಟಕದ ಸ್ಫೋಟಕ ದಾಂಡಿಗ ಕೆಎಲ್ ರಾಹುಲ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಮಯಾಂಕ್ ಅಗರ್‍ವಾಲ್ (22) ಗೇಯ್ಲ್ ತಂಡಕ್ಕೆ ಆಸರೆಯಾದರು. ಮಯಾಂಕ್ ಔಟಾದ ನಂತರ ಬಂದ ಸರ್‍ಫ್ರಾಜ್ ಖಾನ್ ಗೇಯ್ಲ್‍ಗೆ ಸಾಥ್ ನೀಡಿದರು. ಸರ್‍ಫ್ರಾಜ್ ಖಾನ್ ಕೊನೆಯವರೆಗೂ ಬ್ಯಾಟ್ ಮಾಡಿ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು.
ವಿಂಡೀಸ್‍ನ ದೈತ್ಯ ಬ್ಯಾಟ್ಸ್‍ಮನ್ ಕ್ರಿಸ್ ಗೇಯ್ಲ್ ಕೂಡ ಆರಂಭದಲ್ಲಿ ಅಬ್ಬರಿಸಲಿಲ್ಲ. ರಾಜಸ್ಥಾನ ರಾಯಲ್ಸ್‍ನ ಬೌಲಿಂಗ್ ದಾಳಿ ಎದುರು ಪಂಜಾಬ್ ಮಂಕಾಗಿತ್ತು. ಆದರೆ ನಂತರ ಚಿಗುರಿಕೊಂಡ ಗೇಯ್ಲ್ ಎದುರಾಳಿ ಬೌಲರ್‍ಗಳನ್ನು ಬೆಚ್ಚಿಬೀಳಿಸಿತ್ತು.
ರಾಜಸ್ಥಾನ ಪರ ಬೆನ್ ಸ್ಟೋಕ್ಸ್ 2, ಧವಲ್ ಕುಲಕರ್ಣಿ, ಕೃಷ್ಣಪ್ಪ ಗೌತಮ್ ತಲಾ 1 ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ (ಸಿ), ಜೋಸ್ ಬಟ್ಲರ್ (ವಿಕೆ), ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಕೃಷ್ಣಪ್ಪ ಗೌತಮ್, ರಾಹುಲ್ ತ್ರಿಪಾಠಿ, ಶ್ರೀಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಧವಾಲ್ ಕುಲಕರ್ಣಿ.
ಕಿಂಗ್ಸ್ ಇಲೆವೆನ್ ಪಂಜಾಬ್
ಕ್ರಿಸ್ ಗೇಲ್, ಲೋಕೇಶ್ ರಾಹುಲ್ (ವಿಕೆ), ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ನಿಕೋಲಸ್ ಪೂರಾನ್, ಮನ್ದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ಸಿ), ಮೊಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್, ಅಂಕಿತ್ ರಜಪೂತ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
